ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ನೌಕರರ ಹೋರಾಟ ಸಮನ್ವಯ ಸಮಿತಿ ಸಭೆ ಇಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಶಿವಾನಂದ ಸ್ವಾಮೀಜಿ, ಹಂದಿಗುಂದ, ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ, ಬಸವರಾಜ ಹೊರಟ್ಟಿ, ಅರುಣ್ ಶಹಾಪೂರ್, ಎಸ್.ನಾರಾಯಣಸ್ವಾಮಿ, ಕಂಠೇಗೌಡ, ಅಯನೂರ ಮಂಜುನಾಥ, ಪ್ರಭಾಕರ್ ಕೋರೆ, ಮಹಂತೇಶ ಕವಟಗಿಮಠ, ಶಂಕರಣ್ಣ ಮುನವಳ್ಳಿ, ಹಾಗೂ ಆಡಳಿತ ಮಂಡಳಿ ಸದಸ್ಯರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪದಾಧಿಕಾರಿಗಳು ಮತ್ತು ನೌಕರರು ಹಾಜರಿದ್ದರು.
ಆಡಳಿತ ಮಂಡಳಿ ಹಾಗೂ ನೌಕರರ ಗಂಭೀರ ಸಮಸ್ಯೆಗಳಾದ ೧೯೯೫ ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ಅನುದಾನ ನೀಡುವುದು, ಕಾಲ್ಪನಿಕ ವೇತನ ಬಡ್ತಿ ಜಾರಿ (ಶ್ರೀ ಬಸವರಾಜ ಹೊರಟ್ಟಿರವರ ವರದಿ ಯಥಾವತ್ತಾಗಿ ಜಾರಿಗೆ ತರುವುದು), ಎನ್.ಪಿ.ಎಸ್ ರದ್ಧತಿ, ಜ್ಯೋತಿ ಸಂಜೀವಿನಿ, ಶಿಕ್ಷಕರ ಮತ್ತು ಮಕ್ಕಳ ಅನುಪಾತ ೧:೫೦ ಕ್ಕೆ ಇಳಿಸುವುದು, ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆ ತುಂಬುವುದು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಶಾಲಾ ಕಾಲೇಜುಗಳಿಗೆ ಅನುದಾನ ಕೊಡುವ ವಿಚಾರ ಬಂದಾಗ ಬಸವರಾಜ ಹೊರಟ್ಟಿ, ರಾಜ್ಯದಲ್ಲಿ ೧೯೯೫ ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಬಗ್ಗೆ ಅಧಿಕಾರಿಗಳು ಅಂಕಿ ಸಂಖ್ಯೆ ನೀಡದೆ ಇದ್ದಾಗ ಸಭೆಯ ಅಜೆಂಡಾ ೨೦ ದಿನಗಳ ಹಿಂದೆ ಅಧಿಕಾರಿಗಳಿಗೆ ಮತ್ತು ಸಚಿವರ ಗಮನಕ್ಕೆ ತಂದರೂ ಅಂಕಿ ಸಂಖ್ಯೆಗಳನ್ನು ಕೊಡದೇ ಇರುವುದರಿಂದ ಸಭೆಯ ಅವಶ್ಯಕತೆ ಇಲ್ಲ ಎಂದರು.
ಶಿಕ್ಷಣ ಸಚಿವರು ಇದೇ ತಿಂಗಳು ೩೧ ರ ಒಳಗಾಗಿ ಅಂಕಿ ಸಂಖ್ಯೆಗಳನ್ನು ಕ್ರೋಢೀಕರಿಸಲು ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಸೂಚಿಸಿದರು. ತದನಂತರ ೬ ವಿಷಯಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಎಲ್ಲಾ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದ ಸಚಿವರು ನಿಮ್ಮ ಎಲ್ಲಾ ಬೇಡಿಕೆಗಳು ನ್ಯಾಯ ಸಮ್ಮತವಾಗಿವೆ.
ಆದರೆ ಎನ್.ಪಿ.ಎಸ್ ಸಮಸ್ಯೆ ರಾಷ್ಟ್ರೀಯ ಸಮಸ್ಯೆಯಾಗಿದ್ದು, ಅದನ್ನು ರದ್ದುಗೊಳಿಸುವುದು ಅಸಾಧ್ಯ. ಆದರೆ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಸರ್ಕಾರಿ ನೌಕರರಿಗೆ ಜಾರಿಯಾದ ಎನ್.ಪಿ.ಎಸ್ ವ್ಯವಸ್ಥೆ ಕಲ್ಪಿಸಿರುವುದಾಗಿ ತಿಳಿಸಿದರು. ಕಾಲ್ಪನಿಕ ವೇತನದ ಬಡ್ತಿ ಬಗ್ಗೆ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು. ಜ್ಯೋತಿ ಸಂಜೀವಿನಿ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿರುವುದಾಗಿ ತಿಳಿಸಿದರು. ಆ ಯೋಜನೆ ಶೀಘ್ರದಲ್ಲೇ ಅನುದಾನಿತ ನೌಕರರಿಗೆ ವಿಸ್ತರಿಸುವುದಾಗಿ ತಿಳಿಸಿದರು. ನಂತರ ಫೆಬ್ರವರಿ ಮೊದಲ ವಾರದಲ್ಲಿ ಸಭೆ ಕರೆಯುವುದಾಗಿ ತಿಳಿಸಿದರು.
ನಂತರ ಇದೇ ತಿಂಗಳು ೧೭ ರಿಂದ ರಾಜ್ಯಾದ್ಯಾಂತ ಶಾಲಾ ಕಾಲೇಜುಗಳನ್ನು ಅನಿಧಿಷ್ಟಾವಧಿ ವರೆಗೆ ಬಂದ್ ಮಾಡಲು ತೆಗೆದುಕೊಂಡ ನಿರ್ಧಾರದ ಬಗ್ಗೆ ಬಸವರಾಜ ಹೊರಟ್ಟಿರವರು ಸಭೆಯ ಗಮನಕ್ಕೆ ತಂದಾಗ ಸಚಿವರು ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನವನ್ನು ನ್ಯಾಯ ಸಮ್ಮತವಾಗಿ ಮುಂದಿನ ಸಭೆಯಲ್ಲಿ ಚರ್ಚಿಸಿ ಪ್ರಮುಖ ಬೇಡಿಕೆಗಳನ್ನು ಬಗೆಹರಿಸೋಣ. ಶಾಲಾ ಕಾಲೇಜುಗಳನ್ನು ಬಂದ್ ಮಾಡುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಮನವಿ ಮಾಡಿಕೊಂಡಾಗ ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ದಿನಾಂಕ.೧೭-೦೧-೨೦೨೦ ರಿಂದ ನಡೆಯುವ ಶಾಲಾ ಕಾಲೇಜುಗಳನ್ನು ಅನಿರ್ಧಷ್ಟಾವಧಿ ವರೆಗೆ ಬಂದ್ ಮಾಡುವ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು.
ಈ ಸಭೆಯಲ್ಲಿ ಶಿವರಾಜ್ ಸಜ್ಜನ್, ಜಿ.ಆರ್.ಭಟ್, ಶ್ಯಾಮ್‌ಮಲ್ಲನ್‌ಗೌಡರ್, ಹೆಚ್.ಪಿ ಬಣಕಾರ್, ಡಾ.ಬಸವರಾಜ್ ಧಾರವಾಡ್, ಪ್ರಕಾಶ್ ನಾಯಕ್, ಎಸ್.ಎಂ. ಅಗಡಿ, ಶಿವಪ್ಪ, ಎಸ್.ವಿ ಪಟ್ಟಣಶೆಟ್ಟಿ, ಸುಭಾಷ್ ಸಾಹುಕಾರ್, ಶಿವರಾಜ್ ಅಕ್ಕಿಹಾಳ್, ಇವರುಗಳು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ