ಯಡಿಯೂರಪ್ಪನವರನ್ನು ನೋಡಿದರೆ ಅನುಕಂಪ ಮೂಡುತ್ತದೆ

ಯಡಿಯೂರಪ್ಪನವರನ್ನು ನೋಡಿದರೆ ಅನುಕಂಪ ಮೂಡುತ್ತದೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು- 

ಬಿ.ಎಸ್​.ಯಡಿಯೂರಪ್ಪ ಅನುಭವಿಸುತ್ತಿರುವ ಅವಮಾನ, ಅನ್ಯಾಯ, ಅಸಂತೋಷ ನೋಡಿದರೆ ಅವರ ರಾಜಕೀಯ ಎದುರಾಳಿಯಾದ ನನ್ನಂತವನಲ್ಲೂ ಅವರ ಬಗ್ಗೆ ಅನುಕಂಪ ಮೂಡುತ್ತದೆ ಎಂದಿದ್ದಾರೆ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

 ಸರಣಿ ಟ್ವೀಟ್​ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಲೆಳೆದಿರುವ ಅವರು, ಸುಮ್ಮನೆ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಹೋಗುವುದು ಉತ್ತಮ ಎನಿಸುತ್ತದೆ. ಜನರಿಗೆ ಯಾರು ಬೇಕೋ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ನೀವು ಕೂಡ ನಿಮ್ಮ ಹೈಕಮಾಂಡ್​ನಿಂದ ಮತ್ತಷ್ಟು ಅವಮಾನಿತರಾಗುವುದು ತಪ್ಪುತ್ತದೆ ಎಂದು ಯಡಿಯೂರಪ್ಪನವರಿಗೆ ಸಲಹೆ ನೀಡಿದ್ದಾರೆ.
ನಿನ್ನೆ ಖಾತೆ ಹಂಚಿಕೆ, ಡಿಸಿಎಂಗಳ ನೇಮಕವಾಗಿರುವ ಬೆನ್ನಲ್ಲೇ ಪಕ್ಷದೊಳಗೆ ಕೆಲವು ಭಿನ್ನ ಧ್ವನಿಗಳು ಎದ್ದಿವೆ.  ಬಿ.ಎಸ್​.ಯಡಿಯೂರಪ್ಪನವರೇ ನೀವು ಮುಖ್ಯಮಂತ್ರಿಯಾದಾಗ ಪ್ರಮಾಣವಚನ ಸ್ವೀಕರಿಸಲು ಮೂರು ದಿನ ಬೇಕಾಯಿತು. ಸಂಪುಟ ರಚನೆಗೆ 26 ದಿನಗಳನ್ನು ತೆಗೆದುಕೊಳ್ಳಲಾಯಿತು. ಖಾತೆ ಹಂಚಿಕೆಗೆ ಮತ್ತೆ 6 ದಿನ ತೆಗೆದುಕೊಂಡಿರಿ. ಈ ಭಿನ್ನಮತ ಶಮನಕ್ಕೆ ಇನ್ನೆಷ್ಟು ದಿನ ಬೇಕು? ಈ ಎಲ್ಲದರ ನಡುವೆ ಸರ್ಕಾರ ಟೇಕ್​ಆಫ್​ ಆಗುವುದು ಯಾವಾಗ ಎಂದು  ಪ್ರಶ್ನಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಪುಟ ರಚನೆ, ಖಾತೆ ಹಂಚಿಕೆ ಕಸರತ್ತುಗಳನ್ನು ಗಮನಿಸಿದರೆ ಜನಪ್ರತಿನಿಧಿಗಳ ದನಿ ಉಡುಗಿ ಹೋಗಿ ಸಂವಿಧಾನೇತರ ಶಕ್ತಿಗಳೇ ವಿಜೃಂಭಿಸುತ್ತಿರುವ ಹಾಗೆ ಕಾಣಿಸುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಟ್ವೀಟ್​ ಮಾಡಿದ್ದಾರೆ.
ಇದೆಲ್ಲ ನಡೆಯುತ್ತಿರುವುದಕ್ಕೆ ಕಾರಣ ಏನೇ ಇರಲಿ. ಆದರೆ ಎಲ್ಲವೂ ಪ್ರಜಾಪ್ರಭುತ್ವಕ್ಕೆ ಕಂಟಕವಾಗಿವೆ. ಈಗ ನಿಮ್ಮ ಸಚಿವರು ಯಾಕಾಗಿ ಅಸಮಾಧಾನಗೊಂಡಿದ್ದಾರೆಂದು ತಿಳಿದುಕೊಳ್ಳುವುದು ಜನರ ಹಕ್ಕು. ನೀವು ಅಸಮರ್ಥರು ಎಂದು ಅವರು ಭಾವಿಸುತ್ತಿದ್ದಾರಾ ಅಥವಾ ಲಾಭದಾಯಕ ಖಾತೆಗಳನ್ನು ಪಡೆಯಲು ಬಯಸುತ್ತಿದ್ದಾರಾ? ಅಥವಾ ರಾಜ್ಯ ಸರ್ಕಾರವನ್ನು ಅಸಾಂವಿಧಾನಿಕವಾಗಿ ನಿಯಂತ್ರಿಸುತ್ತಿರುವ ಕಾಣದ ಕೈಗಳ ವಿರುದ್ಧ ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾರಾ ಎಂದು ಟ್ವೀಟ್​ ಮೂಲಕ ಯಡಿಯೂರಪ್ಪನವರನ್ನು ಪ್ರಶ್ನಿಸಿದ್ದಾರೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button