ಪ್ರಗತಿವಾಹಿನಿ ಸುದ್ದಿ, ಗೋಕಾಕ: ಮತದಾನವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ಅಂಗವಾಗಿದೆ. ಎಲ್ಲ ಅರ್ಹ ಮತದಾರರು ಸ್ವಯಂ ಪ್ರೇರಿತವಾಗಿ ಯಾವುದೇ ಆಸೆ ಆಮೀಷಗಳಿಗೆ ಒಳಗಾಗದೆ ಖಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಸ್ವೀಫ್ ಸಮಿತಿ ಅಧ್ಯಕ್ಷ ಗೋಕಾಕ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.
ಅವರು ಶನಿವಾರ ಗೋಕಾಕ ಉಪಚುನಾವಣೆ-೨೦೧೯ ನಿಮಿತ್ಯ ತಾಲ್ಲೂಕು ಸ್ವೀಫ್ ಸಮಿತಿ ವತಿಯಿಂದ ನೈತಿಕ ಹಾಗೂ ಖಡ್ಡಾಯ ಮತದಾನಕ್ಕೆ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಶತ ಮತದಾನ ಮಾಡುವುದರ ಮೂಲಕ ಸಮಾಜ ಪರ ಕಾಳಜಿಯುಳ್ಳ ಯೋಗ್ಯ ಸಮರ್ಥ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸಂವಿಧಾನವು ಜನಸಾಮಾನ್ಯರಿಗೆ ನೀಡಿರುವ ಅಮೂಲ್ಯವಾದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮತದಾನವು ತಮ್ಮ ಹಕ್ಕು ಮತ್ತು ಕರ್ತವ್ಯವಾಗಿದ್ದು ಮತದಾನದ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಗೋಕಾಕ ಡಿ.ವಾಯ್.ಎಸ್.ಪಿ ಡಿ.ಟಿ ಪ್ರಭು, ಬಿಇಒ ಜಿ.ಬಿ ಬಳಗಾರ ಮಾತನಾಡಿ, ಗೋಕಾಕ ಉಪಚುನಾವಣೆಯಲ್ಲಿ ಸ್ವೀಫ್ ಸಮಿತಿಯ ಪಾತ್ರ, ಮತದಾರರ ಹಕ್ಕು ಮತ್ತು ಕರ್ತವ್ಯಗಳು ಕುರಿತು ವಿವರಿಸಿ ಶಾಂತಯುತವಾಗಿ ಉಪಚುನಾವಣೆಯಾಗಲು ಮತದಾರರು ಸಹಕರಿಸಲು ವಿನಂತಸಿದರು.
ಜಾಥಾ ಕಾರ್ಯಕ್ರವು ತಹಶೀಲ್ದಾರ ಕಛೇರಿಯಿಂದ ಪ್ರಾರಂಭಗೊಂಡು ಲಕ್ಷ್ಮೀ ದೇವಸ್ಥಾನ, ಲಕ್ಷ್ಮೀ ದೇವರ ಪಾದಗಟ್ಟೆ ಮುಖಾಂತರ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಮಯೂರ ಶಾಲೆಗೆ ತಲುಪಿತು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿ ನದಾಫ್, ನೀತಿ ಸಂಹಿತೆ ನೋಡಲ್ ಅಧಿಕಾರಿ ಅಶೋಕ ಮಲಬನ್ನವರ, ಪೌರಾಯುಕ್ತ ವಿಠ್ಠಲ ತಡಸಲೂರ, ಸಿಡಿಪಿಒ ಅನಿಲ ಕಾಂಬಳೆ, ಮುಖ್ಯೋಪಾಧ್ಯಾಯ ಗೋಪಾಲ ಮಾಳಗಿ, ವಿಷಯ ನಿರ್ವಾಹಕ ಶಂಕರ ಗುಜನಟ್ಟಿ ಹಾಗೂ ಶಾಲಾ ಶಿಕ್ಷಕರು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ