
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹೊಂದಿದಲ್ಲಿ ಅದು ಉತ್ತಮ ಜೀವನಕ್ಕೆ ನಾಂದಿಯಾಗಲಿದೆ ಎಂದು ಖಾನಾಪುರ ತಹಸೀಲ್ದಾರ್ ಪ್ರವೀಣ ಜೈನ ಅಭಿಪ್ರಾಯಪಟ್ಟರು.
ನಗರದ ಮಿಲೇನಿಯಂ ಗಾರ್ಡನ್ ನಲ್ಲಿ ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಜೇಶನ್ ಜಿತೋ ಸಂಸ್ಥೆಯ ವತಿಯಿಂದ ಜೈನ ಸಮಾಜದಲ್ಲಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಲೇಜು ಮಟ್ಟದ ಶಿಕ್ಷಣಕ್ಕಾಗಿ ನೀಡಲಾಗುವ ಆರ್ಥಿಕ ನೆರವು ಚೆಕ್ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮತ್ತು ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿ ಅವರು ಭಾನುವಾರ ಮಾತನಾಡಿದರು.
ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ಗಮನ ಹರಿಸಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಆಂಗ್ಲ ಭಾಷೆಗೆ ಹೆದರದೆ ಕನ್ನಡ ಮಾಧ್ಯಮದ ಪುಸ್ತಕಗಳನ್ನು ಬಳಿಸಿಕೊಂಡು ಅಧ್ಯಯನ ಮಾಡಬೇಕು . ಜಿತೋ ಸಂಸ್ಥೆಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿರಂತರ ಸಹಾಯ ಮಾಡುತ್ತ ಬಂದಿದೆ. ಇಂತಹ ಸಂಸ್ಥೆಗಳ ಮೂಲಕ ಮತ್ತು ಸಹಕಾರದಿಂದ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಮುಂದಾಗಬೇಕೆಂದು ಅವರು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಶಾಂತಿ ಫೋಮ್ಯಾಖ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಉಪಾಧ್ಯಕ್ಷ ಶಾಂತಿಲಾಲ ಪೋರವಾಲ ಮಾತನಾಡಿ, 10 ನೇ ತರಗತಿ ನಂತರ ವಿದ್ಯಾರ್ಥಿಗಳಿಗೆ ಕಠಿಣ ಸಮಸ್ಯೆಗಳು ಎದುರಾಗುತ್ತವೆ. ಜೀವನದಲ್ಲಿ ಪಾಲಕ -ಪೋಷಕರ ಮತ್ತು ಗುರುಗಳ ಮಾರ್ಗದರ್ಶನದೊಂದಿಗೆ ಸಮಸ್ಯೆಗಳನ್ನು ಎದುರಿಸುವ ಕೆಲ ಮತ್ತು ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಸ್ವಾಗತಿಸಿ ಮಾತನಾಡಿದ ಜಿತೊ ಬೆಳಗಾವಿ ವಿಭಾಗದ ಅಧ್ಯಕ್ಷ ಪುಷ್ಪಕ ಹನಮಣ್ಣವರ, ಬೆಳಗಾವಿ ವಿಭಾಗದ ಶಾಂಖ್ಯೆ ಯೋಜನೆಯಡಿ ಜಿತೊ ಸಂಸ್ಥೆಯು ಕಳೆದ 8 ವರ್ಷಗಳಿಂದ ದಾನಿಗಳ ಮೂಲಕ ಜೈನ ಸಮಾಜದಲ್ಲಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತ ಬಂದಿದೆ. ಈ ಬಾರಿಯು ಸಹ 108 ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ತಲಾ 5 ಸಾವಿರ ರೂ.ಗಳಂತೆ ಒಟ್ಟು 5.40 ಲಕ್ಷ ರೂ.ಗಳ ನೆರವನ್ನು ನೀಡಲಾಗುತ್ತಿದೆ. ಈ ಯೋಜನೆಗೆ ಯಶಸ್ವಿಗೆ ದಾನಿಗಳೇ ಕಾರಣ ಎಂದು ತಿಳಿಸಿದರು.
ಸಮಾರಂಭದಲ್ಲಿ ವೃತ್ತಿ ಮಾರ್ಗದರ್ಶಕ ಶ್ರೀನಿವಾಸ ಬಾಲರಾಜು ಅವರು ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ.ನಂತರ ಯಾವ ಕೋರ್ಸ್ ಆಯ್ದುಕೊಳ್ಳಬೇಕೆಂಬ ಬಗ್ಗೆ ಹಾಗೂ ಇನ್ನಿತರ ಶೈಕ್ಷಣಿಕ ಸಹಾಯ, ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮ ಸಂಯೋಜಕ ಅಭಿಜಿತ್ ಅಂಕಲೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಅಮಿತ ದೋಷಿ ವಂದಿಸಿದರು. ಅಭಿಜಿತ್ ಭೋಜನ್ನವರ ನಿರೂಪಿಸಿದರು.
ವೈದ್ಯಕೀಯ ಕ್ಷೇತ್ರದ ಆವಿಷ್ಕಾರಗಳು ಒಳ್ಳೆಯದಕ್ಕೆ ಮಾತ್ರ ಬಳಕೆಯಾಗಲಿ: ಡಾ. ಮಹೇಶ ಗುಪ್ತಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ