Latest

ಮಹಾತ್ಮರ ತಪೋವಾಣಿ ಮನುಕುಲದ ಬದುಕಿಗೆ ಬೆಳಕು

ಪ್ರಗತಿವಾಹಿನಿ ಸುದ್ದಿ, ಉಗರಗೋಳ(ಸವದತ್ತಿ): ಭಾರತದ ನೆಲದಲ್ಲಿ ಅವತರಿಸಿದ ಅನೇಕ ಆಚಾರ್ಯರು, ಸಂತರು, ಮಹಾಂತರು, ಶಿವಯೋಗಿ ವರೇಣ್ಯರು ತಮ್ಮ ಶಿವಯೋಗ ಸಾಧನೆಯ ತಪಃಶಕ್ತಿಯ ಮೂಲಕ ಧರ್ಮವನ್ನು ಉಳಿಸಿ ಬೆಳೆಸಿ ಸಕಲರಿಗೂ ಲೇಸನ್ನೇ ಬಯಸಿದ್ದಾರೆ. ಈ ನಿಟ್ಟಿನಲ್ಲಿ ಮಹಾತ್ಮರ ತಪೋವಾಣಿ ಮನುಕುಲದ ಬದುಕಿಗೆ ಬೆಳಕು ತುಂಬಿ ಮುನ್ನಡೆಸಿದೆ ಎಂದು ಹೂಲಿ ಸಾಂಬಯ್ಯನವರಮಠದ ಶ್ರೀಉಮೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಅವರು ಉಗರಗೋಳ ಗ್ರಾಮದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಮಠದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಲಕ್ಷ ದೀಪೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಉಗರಗೋಳ ನಿರ್ವಾಣೇಶ್ವರಮಠದ ಶ್ರೀಮಹಾಂತ ಸ್ವಾಮೀಜಿ ಮತ್ತು ರಾಮಾರೂಢಮಠದ ಶ್ರೀಬ್ರಹ್ಮಾರೂಢ ಸ್ವಾಮೀಜಿ ಸಹ ಸಾನ್ನಿಧ್ಯ ವಹಿಸಿದ್ದರು.

ಲಕ್ಷ ದೀಪೋತ್ಸವ :

ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವವನ್ನು ಶ್ರೀಯಲ್ಲಮ್ಮದೇವಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಸಯ್ಯ ಹಿರೇಮಠ ಉದ್ಘಾಟಿಸಿ ಮಾತನಾಡಿದರು. ಉಗರಗೋಳ ಗ್ರಾ.ಪಂ. ಅಧ್ಯಕ್ಷೆ ಜುಬೇದಾ ಬಾರಿಗಿಡದ, ಉಪಾಧ್ಯಕ್ಷ ಶಿವನಗೌಡ ಗಡಾದಗೌಡ್ರ, ಶ್ರೀಯಲ್ಲಮ್ಮದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ. ಜೀರಗಾಳ, ಕೆ. ಎಸ್. ಗಂದಿಗವಾಡ, ವೈ.ವೈ. ಕಾಳಪ್ಪನವರ, ಬಿ.ಪಿ. ಪಾಟೀಲ, ವೈ.ಆರ್. ಚನ್ನಪ್ಪಗೌಡರ, ಎಸ್.ಬಿ. ನರಗುಂದ, ವಿರುಪಾಕ್ಷಪ್ಪ ಹನಸಿ, ಸುಭಾಸ ಹನಸಿ, ಗೌಡಪ್ಪ ವಕ್ಕುಂದ, ಜಗದನಗೌಡ ಗಂದಿಗವಾಡ, ಹಂಚಿನಾಳದ ಗುರುಸಿದ್ಧಯ್ಯ ಹಿರೇಮಠ, ಕೆ.ಜಿ. ಗಂಗಲ್, ಜಿ.ಬಿ. ಸಂಬರಗಿ, ವಿಜಯ ನರಗುಂದ, ಎಂ.ಜಿ. ತೊರಗಲ್ಲಮಠ, ಮಹಾದೇವಪ್ಪ ಹೋಳಿ, ಬಸು ಸಕ್ಕಪ್ಪನವರ, ಚರಂತಯ್ಯ ಹಿರೇಮಠ ಬೆನಕೊಪ್ಪ, ನಿಂಗಪ್ಪ ಗೋವಪ್ಪನವರ ಇದ್ದರು.

ರಾಜ್ಯ ನಿವೃತ್ತ ಗ್ರಂಥಾಯ ಅಧಿಕಾರಿ ಬಿ.ಆರ್. ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಸುನ್ನಾಳದ ಗಂಗಾಧರಶಾಸ್ತ್ರಿ ಹಿರೇಮಠ ಸ್ವಾಗತಿಸಿದರು. ಆನಂದ ಭೋವಿ ಉಪನ್ಯಾಸ ನೀಡಿದರು. ಮಠದ ಆಡಳಿತಾಧಿಕಾರಿ ಎಂ. ಆರ್, ಹಿರೇಮಠ ಮತ್ತು ವೀರಯ್ಯ ಹಿರೇಮಠ ಆಶಯ ನುಡಿ ಹಂಚಿಕೊಂಡರು. ಶಶಿಧರ ಅಂಗಡಿ ಹಾಗೂ ಡಿ.ಎಸ್. ಕೊಪ್ಪದ ನಿರೂಪಿಸಿದರು. ಡಾ. ಗುರುಮೂರ್ತಿ ಯರಗಂಬಳಿಮಠ ವಂದಿಸಿದರು.

ಪಲ್ಲಕ್ಕಿ ಉತ್ಸವ :

ಪ್ರಾತಃಕಾಲದಲ್ಲಿ ಶ್ರೀಗುರು ಶಿವಪ್ಪಯ್ಯ ಶಿವಯೋಗಳವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಸಹಿತ ವಿಶೇಷ ಪೂಜೆ ಜರುಗಿತು. ಶಿವಪ್ಪಯ್ಯ ಶಿವಯೋಗಿಗಳ ಪಲ್ಲಕ್ಕಿ ಉತ್ಸವವು 108 ಪೂರ್ಣ ಕುಂಭಗಳು ಸೇರಿದಂತೆ ವಿವಿಧ ಜನಪದ ವಾದ್ಯಮೇಳಗಳೊಂದಿಗೆ ಉಗರಗೋಳ ಗ್ರಾಮದಲ್ಲಿ ಜರುಗಿತು. ಧಾರವಾಡದ ನಿವೃತ್ತ ಎ.ಸಿ.ಪಿ. ಜಿ.ಆರ್. ಹಿರೇಮಠ, ನಿವೃತ್ತ ಕೆ.ಎ.ಎಸ್. ಅಧಿಕಾರಿ ಮಹೇಶ ಹಿರೇಮಠ, ವೀರಯ್ಯ ಪದಕಿಮಠ, ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಮಠದ ಗಜಾನನ ಯುವಕ ಮಂಡಳದ ಪದಾಧಿಕಾರಿಗಳು, ಶ್ರೀಮಠದ ಹಳೆಯ ವಿದ್ಯಾರ್ಥಿಗಳು, ಪಾಠಶಾಲೆಯ ವಟುಗಳು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬೆಳಗಾವಿ, ಸವದತ್ತಿ, ಹುಕ್ಕೇರಿ, ಉಗರಗೋಳ, ಹರ್ಲಾಪೂರ, ಹಂಚಿನಾಳ, ಮುನವಳ್ಳಿ ಗ್ರಾಮಗಳ ವಿವಿಧ ಕ್ಷೇತ್ರಗಳ ಗಣ್ಯರು, ರೈತ ನಾಯಕರು, ಯುವ ಧುರೀಣರು ಪಾಲ್ಗೊಂಡಿದ್ದರು. ಜಾನಪದ ಕಲಾಪ್ರಕಾರಗಳಾದ ಡೊಳ್ಳು ಕುಣಿತ, ಸಮ್ಮಾಳ ವಾದ್ಯ, ಭಜನೆ ಉತ್ಸವದಲ್ಲಿ ಗಮನಸೆಳೆದವು. ನಂತರ ದಾಸೋಹ ಸೇವೆಯಲ್ಲಿ ಮಹಾಪ್ರಸಾದದ ಅನ್ನಸಂತರ್ಪಣೆ ನಡೆಯಿತು.

ಗುರುರಕ್ಷೆ ಗೌರವ : ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ವಿಭೂಷಿತ ನವೀನ ಪವಾಡಿ, ಭಾರತೀಯ ಸೈನ್ಯದಲ್ಲಿ 16 ವರ್ಷಗಳ ವಿಶೇಷ ಸೇವೆ ಸಲ್ಲಿಸಿದ ಮಂಜುನಾಥ ಭೋವಿ ಹಾಗೂ ಕ.ಸಾ.ಪ. ಬೆಳ್ಳಿ ಹಬ್ಬದ ಗಝಲ್ ಕಾವ್ಯ ಪ್ರಶಸ್ತಿ ಪುರಸ್ಕೃತ ಆನಂದ ಭೋವಿ ಅವರಿಗೆ ಗುರುರಕ್ಷೆಯ ಗೌರವ ನೀಡಿ ಶ್ರೀಮಠದಿಂದ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕ ಸಂಪಾದಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಯಲ್ಲಪ್ಪ ಉಳ್ಳಿಗೇರಿ, ರೇಖಾ ಹೋಳಿ, ಶರತ್ ಬಾರ್ಕಿ, ತಂಗೆವ್ವ ಗೊರವನಕೊಳ್ಳ, ವಿನಾಯಕ ಗುಡೆಣ್ಣವರ, ಶ್ರೇಯಸ್ ಬಾರ್ಕಿ ಅವರನ್ನೂ ಗೌರವಿಸಲಾಯಿತು.

ಆದರ್ಶ ವಟು ಪ್ರಶಸ್ತಿ :

ವೀರಶೈವ ಸಂಸ್ಕೃತ ವೇದಪಾಠಶಾಲೆಯ ವಿದ್ಯಾರ್ಥಿ ಸಿದ್ಧಯ್ಯ ಚೆನ್ನಯ್ಯ ಹಿರೇಮಠ ಇವನಿಗೆ ಉಗರಗೋಳದ ಸುಭಾಸ ಹನಸಿ ಕೊಡಮಾಡುವ ಬೆಳ್ಳಿ ಪದಕದೊಂದಿಗೆ ‘ಆದರ್ಶ ವಟು’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಳಗಾವಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಹಿಂದೂಸ್ತಾನಿ ಗಾಯಕ ಡಾ. ಅರ್ಜುನ ವಠಾರ ಹಾಗೂ ಸಹ ಕಲಾವಿದರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು. ಬೆಳಗಾವಿ ಲೋಕಸಭಾ ಸದಸ್ಯೆ ಮಂಗಳಾ ಸುರೇಶ ಅಂಗಡಿ ಶ್ರೀಮಠಕ್ಕೆ ಆಗಮಿಸಿ ಶಿವಯೋಗಿಗಳ ಕರ್ತೃ ಗದ್ದುಗೆಯ ದರ್ಶನಾಶೀರ್ವಾದ ಪಡೆದರು.

ಅಧಿವೇಶನ ಸಿದ್ಧತೆ: ಅಧಿಕಾರಿಗಳ ಪೂರ್ವಭಾವಿ ಸಭೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button