
ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ- ಧಾರವಾಡವನ್ನು ವಿಭಜನೆ ಮಾಡುವ ಮೂಲಕ ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕ ರಚನೆಗೆ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಮಾಹಿತಿ ಹೊರ ಬೀಳುತ್ತಿದ್ದಂತೆ ಧಾರವಾಡ ಪಾಲಿಕೆ ಕಚೇರಿ ಎದುರು “ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ”ಯ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. 2014ರಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಆಗ್ರಹಗಳು ಕೇಳಿ ಬರುತ್ತಲೇ ಇದ್ದು, ಇಂದು ವಿಭಜನಗೆ ಸಂಪುಟ ಅಸ್ತು ಎಂದಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ.1 ರಿಂದ 26 ಅನ್ನು ಒಳಗೊಂಡಂತೆ ಧಾರವಾಡ ನಗರಕ್ಕೆ ಪ್ರತ್ಯೇಕ ಪಾಲಿಕೆ ರಚಿಸಲಾಗುತ್ತದೆ. ಉಳಿದ ವಾರ್ಡ್ ನಂ.27-82 ರವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯನ್ನಾಗಿ ಮುಂದುವರಿಯಲಿವೆ.
ಧಾರವಾಡದಲ್ಲಿ 6.5 ಲಕ್ಷ ಜನಸಂಖ್ಯೆ ದಾಟಿದೆ. ಸ್ವತಂತ್ರ ಪಾಲಿಕೆ ರಚನೆಗೆ ಅಂದಾಜು 3.5 ಲಕ್ಷ ಜನಸಂಖ್ಯೆ ಮೇಲಿರಬೇಕು. ಧಾರವಾಡ ಪ್ರತ್ಯೇಕ ಪಾಲಿಕೆಗೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.