Karnataka NewsLatest

ಕನಿಷ್ಠ 5 ವರ್ಷವಾದರೂ ಗ್ರಾಮೀಣಪ್ರದೇಶದಲ್ಲಿ ಸೇವೆ ಸಲ್ಲಿಸಿ -ಡಾ.ಕೆ. ಸುಧಾಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ನಗರ ಪ್ರದೇಶದಲ್ಲಿ ಕೇವಲ ಶೇ.೩೦ರಷ್ಟು ಜನರು ವಾಸ ಮಾಡುತ್ತಿದ್ದರೂ ಕೂಡ ಅವರು ಸಕಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೃಷಿಯನ್ನೇ ನಂಬಿರುವ ಗ್ರಾಮೀಣ ಪ್ರದೇಶದಲ್ಲಿ ಸುಮಾರು ಶೇ. ೭೦ರಷ್ಟು ಜನ ವಾಸಿಸುತ್ತಿದ್ದಾರೆ. ಅವರು ಶಿಕ್ಷಣ ಮತ್ತು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ವೈದ್ಯಕೀಯ ಶಿಕ್ಷಣ ಮುಗಿಸಿ ವೈದ್ಯ ವೃತ್ತಿಯಲ್ಲಿ ತೊಡಗುವ ಯುವ ವೈದ್ಯರು ಸಾಮಾಜ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠಪಕ್ಷ ೫ ವರ್ಷವಾದರೂ ಗ್ರಾಮೀಣಪ್ರದೇಶದಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ ಸುಧಾಕರ ಅವರು ಕರೆ ನೀಡಿದರು.

ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಆಂಡ್ ರಿಸರ್ಚ್ (ಡೀಮ್ಡ್ ವಿಶ್ವವಿದ್ಯಾಲಯ)ನ ೧೦ನೇ ಘಟಿಕೋತ್ಸವ ಬೆಂಗಳೂರಿನಿಂದ ನೇರಪ್ರಸಾರದ ಮೂಲಕ ಭಾಷಣ ಮಾಡಿದ ಅವರು, ಗ್ರಾಮೀಣ ಜನರ ಸಾಮಾಜಿಕ ಜೀವನ ಮಟ್ಟ ಸುಧಾರಿಸಲು ಕೆಎಲ್‌ಇ ಸಂಸ್ಥೆ ಸಂಸ್ಥೆಯ ಸಪ್ತರ್ಷಿಗಳು ಮಾಡಿದ ಕಾರ‍್ಯ ಅತ್ಯಂತ ಶ್ಲಾಘನೀಯ. ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆಯನ್ನು ತರಲು ಬಯಸಿದ ಸಪ್ತರ್ಷಿಗಳು ಗ್ರಾಮೀಣ ಭಾಗದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ವಿದ್ಯಾಸಂಸ್ಥೆಗಳನ್ನು ತೆರೆಯುವುದರ ಮೂಲಕ ನವಯುಗಾಂತರಕ್ಕೆ ನಾಂದಿ ಹಾಡಿತು. ವೈದ್ಯಕೀಯ ಶಿಕ್ಷಣ ಮತ್ತು ಸೇವೆಗೆ ತೊಡಗಿಕೊಂಡು ಈ ಭಾಗದ ಜನರ ಜೀವನಾಡಿಯಾಗಿ ಕಾರ‍್ಯನಿರ್ವಹಿಸುತ್ತಿದೆ. ಅದರ ಪ್ರತಿಫಲವಾಗಿ ಇಂದು ಉತ್ತರ ಕರ್ನಾಟಕ ಪ್ರದೇಶವು ಸುಶಿಕ್ಷತರ ನಾಡಾಗಿ ಪರಿವರ್ತಿತಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೈದ್ಯ ವಿದ್ಯಾರ್ಥಿಗಳು ಮೊದಲು ತಮ್ಮ ಪಾಲಕರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಅವರ ತ್ಯಾಗ ಸೇವೆಯಿಂದ ನಿಮ್ಮನ್ನು ಸಾಮಾಜಿಕ ಸೇವೆಗೆ ತಯಾರು ಮಾಡಿದ್ದಾರೆ. ಅವರ ಆಸೆಯಂತೆ ನೀವು ಮುನ್ನಡೆಯಬೇಕು. ನೀವು ಪಡೆದುಕೊಳ್ಳುವ ಪ್ರಮಾಣಪತ್ರಕ್ಕಿಂತ ನಿಮ್ಮಲ್ಲಿರುವ ಬುದ್ದಮತ್ತೆ, ಕೌಶಲ್ಯಗಳು ಹಾಗೂ ಸಂಸ್ಕಾರ ನಿಮ್ಮನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗುತ್ತವೆ. ಜೀವನದಲ್ಲಿ ಕಲಿಕೆ ನಿರಂತರವಾಗಿರುತ್ತದೆ. ಜವಾಬ್ದಾರಿಯನ್ನು ಅರಿತು ವೃತ್ತಿಯಲ್ಲಿ ತೊಡಗಿಕೊಳ್ಳಬೇಕು. ಗುಣಮುಖವಾದ ರೋಗಿಯು ನಿಮಗೆ ಭಾವನಾತ್ಮಕವಾಗಿ ಅಭಿನಂದನೆ ಸಲ್ಲಿಸುವದೇ ನಿಜವಾದ ಸುವರ್ಣ ಪದಕ ಎಂದ ಅವರು, ಕೋವಿಡ್ -೧೯ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹುಸವಾಲಾಗಿ ಪರಿಣಮಿಸಿದೆ. ಸಾಮಾಜಿಕ ಪೀಡಗಾಗಿರುವ ಈ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಅತ್ಯಂತ ಕ್ಲಿಷ್ಟಕರವಾದ ಸಂದರ್ಭದಲ್ಲಿ ವೈದ್ಯವೃಂದ ಮತ್ತು ಆರೋಗ್ಯ ಕಾರ‍್ಯಕರ್ತರು ಸರಕಾರದೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿಕೊಂಡರು.
ಶಿಕ್ಷಣದಿಂದ ಸಮಾಜವನ್ನು ಸಶಕ್ತವನ್ನಾಗಿ ಮಾಡಲು ಸಾಧ್ಯ ಎಂಬುದನ್ನು ಕೆಎಲ್‌ಇ ಸಂಸ್ಥೆ ಮಾಡಿತೋರಿಸಿದೆ. ಚಿಕ್ಕದಾಗಿ ಪ್ರಾರಂಭವಾದ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದಿದೆ. ಸಂಸ್ಥೆಯ ಕಾರ‍್ಯಾಧ್ಯಕ್ಷ  ಡಾ. ಪ್ರಭಾಕರ ಕೋರೆ ಅವರ ಮುಂದಾಳತ್ವದಲ್ಲಿ ಕೇವಲ ಭಾರತದಲ್ಲಿ ಅಷ್ಟೆ ಅಲ್ಲ ದೇಶವಿದೇಶಗಳಲ್ಲೂ ಹೆಸರು ಗಳಿಸಿದೆ. ಕರುನಾಡಿನ ಕೀರ್ತಿಪತಾಕೆಯನ್ನು ಹಾರಿಸಿದೆ. ಅದಕ್ಕಾಗಿ ಆ ಸಪ್ತರ್ಷಿಗಳಿಗೆ ತಲೆಬಾಗಿ ನಮಿಸುವೆ. ಸುಮಾರು ೪೦೦೦ ಹಾಸಿಗೆಗಳನ್ನು ಒಂದೇ ಸೂರಿನಡಿ ಕಲ್ಪಿಸಿ, ಆಯುರ್ವೇದ, ಹೋಮಿಯೋಪತಿ,ಅಲೊಪತಿ, ಸೇರಿದಂತೆ ಎಲ್ ಕೆಜಿಯಿಂದ ಹಿಡಿದು ಪಿಜಿವರೆಗೆ ಶಿಕ್ಷಣ ಕಲ್ಪಿಸುತ್ತಿದೆ. ಈ ಭಾಗದ ಜನರು ಹೆಮ್ಮೆ ಪಡುವಂತಾಗಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಪತಿ ಡಾ. ವಿವೇಕ ಸಾವೋಜಿ ಅವರು, ವಿಶ್ವವಿದ್ಯಾಲಯವು ರಾಜ್ಯದಲ್ಲಿ ದ್ವಿತೀಯ ರ‍್ಯಾಂಕ್ ಪಡೆದಿದ್ದು, ರಾಷ್ಟ್ರಮಟ್ಟದಲ್ಲೂ ಕೂಡ ಖ್ಯಾತಿ ಗಳಿಸಿದೆ. ಪ್ರತಿವರ್ಷ ಅಮೇರಿಕದ ಜೆಪ್ಪರಸನ್ ವಿಶ್ವವಿದ್ಯಾಲಯದಿಂದ ೧೦ ವಿದ್ಯಾರ್ಥಿಗಳು ಇಲ್ಲಿ ಅಭ್ಯಸಿಸಲು ಬರುತ್ತಾರೆ. ಮುಂಬರುವ ಶೈಕ್ಷಣಿಕ ವರ್ಷದಿಂದ ೧೫೦ ವಿದ್ಯಾರ್ಥಿಗಲೊಂದಿಗೆ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭವಾಗಲಿದೆ. ಅಸ್ಟರ ಗ್ರುಪ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಬೆಂಗಳೂರು ಮತ್ತು ಪುಣೆಯಲ್ಲಿ ಆಸ್ಪತ್ರೆ ಪ್ರಾರಂಭಿಸಲಾಗುತ್ತಿದೆ. ಅಲ್ಲದೇ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸೇವೆ ಕಲ್ಪಿಸಲಿದೆ ಎಂದು ತಿಳಿಸಿದರು.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಟ್ಟು ೧೩೯೮ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದ್ದು, ಒಟ್ಟು ೪೪ ಜನ ವಿದ್ಯಾರ್ಥಿಗಳು ಸುವಣ್ಪದಕ ಪಡೆದುಕೊಂಡಿದ್ದಾರೆ. ೧೨ ಜನ ಪಿಹೆಚ್‌ಡಿ, ೯ ಜನ ಪೋಸ್ಟ ಡಾಕ್ಟರಲ್, ೪೦೦ ಸ್ನಾತ್ತಕೋತ್ತರ, ೮೮೬ ಪದವಿ, ೫೧ ಪೋಸ್ಟ ಗ್ರ್ಯಾಜ್ಯುಯೇಟ ಡಿಪ್ಲೊಮಾ, ೧೦ ಫೆಲೊಶಿಪ್ ಹಾಗೂ ೧೬ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ. ಎಂಬಿಬಿಎಸ್‌ನಲ್ಲಿ ಡಾ. ಸಂದೇಶ ಜೋಶಿ ಮೂರು ಚಿನ್ನದ ಪದಕ ಪಡೆದರೆ, ಡಾ. ಶಿವಾನಿ ಮರೆಗುದ್ದಿ, ಡಾ. ವಿಶಾಲ ಶಶಿಕಾಂತ ಕುಲಗೋಡ, ತಲಾ ಒಂದು ಪದಕ ಪಡೆದುಕೊಂಡಿದ್ದಾರೆ. ಬಿಡಿಎಸ್‌ನಲ್ಲಿ ಡಾ. ನಿಹಾರಿಕಾ ಸಬರವಾಲ, ಡಾ. ರೋಶನ ರಂಗ್ನೇಕರ, ಬಿಫಾರ‍್ಮಾದಲ್ಲಿ ರೇವತಿ ಭಾಪ್ಕರ, ಬಿಎಸ್ಸಿ ನರ್ಸಿಂಗನಲ್ಲಿ ಸಾವಿತ್ರಿ ಪಾಟೀಲ, ಫರ‍್ನಾಂಡಿಸ್ ಕ್ವಿನ್ಸಿ, ಫಿಸಿಯೋಥೆರಪಿಯಲ್ಲಿ ಮಾನಸಿ ಕಾರನಿಕ ಹಾಗೂ ಆಯುರ್ವೇದದಲ್ಲಿ ಡಾ. ಮಾಧುರಿ ರೊಡ್ಡ ಅವರು ೪ ಹಾಗೂ ಡಾ ಭೀಮರೆಡ್ಡಿ ಮ್ಯಾಕಲ ೩ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.
ಸಂಪೂರ್ಣ ಕಾರ‍್ಯಕ್ರಮವನ್ನು ಡಿಜಿಟಲ್ ಪ್ಲ್ಯಾಟಫಾರ‍್ಮ ಹಾಗೂ ಕಡಿಮೆ ಸದಸ್ಯರು ಸಾಮಾಜಿಕ ಅಂತರ ಕಾಯ್ದುಕೊಂಡು, ಅವರಿರುವ ಸ್ಥಳದಿಂದಲೇ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು. ವೇದಿಕೆ ಮೇಲೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಹಾಗೂ ಕಂಟ್ರೋಲರ ಆಫ್ ಎಕ್ಸಾಮಿನೇಶನನ್ ಡಾ. ಸುನೀಲ ಜಲಾಲಪುರೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಡಾ. ವಿ ಎಸ್ ಸಾಧುನವರ, ಕಾರ‍್ಯದರ್ಶಿ ಡಾ. ಬಿ ಜಿ ದೇಸಾಯಿ, ಕುಲಸಚಿವ ಡಾ. ವಿ ಎ ಕೋಠಿವಾಲೆ, ಡಾ. ವಿ ಡಿ ಪಾಟೀಲ, ಡಾ ಎಂ ವಿ ಜಾಲಿ, ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ಅಲ್ಕಾ ಕಾಳೆ, ಡಾ. ಶ್ರೀನಿವಾಸಪ್ರಸಾದ ಡಾ. ಆರ್ ಎಸ್ ಮುಧೋಳ, ಸುಧಾ ರೆಡ್ಡಿ, ಎಂ ಎಸ್ ಗಣಾಚಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ. ಅವಿನಾಶ ಕವಿ ಹಾಗೂ ಡಾ. ನೇಹಾ ಧಡೇದ ಅವರು ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button