*ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಭದ್ರತಾ ಲೋಪ*: *ಮೊಬೈಲ್, 3 ಸಿಮ್, 8,500 ರೂ. ನಗದು ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೆ ಭದ್ರತಾ ಲೋಪ ಬೆಳಕಿಗೆ ಬಂದಿದೆ. ಜೈಲಿನ ಆವರಣದಲ್ಲಿ ನಡೆಸಿದ ಹಠಾತ್ ತಪಾಸಣೆ ವೇಳೆ ಕೀಪ್ಯಾಡ್ ಮೊಬೈಲ್, ಮೂರು ಸಿಮ್ ಕಾರ್ಡ್ಗಳು ಹಾಗೂ 8,500 ರೂಪಾಯಿ ನಗದು ಪತ್ತೆಯಾಗಿದ್ದು, ಕಾರಾಗೃಹದ ಭದ್ರತಾ ವ್ಯವಸ್ಥೆ ಕುರಿತು ಪ್ರಶ್ನೆಗಳು ಎದ್ದಿವೆ.
ಜೈಲಿನ ಸೂಪರಿಂಟೆಂಡೆಂಟ್ ಬಿ.ಎಂ. ಕೊಟ್ರೇಶ್ ನೇತೃತ್ವದಲ್ಲಿ ದಿಢೀರ್ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಟವರ್-2ರ ಸಿ-ಬ್ಯಾರಕ್ನ ಕೊಠಡಿ ಸಂಖ್ಯೆ 4ರಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಲತೇಶ ಎಂಬ ಕೈದಿಯ ಬ್ಯಾಗ್ನಲ್ಲಿ ಕೀಪ್ಯಾಡ್ ಮೊಬೈಲ್ ಪತ್ತೆಯಾಗಿದೆ.
ಇದರ ಬೆನ್ನಲ್ಲೇ ಕೊಠಡಿ ಸಂಖ್ಯೆ 5ರಲ್ಲಿ ಮತ್ತೊಂದು ಅಕ್ರಮ ವಸ್ತು ಪತ್ತೆಯಾಗಿದೆ. ಮೊಹಮ್ಮದ್ ನವಾಜ್ ಎಂಬ ಕೈದಿಯ ಟೋಪಿಯೊಳಗೆ ರಹಸ್ಯವಾಗಿ ಬಚ್ಚಿಡಲಾಗಿದ್ದ ಮೂರು ಸಿಮ್ ಕಾರ್ಡ್ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದರ ಜೊತೆಗೆ ಅಡುಗೆ ಮನೆಯ ಶೌಚಾಲಯದಲ್ಲಿ ಇರಿಸಲಾಗಿದ್ದ ಬ್ಯಾಗ್ವೊಂದರಲ್ಲಿ 8,500 ರೂಪಾಯಿ ನಗದು ಹಣವೂ ಪತ್ತೆಯಾಗಿದೆ.
ಜೈಲಿನೊಳಗೆ ನಿಷೇಧಿತ ವಸ್ತುಗಳು ಮತ್ತು ಹಣ ಪ್ರವೇಶಿಸಲು ಸಹಕರಿಸಿದ ಸಿಬ್ಬಂದಿ ಹಾಗೂ ಇದನ್ನು ಬಳಸಿದ ಕೈದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇತ್ತೀಚೆಗಷ್ಟೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಜೈಲು ಸೆಲ್ನಲ್ಲೂ ಸ್ಮಾರ್ಟ್ಫೋನ್ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನಲ್ಲೇ ಮತ್ತೆ ಮೊಬೈಲ್, ಸಿಮ್ ಕಾರ್ಡ್ಗಳು ಮತ್ತು ನಗದು ಪತ್ತೆಯಾಗಿರುವುದು ಕಾರಾಗೃಹದ ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಜೈಲಿನೊಳಗೆ ಮೊಬೈಲ್ಗಳು, ಸಿಮ್ಗಳು ಮತ್ತು ನಗದು ಹಣ ಹೇಗೆ ಪ್ರವೇಶಿಸಿತು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




