*ಎಸ್.ಸಿ-ಎಸ್.ಟಿ ದೌರ್ಜನ್ಯ ಪ್ರಕರಣ: ತುರ್ತು ಕ್ರಮಕ್ಕೆ ಡಿಸಿ ಮೊಹಮ್ಮದ್ ರೋಷನ್ ಸೂಚನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅನುಸೂಚಿತ ಜಾತಿ, ಪಂಗಡಗಳ ಜನರ ಮೇಲಿನ ದೌರ್ಜನ್ಯ ಕುರಿತು ದೂರುಗಳು ದಾಖಲಾದಲ್ಲಿ ಸಂಭಂದಿಸಿದ ದೂರುಗಳ ಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ (ಸೆ.26) ನಡೆದ ಎಸ್.ಸಿ-ಎಸ್.ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ (ದೌರ್ಜನ್ಯ ತಡೆ) ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಗೆ ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಒಂದು ವೇಳೆ ಹಾಜರಾಗದೇ ಇದ್ದಲ್ಲಿ ಅಂತಹ ಅಧಿಕಾರಿಗಳು ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ:
ಅನುಸೂಚಿತ ಜಾತಿ, ಪಂಗಡಗಳ ದೌರ್ಜನ್ಯ ಕುರಿತು ದೂರುಗಳು ದಾಖಲಾದಲ್ಲಿ ಸಂಭಂದಿಸಿದ ದೂರುಗಳ ಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಯಾವುದೇ ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಅಧಿಕಾರಿ ಸಿಬ್ಬಂದಿಗಳು ಸೌಜನ್ಯಯುತವಾಗಿ ವರ್ತಿಸಬೇಕು. ಕೆ.ಎಸ್.ಎಸ್.ಐ.ಡಿ.ಸಿ. ವತಿಯಿಂದ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳು ನಿವೇಶನ ಪಡೆದವರ ವಿವರಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡದವರು ವಿವಿಧ ಯೋಜನೆಗಳ ಸಾಲ ಸೌಲಭಗಳನ್ನು ಕೊರಿ ಸಲ್ಲಿಸಿರುವ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡಬೇಕು. ಯೋಜನೆಗಳ ಅನುಷ್ಠಾನ ಬಹಳ ಮುಖ್ಯವಾಗಿದ್ದು, ಎಸ್.ಸಿ- ಎಸ್.ಟಿ ಸಮುದಾಯಗಳ ಅಭಿವೃದ್ಧಿ ಪೂರಕವಾಗಿ ಬ್ಯಾಂಕ್ ಅಧಿಕಾರಿಗಳು ಅರ್ಜಿಗಳ ಪರಿಶೀಲನೆ ನಡೆಸಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ವಹಿಸಬೇಕು. ಸಭೆಗಳಿಗೆ ಹಾಜರಾಗದ ಲೀಡ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಅನುಪಾಲನಾ ವರದಿ ಸಲ್ಲಿಸುವುದು ಕಡ್ಡಾಯವಾಗಿರುದರಿಂದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ವರದಿ ಸಮೇತ ಸಭೆಗೆ ಹಾಜರಿರಬೇಕು. ಸಭೆಗೆ ಹಾಜರಿಲ್ಲದ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜು ಇಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ ತುರ್ತು ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಗೆ ದಾಖಾಲಾಗುವ ರೋಗಿಗಳಿಗೆ ಕೂಡಲೆ ಚಿಕಿತ್ಸೆ ನೀಡಬೇಕು. ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮೀಸಲಾತಿಯನ್ನು ನೀಡಲಾಗುತ್ತಿದೆ. ಪ್ರಾಂಶುಪಾಲರ ಹುದ್ದೆಯ ಪ್ರಭಾರ ವಹಿಸಿ ಕೊಡುವ ಪ್ರಕರಣದಲ್ಲಿ ಕಿರುಕಳ ನೀಡಿದರ ಕುರಿತಂತೆ ವರದಿ ಸಲ್ಲಿಸಲು ಸೂಚಿಸಿದರು.
ಬೆಳಗಾವಿ ನಗರ ಪೋಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ನಬ್ಯಾಂಗ್ ಅವರು ಮಾತನಾಡಿ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ವ್ಯಸನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಅಂತಹ ಸ್ಥಳಗಳನ್ನು ಗುರುತಿಸಿ, ಪರಿಶೀಲನೆ ನಡೆಸಲಾಗುವುದು. ಒಂದುವೇಳೆ ಮಾದಕ ವಸ್ತುಗಳು ಮಾರಾಟದ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು. ಜಿಲ್ಲೆಯ ಸಾರ್ವಜನಿಕರು ಮಾಹಿತಿ ನೀಡುವ ಮೂಲಕ ಇಲಾಖೆಗೆ ಸಹಕಾರ ನೀಡುವಂತೆ ಕೋರಿದರು.
ಸ್ಮಶಾನ ಭೂಮಿ ಮಂಜೂರು ಮಾಡಲು ಮನವಿ:
ಜಿಲ್ಲೆಯಲ್ಲಿ ಹಲವು ಭಾಗಗಳಲ್ಲಿ ಸ್ಮಶಾನ ಭೂಮಿ ಬೇಡಿಕೆ ಇದೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡಿ ಅಭಿವೃದ್ಧಿ ಪಡಿಸಬೇಕು. ಎಲ್ಲ ಇಲಾಖೆಗಳ ವಿವಿಧ ಯೋಜನೆಗಳ ಎಸ್. ಸಿ-ಎಸ್.ಟಿ ಅನುದಾನ ಸಂಪೂರ್ಣ ಬಳಕೆ ಆಗಬೇಕು ಎಂದು ಮುಖಂಡ ಮಲ್ಲೇಶ ಚೌಗಲಾ ಮನವಿ ಮಾಡಿದರು.
ಜಿಲ್ಲಾ ದೌರ್ಜನ್ಯ ಸಮಿತಿಯ ನಾಮನಿರ್ದೇಶಿತ ಸದಸ್ಯರುಗಳಾದ ಕರೆಪ್ಪ ಗುಡೆನ್ನವರ, ವಿಜಯ ತಳವಾರ, ಬಸಪ್ಪ ತಳವಾರ,ಬಸವರಾಜ ಪಾಯಟ್ಟಿ, ನಾಗಪ್ಪ ನರಗಟ್ಟಿ, ಮಲ್ಲೇಶ ಚೌಗಲಾ ಅವರುಗಳು ದೌರ್ಜನ್ಯ ಪ್ರಕರಣಗಳ ಕುರಿತು ಸಭೆಗೆ ತಿಳಿಸಿ ಅಗತ್ಯದ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾದ ದಿ.ಯಲ್ಲಪ್ಪ ಹುದಲಿ ಅವರ ನಿಧನಕ್ಕೆ ಎರಡು ನಿಮಿಷ ಮೌನಾಚರಣೆ ಆಚರಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ಅವರು ಅನುಸೂಚಿತ ಜಾತಿ/ಅನುಸೂಚಿತ ಪಂಗಡ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸಭೆ ನಿರ್ವಹಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ನಾಗರಿಕ ಹಕ್ಕು ಜಾರಿ ನಿರ್ದೇಶನಲಯದ ಅಧೀಕ್ಷಕ ರವೀಂದ್ರ ಗಡಾದಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ಸಮಾಜದ ಮುಖಂಡರಾದ ಮಲ್ಲೇಶ ಚೌಗಲೆ, ಮಹಾದೇವ ತಳವಾರ, ಬಸವರಾಜ ಆಯಟ್ಟಿ, ದುರ್ಗೇಶ ಮೇತ್ರಿ, ವಿವೇಕ ಕರ್ಪೆ, ಆಕಾಶ ಬೇವಿನಕಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ