ಬದಲಾದ ಕಾಲದಲ್ಲಿ ಉಳಿತಾಯ ಮತ್ತು ಹೂಡಿಕೆ

ಬದಲಾದ ಕಾಲದಲ್ಲಿ ಉಳಿತಾಯ ಮತ್ತು ಹೂಡಿಕೆ

-ಅಂಜಲಿ ಗರಗ್  (ಮನಿ ಸೆಂಟರ್  -9343184892) 

ಹಣ -ಯಾರಿಗೆ ತಾನೆ ಬೇಕಾಗಿಲ್ಲ. ಜೀವನದಲ್ಲಿ ಹಣವೇ ಎಲ್ಲವೂ ಅಲ್ಲ ಎಂದು ಯಾರು ಎಷ್ಟೇ ಹೇಳಿದರೂ ಹಣ ಬಿಟ್ಟು ಏನೂ ಇಲ್ಲ ಎನ್ನುವುದೂ ಅಷ್ಟೇ ಸತ್ಯ. ಹಾಗಾಗಿ, ಅತಿ ಆಸೆಗೆ ಬೀಳದಿದ್ದರೂ, ಅವಶ್ಯಕತೆಗೆ ತಕ್ಕಂತೆ ಹಣ ಗಳಿಸುವುದು, ಉಳಿಸುವುದು ಮತ್ತು ಹೂಡಿಕೆ ಮಾಡುವುದು ಪ್ರತಿಯೊಬ್ಬರ ಜೀವನದ ಭಾಗವಾಗಿರಲೇಬೇಕು. ಅಂದಾಗ ಮಾತ್ರ ಜೀವನದಲ್ಲಿ ನೆಮ್ಮದಿ.

ತಲೆಯ ಮೇಲೊಂದು ಸೂರು, ಹೊಟ್ಟೆ ತುಂಬ ಊಟ, ಮೈತುಂಬ ಬಟ್ಟೆಗೆ ಮಾತ್ರ ದುಡಿದರೆ ಸಾಕು ಎನ್ನುವ ಕಾಲವೊಂದಿತ್ತು. ಆದರೆ ಕಾಲಕ್ರಮೇಣ ಮನುಷ್ಯನ ಬೇಕು ಬೇಡಗಳ ಪಟ್ಟಿ ಹೆಚ್ಚಾದಂತೆ ಹಣಗಳಿಸುವ ಹಾಗೂ ಉಳಿಸುವ ಪ್ರಕ್ರಿಯೆ ಆರಂಭವಾಯಿತು. ತನ್ನ ನಿತ್ಯಜೀವನದ ಬೇಕು ಬೇಡಗಳನ್ನು ಪೂರೈಸುವ ಜೊತೆಗೆ ವಿದ್ಯಾಭ್ಯಾಸ ಹಾಗೂ ತನ್ನ ನಿವೃತ್ತಿ ಜೀವನದ ಭದ್ರತೆಗಾಗಿ ಹಣದ ನಿರ್ವಹಣೆಯತ್ತ ಮನುಷ್ಯನ ವಿಚಾರ ಪ್ರಕ್ರಿಯೆ ಪ್ರಾರಂಭವಾಯಿತು. ಆ ವಿಚಾರ ಪ್ರಕ್ರಿಯೆ ಪ್ರತಿಫಲವೇ ಉಳಿತಾಯ ಹಾಗೂ ಹಣ ಹೂಡಿಕೆ.

ಉಳಿತಾಯ

ಅವರವರ ಅಗತ್ಯಗಳಿಗೆ ಅನುಸಾರವಾಗಿ, ಪ್ರತಿಯೊಬ್ಬರದ್ದೂ ತಮ್ಮದೇ ಆದ ಖರ್ಚುವೆಚ್ಚಗಳ ಪಟ್ಟಿ  ಇರುತ್ತದೆ. ಆ ಪ್ರಕಾರ ಬೇಕಾದ ವಸ್ತುಗಳಿಗೆ ಹಾಗೂ ಕೆಲಸಕ್ಕೆ ಮಾತ್ರ ಖರ್ಚುಮಾಡಿ ಉಳಿದದ್ದನ್ನು ಭದ್ರವಾಗಿ ಎತ್ತಿಡುವ ಕಾರ್ಯವೇ ಉಳಿತಾಯ. ಉಳಿತಾಯವನ್ನು ಈ ಕೆಳಗಿನ ಪ್ರಕಾರದಲ್ಲಿ ಮಾಡಬಹುದು. ಬ್ಯಾಂಕ್ ಖಾತೆ ಪೋಸ್ಟಲ್ ಇಲಾಖೆಯ ಆರ್ ಡಿ ಹಾಗೂ ಮಹಿಳೆಯರ ಸಂಘಗಳು, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್  ಇವೆಲ್ಲ ಉಳಿತಾಯದ ವಿಧಗಳು.

ಹಣಹೂಡಿಕೆ 

ನಮ್ಮ ಉಳಿತಾಯದ ಹಣದಲ್ಲಿ ಸುಮಾರು ಶೇಕಡಾ ಎಂಟರಿಂದ ಹತ್ತರಷ್ಟು  ವಾರ್ಷಿಕ ಹೆಚ್ಚಳ ಕಂಡು ಬಂದಲ್ಲಿ ಅದು ಹೂಡಿಕೆ ಎನ್ನಿಸಿಕೊಳ್ಳುತ್ತದೆ. ನಾವು ಉಳಿಸಿ ಎತ್ತಿಟ್ಟ ಹಣ ತಂತಾನೆ ಉಳಿಸಿಕೊಳ್ಳುವಂತೆ ಮಾಡುವುದು ಹಣ ಹೂಡಿಕೆಯ ವಿಶೇಷ ಗುಣ. ಉಳಿತಾಯದಲ್ಲಿ ಮೊದಲು ಖರ್ಚು ಮಾಡಿ ಉಳಿದ ಹಣವನ್ನು ಎತ್ತಿಡಲಾಗುತ್ತದೆ. ಆದರೆ, ಹಣ ಹೂಡಿಕೆಯಲ್ಲಿ ಖರ್ಚಿಗಿಂತ ಮೊದಲೇ ಹಣವನ್ನು ಹೂಡಿಕೆಗಾಗಿ ವಿಂಗಡಿಸಿ ಬೇರ್ಪಡಿಸಬೇಕು. ಇದು ಮಾಸಿಕ ಅಥವಾ ವಾರ್ಷಿಕ ವಾಗಿಯೂ ಇರಬಹುದು.

ಹಣ ಹೂಡಿಕೆಯಲ್ಲಿ ವಿಧಗಳು

ಶೇರುಮಾರುಕಟ್ಟೆ, ಮ್ಯೂಚುವಲ್ ಫಂಡ್, ಡಿಬೆಂಚರ್, ರಿಯಲ್ ಎಸ್ಟೇಟ್, ಇನ್ಶೂರೆನ್ಸ್ , ಬೆಲೆಬಾಳುವ ಲೋಹಗಳು (ಬಂಗಾರ, ಬೆಳ್ಳಿ, ತಾಮ್ರ ಇತ್ಯಾದಿ )ಫಿಕ್ಸೆಡ್ ಡಿಪಾಸಿಟ್, ಪೋಸ್ಟಲ್ ಇಲಾಖೆಯ ಮಾಸಿಕ ಇನ್ ಕಂ ಸ್ಕೀಂ ಮುಂತಾದವು.
ಆದರೆ ಉಳಿತಾಯ ಹಾಗೂ ಹೂಡಿಕೆಯಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಉಳಿತಾಯದಲ್ಲಿ ಹಣದ ಪ್ರತಿಫಲದ ರಾಶಿ ಗಣನೀಯವಾಗಿ ಕಡಿಮೆಯಿರುತ್ತದೆ. ಹಾಗಾಗಿ ಋಣಾತ್ಮಕ ಪ್ರತಿಫಲದ ಅಪಾಯ ಇರುವುದಿಲ್ಲ.
ಆದರೆ ಹಣ ಹೂಡಿಕೆಯ ವಿಧಗಳಲ್ಲಿ ಪ್ರತಿಫಲದಲ್ಲಿ ಗಣನೀಯವಾದ ಏರಿಕೆ ಇರುತ್ತದೆ. ಆದರೆ ಋಣಾತ್ಮಕ ಪ್ರತಿಫಲದ ಅಪಾಯ ಕೂಡ ಇರುತ್ತದೆ. ಹೂಡಿಕೆಯ ಮುನ್ನ ಮಾರುಕಟ್ಟೆಯ ಅಧ್ಯಯನ ಅತ್ಯಂತ ಅಗತ್ಯ. ಜೊತೆಗೆ ಹೂಡಿಕೆಯ ವಿಧಾನ ಪ್ರತಿಯೊಬ್ಬರ ವಯಕ್ತಿಕ ಜೀವನದ ಮೇಲೂ ವ್ಯತ್ಯಾಸವಾಗುತ್ತದೆ. ಸರಿಯಾದ ತಜ್ಞರ ಜೊತೆಗೆ ಸಮಾಲೋಚನೆ ಮಾಡಿ ಉಳಿತಾಯ ಮತ್ತು ಹೂಡಿಕೆ ನಿರ್ಧರಿಸುವುದು ಸೂಕ್ತ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button