Belagavi NewsBelgaum NewsKannada NewsKarnataka News

ಲೋಕಾಯುಕ್ತ ಬಲೆಗೆ ಸೆಕ್ಷನ್ ಆಫೀಸರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಿರ್ವಹಿಸಿರುವ ಕಾಮಗಾರಿಯ ಬಿಲ್‌ಗೆ ಸಹಿ ಮಾಡಿ ಹಣ ಮಂಜೂರಾತಿಗೆ ಮೇಲಾಧಿಕಾರಿಗಳಿಗೆ ಕಳುಹಿಸಲು ಲಂಚ ಪಡೆಯುತ್ತಿದ್ದ ಪಂಚಾಯತ್ ರಾಜ್ ಇಂಜಿನಿಯರಿಂಗ ಉಪ ವಿಭಾಗ, ರಾಯಬಾಗ ಸೆಕ್ಷನ್ ಆಫೀಸರ್/ ಕಿರಿಯ ಅಭಿಯಂತರ ಬಂಧಿಸಲ್ಪಟ್ಟಿದ್ದಾರೆ.

ಮುತ್ತಪ್ಪ ಲಕ್ಷ್ಮಣ ಭಜಂತ್ರಿ ಸಾಃ ಹುಬ್ಬರವಾಡಿ ಹಾಲಿ ವಸ್ತಿ ಬೀರಪ್ಪನ ಗಲ್ಲಿ ರಾಯಬಾಗ ಪಟ್ಟಣ (ಗುತ್ತಿಗೆದಾರರು) ರವರು ಪಂಚಾಯತ್ ರಾಜ್ ಇಲಾಖೆಯಿಂದ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ, ಖೇತಗೌಡರ ತೋಟ, ಮುಗಳಖೋಡದ ಶಾಲೆಯ ಶೌಚಾಲಯ ನಿರ್ಮಾಣ ಕುರಿತು ರೂ. ೩,೦೦,೦೦೦/- ಗಳ ಕಾಮಗಾರಿಯನ್ನು ಮುಕ್ತಾಯಗೊಳಿಸಿದ್ದರು.

ಈ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ ಉಪ ವಿಭಾಗ, ರಾಯಬಾಗ ರವರಿಗೆ ಬಿಲ್ ಮಂಜೂರಾತಿಗಾಗಿ ಕಳುಹಿಸಲು ಸೆಕ್ಷನ್ ಆಫೀಸರ್/ ಕಿರಿಯ ಅಭಿಯಂತರ ಪಂಡಿತ ವಾಘ ರವರು ಸ್ಥಳಕ್ಕ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ಕಾಮಗಾರಿಯ ಬಗ್ಗೆ ಅಳತೆಯನ್ನು (ಎಮ್‌ಬಿ) ದಾಖಲಿಸಿಕೊಂಡು ಸದರಿ ಬಿಲ್‌ನ್ನು ತಯಾರಿಸಿ ಕೊಡಲು ಫಿರ್ಯಾದಿಗೆ ತಿಳಿಸಿದ್ದು ಈ ಬಗ್ಗೆ ಬಿಲ್ಲಿಗೆ ಸಹಿ ಮಾಡಲು ಶೇ ೫ ರಷ್ಟು ಲಂಚ ನೀಡಲು ತಿಳಿಸಿದ್ದರು.
ನಂತರ ಕಾಮಗಾರಿಗೆ ಸಂಬಂಧಿಸಿದಂತೆ ಸೆಕ್ಷನ್ ಆಫೀಸರ್/ ಕಿರಿಯ ಅಭಿಯಂತರ ಪಂಡಿತ ವಾಘ ರವರಿಗೆ ಭೇಟಿಯಾಗಿ ಬಿಲ್ ಸಹಿ ಮಾಡಿ ಅನುಮೋದನೆಗೆ ಕಳುಹಿಸಲು ವಿನಂತಿಸಿದಾಗ ಅವರು ರೂ. ೧೨,೦೦೦/- ಗಳ ಲಂಚ ನೀಡುವಂತೆ ತಿಳಿಸಿರುತ್ತಾರೆ. ಆಗ ಅಧಿಕಾರಿಯ ಲಂಚದ ಬೇಡಿಕೆಯ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿಯಲ್ಲಿ ಪ್ರಕರಣ ಸಂಖ್ಯೆ ೦೪/೨೦೨೪ ಕಲಂ ೭(ಚಿ) ಪಿಸಿ ಕಾಯ್ದೆ ೧೯೮೮ (ತಿದ್ದುಪಡಿ- ೨೦೧೮) ರಡಿಯಲ್ಲಿ ದಾಖಲಿಸಿಕೊಳ್ಳಲಾಯಿತು.


ಈ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರಿಯು ದಿನಾಂಕಃ ೦೫/೦೩/೨೦೨೪ ರಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಛೇರಿ, ಪಂಚಾಯತ್ ರಾಜ್ ಇಂಜಿನಿಯಂರಿಂಗ್ ಉಪವಿಭಾಗ, ರಾಯಬಾಗದಲ್ಲಿ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಟ್ರ್ಯಾಪ್ ಮಾಡಿದ್ದು, ಪಂಡಿತ ವಾಘ ಸೆಕ್ಷನ್ ಆಫೀಸರ್/ಕಿರಿಯ ಅಭಿಯಂತರರು ಇವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ.

ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಹನಮಂತರಾಯರವರ ಮಾರ್ಗದರ್ಶನದಲ್ಲಿ, ಕಾರ್ಯಾಚರಣೆಯನ್ನು ಭರತರೆಡ್ಡಿ ಪೊಲೀಸ್ ಉಪಾಧೀಕ್ಷಕರು, ನಿರಂಜನ ಪಾಟೀಲ, ಯು. ಎಸ್. ಅವಟಿ ಮತ್ತು ರವಿಕುಮಾರ ಧರ್ಮಟ್ಟಿ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಯವರಾದ ರವಿ ಮಾವರಕರ, ವ್ಹಿ ಬಿ ಬಸಕ್ರಿ, ರಾಜಶ್ರೀ ಭೋಸಲೆ, ಆರ್.ಬಿ.ಗೋಕಾಕ, ಸಂತೋಷ ಬೆಡಗ, ಗಿರಿಶ್ ಪಾಟೀಲ, ಬಸವರಾಜ ಕೊಡೊಳ್ಳಿ, ಅಭಿಜಿತ ಜಮಖಂಡಿ ಇವರುಗಳು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button