ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗಂಭೀರವಾದ ವಿಚಾರ ಹಾಗೂ ಕಲ್ಪನೆಗಳಿಂದ ಪರಿಪೂರ್ಣ ಬರಹಗಾರನಾಗಲು ಸಾಧ್ಯ. ಲೇಖಕಿ ಪಾರ್ವತಿ ಪಿಟಗಿಯವರು ವೈವಿಧ್ಯಮಯ ಬರವಣಿಗೆಯನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಕಥೆ, ಕಾದಂಬರಿ, ಲೇಖನ, ಪ್ರಬಂಧಗಳನ್ನು ಬರೆದಿದ್ದಾರೆ. ಬೆಳಗಾವಿಯ ಒಂದು ಪುಟ್ಟ ಗ್ರಾಮದಲ್ಲಿದಲ್ಲಿದ್ದುಕೊಂಡು ಏನೆಲ್ಲ ಬರೆಯುತ್ತಿರುವ ಲೇಖಕಿಯ ಕುರಿತು ತುಂಬ ಅಭಿಮಾನವೆನಿಸುತ್ತದೆ. ಗಡಿಭಾಗದ ವಿಶಿಷ್ಟ ಭಾಷೆ ಇವರದ್ದು ಎಂದು ಖ್ಯಾತ ಅಂಕಣ ಬರಹಗಾರ ಪ್ರೊ. ಪ್ರೇಮಶೇಖರ ಅವರು ಇಂದಿಲ್ಲಿ ಹೇಳಿದರು.
ನಗರದ ಕ್ರಿಯಾಶೀಲ ಬಳಗ ಹಾಗೂ ಶಾಂಗ್ರೀ-ಲಾ ಅಕಾಡಮಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಾರ್ವತಿ ಪಿಟಗಿಯವರ ಸಮಾಜ ಸ್ಪಂದನ(ವೈಚಾರಿಕ ಲೇಖನಗಳ ಸಂಕಲನ), ಹೀಗೊಂದು ಗ್ರಾಮಾಯಣ(ಕಾದಂಬರಿ) ಜೋಡಿ ಕೃತಿಗಳ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಕೃತಿಗಳನ್ನು ಬಿಡುಗಡೆಗೊಳಿಸಿರುವ ಪ್ರೊ. ಪ್ರೇಮಶೇಖರ ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ, ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆಯನ್ನು ಕೊಟ್ಟಿರುವ ಪಾರ್ವತಿ ಪಿಟಗಿಯವರಿಗೆ ಸಿಗಬೇಕಾದ ಪ್ರಚಾರ, ಪುರಸ್ಕಾರ ಸಿಕ್ಕಿಲ್ಲ. ಏಕೆಂದರೆ ಅವರೆಂದೂ ಅವುಗಳ ಬೆನ್ನು ಹತ್ತಿದವರಲ್ಲ. ಯಾವುದೇ ಪಂಥಗಳ ಬೆನ್ನು ಹತ್ತದೇ ಬರೆಯುವ ಕಾಯಕವನ್ನು ಮಾಡುತ್ತ ಬಂದಿರುವ ಪಿಟಗಿಯವರು ಇಂದಿನ ಬರಹಗಾರರಿ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಪತ್ರಕರ್ತ ಎಲ್. ಎಸ್. ಶಾಸ್ತ್ರಿ, ಬೆಳಗಾವಿ ಭಾಗದಲ್ಲಿ ಕಟ್ಟಿಮನಿ, ಪುರಾಣಿಕರ ನಂತರ ಕಾದಂಬರಿ ಕ್ಷೇತ್ರ ನಿಂತ ನೀರಾಗಿತ್ತು. ಎಂಟು ಕಾದಂಬರಿಯನ್ನು ಬರೆದಿರುವ ಪಾರ್ವತಿ ಪಿಟಗಿ ಆ ಕೊರತೆಯನ್ನು ತುಂಬಿದ್ದಾರೆ. ಪ್ರಾದೇಶಿಕ ಭಾಷೆಯ ಕಾದಂಬರಿಯೊಂದನ್ನು ಅವರು ಕೊಡಲಿ ಎಂದು ಹೇಳಿದರು.
ಎರಡೂ ಕೃತಿಗಳನ್ನು ಪರಿಚಯಿಸಿದ ಡಾ. ಗುರುದೇವಿ ಹುಲೆಪ್ಪನವರಮಠ ಪಾರ್ವತಿ ಪಿಟಗಿಯವರ ಸಮಾಜ ಸ್ಪಂದನ ವೈಚಾರಿಕ ಲೇಖನಗಳ ಸಂಕಲನದಲ್ಲಿ ಗಾಢವಾಗಿ ಸಾಮಾಜಿಕ ಕಳಕಳಿಯನ್ನು ಬಿಂಬಿಸುವಂತಹ ಲೇಖನಗಳು ಇದರಲ್ಲಿವೆ. ಅದರಂತೆ ಹೀಗೊಂದು ಗ್ರಾಮಾಯಣ ಕಾದಂಬರಿಯಲ್ಲಿ ಒಂದು ಹಳ್ಳಿಯ ಚಿತ್ರಣವಿದ್ದು ಶಿಷ್ಟ ಹಾಗೂ ದುಷ್ಟಶಕ್ತಿಯ ಪಾತ್ರಗಳನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ. ಎಲ್ಲರೂ ಓದಲೇ ಬೇಕಾದ ಕೃತಿ ಇದಾಗಿದೆ ಎಂದು ಹೇಳಿದರು.
ಲೇಖಕಿ ಪಾರ್ವತಿ ಪಿಟಗಿ ಹಾಗು ಪ್ರೊ. ಪ್ರೇಮಶೇಖರ ಅವರನ್ನು ಶಾಲುಹೊದಿಸಿ ನೆನಪಿನ ಕಾಣಿಕೆ, ಫಲಪುಷ್ಪ ನೀಡಿ ಗೌರವಿಸಲಾಯಿತು.
ಕೃತಿಗಾರ್ತಿ ಪಾರ್ವತಿ ಪಿಟಗಿಯವರು ಮಾತನಾಡಿ ನಾನು ಎಂಟು ಕಾದಂಬರಿಗಳನ್ನು ಬರೆದಿದ್ದು ಎಲ್ಲವೂ ರಾಜ್ಯಮಟ್ಟದ ಬೇರೆ ಬೇರೆ ಪತ್ರಿಕೆಗಳಲ್ಲಿ ಧಾರವಾಹಿಯಾಗಿ ಹರಿದು ಬಂದಿವೆ. ನನ್ನ ಬರಹಗಳಲ್ಲಿ ಸಮಾಜದಲ್ಲಿ, ಹಾಗೂ ಜೀವನದಲ್ಲಿ ಬರುವ ಹಲವಾರು ಸಮಸ್ಯೆಗಳನ್ನು ಅಲ್ಲದೆ ಅವುಗಳಿಗೆ ಸಮಂಜಸವಾದ ಪರಿಹಾರವನ್ನು ನನ್ನ ತಿಳುವಳಿಕೆಯ ಮಟ್ಟಿಗೆ ತೆರೆದಿಡುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿ ತಮ್ಮ ಬರುವಣಿಗೆಯ ಬೆಳವಣಿಗೆಗೆ ಕಾರಣರಾದವರನ್ನು ನೆನೆದರು.
ಅಪುರ್ವಾ ಪ್ರಾರ್ಥಿಸಿದರು. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ ಅತಿಥಿಗಳಾಗಿ ಆಗಮಿಸಿದ್ದರು. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕೆ. ತಾನಾಜಿ ನಿರೂಪಿಸಿದರು. ದೀಪಿಕಾ ಚಾಟೆ, ಕೆ. ಮಲ್ಲಿಕಾರ್ಜುನ ಪರಿಚಯಿಸಿ ಸ್ವಾಗತಿಸಿದರು. ದುರದುಂಡಯ್ಯ ಬಾವಿಮನಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ