ಶಾಲಾ ಶೈಕ್ಷಣಿಕ ಪ್ರವಾಸ: ವೀರೇಂದ್ರ ಹೆಗ್ಗಡೆ ಸಲಹೆಗೆ ಶಿಕ್ಷಣ ಸಚಿವರ ಮೆಚ್ಚುಗೆ; ಶೀಘ್ರ ಆದೇಶ

ಪ್ರಗತಿವಾಹಿನಿ ಸುದ್ದಿ, ಉಜಿರೆ: ಪ್ರತಿವರ್ಷ ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಶಾಲಾ-ಕಾಲೇಜುಗಳ ಶೈಕ್ಷಣಿಕ ಪ್ರವಾಸ ಏರ್ಪಡಿಸುವುದರಿಂದ ಎಲ್ಲಾ ತೀರ್ಥಕ್ಷೇತ್ರಗಳಲ್ಲಿ ದೇವರ ದರ್ಶನ, ಊಟ, ವಸತಿ ಹಾಗೂ ವೀಕ್ಷಣೆ ಬಗ್ಗೆ ಒತ್ತಡ ಮತ್ತು ಸಮಸ್ಯೆಗಳು ಉಂಟಾಗುತ್ತವೆ.

ವಿದ್ಯಾರ್ಥಿಗಳು ಯಾವುದೇ ಒತ್ತಡ ಇಲ್ಲದೆ ಸಾವಧಾನವಾಗಿ ಆಸಕ್ತಿಯಿಂದ ದೇವಾಲಯಗಳು ಹಾಗೂ ಪ್ರೇಕ್ಷಣಿಯ ತಾಣಗಳನ್ನು ವೀಕ್ಷಿಸಿದಾಗ ಜ್ಞಾನಾರ್ಜನೆಯೊಂದಿಗೆ ಶೈಕ್ಷಣಿಕ ಪ್ರವಾಸ ಸಾರ್ಥಕವಾಗುತ್ತದೆ.

ಆದುದರಿಂದ ಪ್ರತಿ ವರ್ಷ ಸೆಪ್ಟೆಂಬರ್‌ನಿಂದ ಡಿಸೆಂಬರ್ ಒಳಗೆ ಶೈಕ್ಷಣಿಕ ಪ್ರವಾಸ ಆಯೋಜಿಸಿದಲ್ಲಿ ಶೈಕ್ಷಣಿಕ ಪ್ರವಾಸ ಕಾಟಾಚಾರಕ್ಕಾಗಿ ಆಗದೆ ಅರ್ಥಪೂರ್ಣವಾಗಿ ಸಂತಸದಾಯಕ ಕಲಿಕೆಯೂ ಆಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್‌ರಿಗೆ ಪತ್ರ ಬರೆದಿದ್ದರು.
ಸಲಹೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿಕ್ಷಣ ಸಚಿವರು ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ತಕ್ಷಣ ಸೂಕ್ತ ಆದೇಶ ನೀಡುವುದಾಗಿ ಹೆಗ್ಗಡೆಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮದ್ಯವರ್ಜನ ಶಿಬಿರಗಳಲ್ಲಿ ಮಾನಸಿಕ ಪರಿವರ್ತನೆ

ಉಜಿರೆ: ಮದ್ಯವರ್ಜನ ಶಿಬಿರಗಳಲ್ಲಿ ಮದ್ಯವ್ಯಸನಿಗಳನ್ನು ಮಾನಸಿಕ ಪರಿವರ್ತನೆ ಮೂಲಕ ವ್ಯಸನ ಮುಕ್ತರಾಗಿ ಆರೋಗ್ಯ ಪೂರ್ಣ ಜೀವನ ನಡೆಸುವಂತೆ ಪ್ರೇರಣೆ ನೀಡಲಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಬುಧವಾರ ಉಜಿರೆಯಲ್ಲಿ ೧೫೫ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ವ್ಯಸನಮುಕ್ತರಿಗೆ ಹಿತವಚನ ನೀಡಿದರು.
ದುಶ್ಚಟಗಳು ವ್ಯಕ್ತಿಯ ಸ್ವಭಾವ, ಸಂಕಲ್ಪ ಶಕ್ತಿ ಮತ್ತು ವ್ಯಕ್ತಿತ್ವಕ್ಕೆ ಹಾನಿ ಮಾಡುವುದರಿಂದ ವ್ಯಸನಮುಕ್ತರಾಗಿ ಶಾಂತಿ, ನೆಮ್ಮದಿಯ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್, ನಿರ್ದೇಶಕ ವಿವೇಕ್ ಪಾಸ್ ಶುಭಾಶಂಸನೆ ಮಾಡಿದರು.
ರಾಜ್ಯದ ೨೬ ಜಿಲ್ಲೆಗಳಿಂದ ೫೮ ಶಿಬಿರಾರ್ಥಿಗಳು ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವ್ಯಸನಮುಕ್ತರಾದರು.
ಮುಂದಿನ ವಿಶೇಷ ಮದ್ಯವರ್ಜನ ಶಿಬಿರ ಉಜಿರೆಯಲ್ಲಿ ಫೆ. ಒಂದರಿಂದ ಪ್ರಾರಂಭವಾಗಲಿದೆ.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button