ಪ್ರಗತಿವಾಹಿನಿ ಸುದ್ದಿ, ಕಾರವಾರ – ಮೋಜು ಮಸ್ತಿಗಾಗಿ ಜಿಲ್ಲೆಗೆ ಬರುವವರನ್ನು ಹಿಂದೆ ಕಳಿಸಿ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಆದೇಶಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರ್, ಇಒ, ಉಪ ವಿಭಾಗಾಧಿಕಾರಿ ಹಾಗೂ ಆರೋಗ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸದ ಉದ್ದೇಶಕ್ಕಾಗಿ ಬರುವವನ್ನು ಗಡಿಯಲ್ಲಿಯೇ ತಡೆ ಹಿಡಿಯಲಾಗುವುದು. ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ -ಪುನಸ್ಕಾರಗಳು ನಡೆಯಬಹುದಾಗಿದ್ದು, ಭಕ್ತಾದಿಗಳು ಅಲ್ಲಿಗೆ ತೆರಳಲು ನಿರಾಕರಿಸಲಾಗಿದೆ. ಅರ್ಚಕರು ಹಾಗೂ ಆಡಳಿತ ಮಂಡಳಿಯವರು ಪ್ರವೇಶಿಸಬಹುದಾಗಿದ್ದು ೫ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುವಂತಿಲ್ಲ ಎಂದರು.
ಹೊಟ್ಟೆಪಾಡಿಗಾಗಿ ದುಡಿಯುವವರನ್ನು ಅಡ್ಡಿಪಡಿಸಬೇಡಿ, ಆದರೆ ಜನಸಂದಣಿಗೆ ಅವಕಾಶ ನೀಡದೇ ಮಂಜಾಗೃತಾ ಕ್ರಮಗಳನ್ನು ಕೈಗೊಳ್ಳಿ. ಇಂದಿನಿಂದ ಸಾರ್ವಜನಿಕರು ನೀಡುವ ದೂರುಗಳನ್ನು ಅಧಿಕಾರಿಗಳು ಸ್ವೀಕರಿಸಬೇಕು. ಅದಕ್ಕಾಗಿ ಇಂದಿನಿಂದಲೇ ಜಿಲ್ಲೆಯಲ್ಲಿ ಸೋಶಿಯಲ್ ಡಿಸಿಶನ್ಶಿಪ್ ನ್ನು ಜಾರಿಗೊಳಿಸಿ ಆದೇಶಿಸಲಾಗುವುದೆಂದರು. ಜಿಲ್ಲೆಯಲ್ಲಿ ಜನ ಜಾಗೃತಿ ಕಾರ್ಯಕ್ರಮಗಳು ಯಶಸ್ವಿಯಾಗಿದ್ದು, ಇನ್ನೂ ಉತ್ತಮವಾಗಿ ಜನರನ್ನು ತಲುಪುವಂತೇ ಮಾಡಬೇಕೆಂದರು.
೧೪೪ ಸೆಕ್ಷನ್ ಜಾರಿ
ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಮುನ್ನಚ್ಚರಿಕಾ ಕ್ರಮವಾಗಿ ೧೪೪ ಸೆಕ್ಷನ್ ಜಾರಿಗೊಳಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಎಫ್.ಐ.ಆರ್ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ ಆದೇಶಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್ ಅವರು ಸರ್ಕಾರಿ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ಮಾರ್ಚ ೩೧ ರವರೆಗೆ ಮನೆಯಲ್ಲಿಯೇ ಕುಳಿತು ಕೆಲಸ ನಿರ್ವಹಿಸಲು ಆದೇಶಿಸಿದ್ದಾರೆ.
ಅನಾರೋಗ್ಯ ಇರುವ ಇನ್ನುಳಿದ ಕಛೇರಿ ಸಿಬ್ಬಂದಿಗಳು ಸಹ ಆಯಾ ಹಂತದ ಇಲಾಖೆಯ ಮುಖ್ಯಸ್ಥರುಗಳಿಂದ ಅನುಮತಿಯನ್ನು ಪಡೆದು ಮನೆಯಲ್ಲಿಯೇ ಕುಳಿತು ಮಾರ್ಚ ೩೧ ರ ವರೆಗೆ ಕಾರ್ಯ ನಿರ್ವಹಿಸಬಹುದಾಗಿದೆ. ಮೂಲಭೂತ ಸೌಕರ್ಯಗಳಿಗೆ ಧಕ್ಕೆಯಾಗದಂತೇ ಕ್ರಮ ಕೈಗೊಳ್ಳುವುದರ ಜೊತೆಯಲ್ಲಿ ಜನ ಸಂದಣಿಗೆ ಎಲ್ಲಿಯೂ ಅವಕಾಶ ನೀಡಬಾರದು ಎಂದರು.
ಪೋಲಿಸ್ ವರಿಷ್ಠಾಧಿಕಾರಿ ಶಿವ ಪ್ರಕಾಶ್ ದೇವರಾಜು ಮಾತನಾಡಿ, ಕ್ಷಣ ಕ್ಷಣದ ಮಾಹಿತಿಗಳನ್ನು ವಾಟ್ಸಾಪ್ ಗ್ರೂಪ್ಗಳಿಗೆ ರವಾನಿಸಿ, ಎಲ್ಲಿಯೂ ವದಂತಿಗಳಿಗೆ ಅವಕಾಶ ನೀಡದಿರಿ. ಚೆಕ್ ಪೋಸ್ಟ್ಗಳಲ್ಲಿ ಸರಿಯಾಗಿ ತನಿಖೆ ನಡೆಯಲಿ ಎಂದರು. ಇದು ಕೇವಲ ಒಂದು ಇಲಾಖೆಯ ಜವಾಬ್ದಾರಿಯಲ್ಲ ಇಂತಹ ಸಮಯಗಳಲ್ಲಿ ಎಲ್ಲ ಇಲಾಖೆಗಳೂ ಒಗ್ಗಟ್ಟಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ, ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಜಿ.ಎನ್ ಅಶೋಕ್ ಕುಮಾರ್, ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಶಿವಾನಂದ್ ಕುಡ್ತಕರ್, ಡಾ. ವಿನೋದ್ ಭೂತೆ ಸೇರಿದಂತೇ ಮತ್ತತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ