
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ರಾಜಕಾರಣ ಬೂದಿ ಮುಚ್ಚಿದ ಕೆಂಡದಂತಿದೆ. ಎಲ್ಲ ನಾಯಕರ ಮಧ್ಯೆಯೂ ಅಲ್ಪಸ್ವಲ್ಪ ಭಿನ್ನಾಭಿಪ್ರಾಯಗಳಿದ್ದರೂ ರಮೇಶ ಜಾರಕಿಹೊಳಿ ವಿಷಯದಲ್ಲಿ ಎಲ್ಲರೂ ಒಂದಾಗಿ ನಿಂತಿದ್ದು, ಹೈಕಮಾಂಡ್ ಮಟ್ಟಕ್ಕೆ ದೂರು ಕೊಂಡೊಯ್ದಿದ್ದಾರೆ.
ಈ ಹಿನ್ನೆಲೆಯಲ್ಲೇ ಕರ್ನಾಟಕ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಭಾನುವಾರ ಇಡೀ ದಿನ ಬೆಳಗಾವಿಯಲ್ಲಿದ್ದು ವಸ್ತುಸ್ಥಿತಿ ಅರಿಯುವ ಪ್ರಯತ್ನ ಮಾಡಿ ತೆರಳಿದ್ದಾರೆ.
ರಮೇಶ ಜಾರಕಿಹೊಳಿ ಗೋಕಾಕ ಕ್ಷೇತ್ರ ಬಿಟ್ಟು ಇತರ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಾಲಿ ಬಿಜೆಪಿ ಶಾಸಕರಿರುವ ಕ್ಷೇತ್ರದಲ್ಲೂ ನೀವೇ ಅಭ್ಯರ್ಥಿ ಎಂದು ಬೇರೆಯವರನ್ನು ಎತ್ತಿಕಟ್ಟುತ್ತಿದ್ದಾರೆ. ಇದರಿಂದಾಗಿ ಸಂಘಟನೆ ಹಾಳಾಗುತ್ತಿದೆ. ಜೊತೆಗೆ ಪಕ್ಷ ಒಡೆಯಲು ಕಾರಣವಾಗುತ್ತಿದೆ ಎನ್ನುವುದು ಶಾಸಕರು ಮತ್ತು ಸಂಸದರ ದೂರು.
ಧರ್ಮೇಂದ್ರ ಪ್ರದಾನ್ ಜಿಲ್ಲೆಯ ಆಯ್ದ ಶಾಸಕರು ಮತ್ತು ಆಯ್ದ ಸಂಸದರ ಜೊತೆ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾ ಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಪಿ.ರಾಜೀವ, ಅಭಯ ಪಾಟೀಲ ಇವರೆಲ್ಲರ ಅಸಮಾಧಾನ ರಮೇಶ ಜಾರಕಿಹೊಳಿ ಮೇಲಿದೆ. ಬಹುತೇಕರು ಭಾನುವಾರ ಧರ್ಮೇಂದ್ರ ಪ್ರಧಾನ್ ಬಳಿ ಇದನ್ನು ಹೇಳಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರನ್ನೂ ಕರೆದು ಚರ್ಚಿಸಿದ್ದಾರೆ. ಆದರೆ ಯಾವುದೇ ನಿರ್ಧಾರ ಕೈಗೊಳ್ಳದೆ, ತಮ್ಮ ನಿರ್ಧಾರವನ್ನು ಹೇಳದೆ ಇಲ್ಲಿಂದ ತೆರಳಿದ್ದಾರೆ. ಇನ್ನೊಮ್ಮೆ ಎಲ್ಲರ ಸಭೆ ಕರೆದು ರಾಜಿ ಸೂತ್ರ ಮುಂದಿಡಬಹುದು. ಚುನಾವಣೆವರೆಗೆ ತೇಪೆ ಹಚ್ಚುವ ಕೆಲಸ ಮಾಡಬಹುದು.
ಆಕ್ರಮಣಕಾರಿ ಆಟ ಆಡಿದ ಚಿದಾನಂದ:
ರಮೇಶ ಜಾರಕಿಹೊಳಿ ವಿಷಯ ಬಂದಾಗ ಒಳಗೊಳಗೆ ಎಷ್ಟೇ ಅಸಮಾಧಾನವಿದ್ದರೂ ಲಕ್ಷ್ಮಣ ಸವದಿ ಬಹಿರಂಗವಾಗಿ ಮಾತನಾಡಿಲ್ಲ. ಪಕ್ಷದ ಇಮೇಜ್ ಗೆ ದಕ್ಕೆಯಾಗಬಾರದೆಂದು ಬಹಳ ರಕ್ಷಣಾತ್ಮಕ ಆಟವನ್ನೇ ಆಡುತ್ತ ಬಂದಿದ್ದಾರೆ. ಮೊನ್ನೆ ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗಲೂ, ಬೇರೆಯವರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಅಮಿತ್ ಶಾ ಹೇಳಿದ್ದಾರೆ. ಅವರ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೇವೆ ಎಂದಷ್ಟೇ ಹೇಳಿ, ಹಾವು ಸಾಯಬೇಕು, ಕೋಲು ಮುರಿಯಬಾರದೆನ್ನುವ ರೀತಿಯಲ್ಲಿ ವಿಷಯ ಮುಗಿಸಿದ್ದಾರೆ.

ಆದರೆ ಮಗ ಚಿದಾನಂದ ಸವದಿ ಮಾತ್ರ ಅಪ್ಪನಂತೆ ರಕ್ಷಣಾತ್ಮಕ ಆಟ ಆಡದೆ ನೇರವಾಗಿ ಆಕ್ರಮಣಕಾರಿ ಆಟವಾಡಿದ್ದಾರೆ. ಅಥಣಿಯಲ್ಲಿ ಮಹೇಶ ಕುಮಟಳ್ಳಿಗೆ ಟಿಕೆಟ್ ಕೊಡದಿದ್ದಲ್ಲಿ ನಾನು ಗೋಕಾಕದಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ರಮೇಶ ಜಾರಕಿಹೊಳಿ ಹೇಳಿಕೆಗೆ ಬಹಿರಂಗವಾಗಿಯೇ ಸವಾಲೆಸೆದಿದ್ದಾರೆ. ನಾವು ಕ್ಷೇತ್ರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ರಮೇಶ ಜಾರಕಿಹೊಳಿಗೆ ಮಹೇಶ ಕುಮಟಳ್ಳಿ ಮೇಲೆ ಅಷ್ಟು ಪ್ರೀತಿ ಇದ್ದರೆ ತಮ್ಮ ಗೋಕಾಕ ಕ್ಷೇತ್ರವನ್ನು ಬಿಟ್ಟುಕೊಡಲಿ ಎಂದು ಸವಾಲೆಸೆದಿದ್ದಾರೆ.
15-20 ವರ್ಷದಿಂದ ಅಥಣಿಯಲ್ಲಿ ಸಂಘಟನೆ ಮಾಡಿದ್ದೇವೆ. 2019ರಲ್ಲಿ ಅನಿವಾರ್ಯ ಸಂದರ್ಭದಲ್ಲಿ ಪಕ್ಷದ ವರಿಷ್ಠರ ಸಲಹೆಯ ಮೇರೆಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದೇವೆ. ಇನ್ನು ಮುಂದೆ ಅದು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ನಾವು ಗೋಕಾಕ್ ಬಗ್ಗೆ ಎಂದೂ ಮಾತನಾಡಿಲ್ಲ, ನೀವೇಕೆ ನಮ್ಮ ಅಥಣಿ ಬಗ್ಗೆ ಮಾತನಾಡುತ್ತೀರಿ ಎನ್ನುವ ಪ್ರಶ್ನೆ ಎಸೆದಿದ್ದಾರೆ.
ಬಿಜೆಪಿಯಿಂದ ಮಹೇಶ ಕುಮಟಳ್ಳಿಗೆ ಟಿಕೆಟ್ ನೀಡಿದರೆ ಲಕ್ಷ್ಮಣ ಸವದಿ ಸ್ವತಂತ್ರವಾಗಿ ಸ್ಪರ್ಧಿಸುತ್ತಾರಾ ಎನ್ನುವ ಪ್ರಶ್ನೆಗೆ, ಆ ಕುರಿತು ವಿಚಾರಮಾಡಿಲ್ಲ ಎಂದೂ ಹೇಳಿದ್ದಾರೆ.
ತಾವು ಅಪ್ಪನಂತೆ ಸಾಫ್ಟ್ ಅಲ್ಲ, ತಮ್ಮದೇನಿದ್ದರೂ ನೇರಾ ನೇರ ಎನ್ನುವುದನ್ನು ಚಿದಾನಂದ ಸವದಿ ತೋರಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅಥಣಿಯಲ್ಲಿ ದಂಗಲ್ ಗ್ಯಾರಂಟಿ ಎನ್ನುವ ಮುನ್ಸೂಚನೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ