ಈಶ್ವರೀಯ ವಿಶ್ವವಿದ್ಯಾಲಯದಿಂದ ನಿಸ್ವಾರ್ಥ ಸೇವೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾವು ರಾಜಕಾರಣಿಗಳು ಹೆಸರು ಮಾಡುವ ಆಸೆ, ಆಕಾಂಕ್ಷೆಗಳನ್ನಿಟ್ಟುಕೊಂಡು ಕೆಲಸ ಮಾಡುತ್ತೇವೆ. ಆದರೆ ಈಶ್ವರೀಯ ವಿಶ್ವವಿದ್ಯಾಲಯ ನಿಸ್ವಾರ್ಥ ಭಾವದಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿಯ ಲಕ್ಷ್ಮೀ ನಗರದ ಸಿದ್ದಿ ವಿನಾಯಕ ಕಾಲನಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ “ಜ್ಞಾನ ಪ್ರಕಾಶ ಕುಂಜ” ದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಭಾಗಿಯಾಗಿ, ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯಕ್ಕೆ ತನ್ನದೇ ಆದ ವಿಶೇಷತೆಯಿದ್ದು, ಮನಸ್ಸಿಗೆ ಶಾಂತಿಯನ್ನು ನೀಡುವುದಲ್ಲದೆ ಮಾನಸಿಕ ಸ್ಥಿರತೆ, ಏಕಾಗ್ರತೆ, ಸಕಾರಾತ್ಮಕ ಚಿಂತನೆಯಿಂದ ಒತ್ತಡಮುಕ್ತ ಜೀವನ, ತನ್ಮೂಲಕ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತಿದೆ. ನಾವು ನಂಬಿರುವ ಪರಮಾತ್ಮನನ್ನು ನೆನೆಯೊದರಲ್ಲೇ ಪರಮಸುಖವಿದೆ ಎನ್ನುವ ಸಂದೇಶವನ್ನು ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಸಮಾಜಕ್ಕೆ ಸಾರುತ್ತಿದೆ. ನಾವು ರಾಜಕಾರಣಿಗಳು ಹಲವಾರು ಆಸೆ, ಆಕಾಂಕ್ಷೆ, ಗುರಿಗಳನ್ನಿಟ್ಟುಕೊಂಡು ಸಮಾಜದಲ್ಲಿ ಹೆಸರು ಮಾಡಲು ಹೊರಟಿದ್ದೇವೆ, ಆದರೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ನಿಸ್ವಾರ್ಥ ಭಾವನೆಯಿಂದ ಸಮಾಜವನ್ನು ಸುಧಾರಿಸುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಹೆಬ್ಬಾಳಕರ್ ಹೇಳಿದರು.
ಈ ಸಮಯದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಸುಲೋಚನ, ವಿದ್ಯಾ, ಮಿನಾಕ್ಷಿ, ವಿಠ್ಠಲ ದೇಸಾಯಿ, ಯುವರಾಜ ಕದಂ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ