Kannada NewsKarnataka NewsLatest

ಹಿರಿಯ ನಾಗರಿಕರ ಸಂರಕ್ಷಣೆಗಾಗಿ ಸರ್ಕಾರದಿಂದ ಹಲವಾರು ಯೋಜನೆಗಳು

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ವಿವಿಧ ಕಾರಣಗಳಿಂದ ಕುಟುಂಬದಿಂದ ದೂರವಾಗಿ ಬಾಳ ಮುಸ್ಸಂಜೆಯಲ್ಲಿ ದಿಕ್ಕುಕಾಣದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಹಿರಿಯ ಜೀವಗಳ ಸಂರಕ್ಷಣೆಗಾಗಿ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಕುರಿತು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಅಂದಾಜು 58 ಲಕ್ಷ ಹಿರಿಯ ನಾಗರಿಕರಿದ್ದು, ಇಲಾಖೆಯಿಂದ 2023 -24ನೇ ಸಾಲಿನಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ನಮ್ಮ ಸರ್ಕಾರ ರೂ.8.23 ಕೋಟಿ ರೂ. ಅನುದಾನವನ್ನು ನಿಗದಿಪಡಿಸಿ, ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. 

1. ವೃದ್ಧಾಶ್ರಮ:

 ರಾಜ್ಯ ಸರ್ಕಾರದಿಂದ ಸ್ವಯಂಸೇವಾ ಸಂಸ್ಥೆಗಳ ಮೂಲಕ ನಿರ್ಗತಿಕ ವೃದ್ಧರಿಗಾಗಿ ಅವರ ಕ್ಷೇಮಾಭಿವೃದ್ಧಿಗಾಗಿ 35 ವೃದ್ಧಾಶ್ರಮಗಳನ್ನು ನಡೆಸಲಾಗುತ್ತಿದೆ.

 ಈ ವೃದ್ಧಾಶ್ರಮಗಳಲ್ಲಿ ಅವರಿಗೆ ಉಚಿತ ಊಟ, ವಸತಿ, ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ.

ತಲಾ 25 ಫಲಾನುಭವಿಗಳ ಒಂದು ವೃದ್ಧಾಶ್ರಮಕ್ಕೆ ರೂ.12 ಲಕ್ಷಗಳ ಅನುದಾನವನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ.

ಜಿಲ್ಲಾ ಮಟ್ಟದಲ್ಲಿ ಒಟ್ಟು 26 ಹಾಗೂ ಕಂದಾಯ ಉಪ ವಿಭಾಗಗಳಲ್ಲಿ  ಪ್ರಸ್ತುತ 2 ವೃದ್ಧಾಶ್ರಮಗಳನ್ನು ನಡೆಸಲಾಗುತ್ತಿದೆ.

 ಉಳಿದಂತೆ 43 ವೃದ್ಧಾಶ್ರಮಗಳನ್ನು ಹಂತಹಂತವಾಗಿ ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುತ್ತಿದೆ. 

ಅಲ್ಲದೇ ಕೇಂದ್ರ ಸರ್ಕಾರದ ವತಿಯಿಂದಲೂ ಸಹ 45 ವೃದ್ದಾಶ್ರಮಗಳನ್ನು ಸ್ವಯಂಸೇವಾ ಸಂಸ್ಥೆಗಳ ಮುಖಾಂತರ ನಿರ್ವಹಿಸಲಾಗುತ್ತಿದೆ.

25 ರಿಂದ 50 ಫಲಾನುಭವಿಗಳಿಗೆ ಒಂದು ಕೇಂದ್ರಕ್ಕೆ ಪ್ರತಿ ಸಂಸ್ಥೆಗೆ ರೂ. 25 ಲಕ್ಷಗಳಷ್ಟು ಅನುದಾನವನ್ನು ಒದಗಿಸಲಾಗುತ್ತಿದೆ.  

2. ಹಗಲು ಯೋಗಕ್ಷೇಮ ಕೇಂದ್ರಗಳು: 

ಹಗಲು ವೇಳೆಯಲ್ಲಿ ಕುಟುಂಬದಲ್ಲಿ ನೋಡಿಕೊಳ್ಳಲು ಸಾಧ್ಯವಾಗದಂತಹ ಹಿರಿಯ ನಾಗರಿಕರು ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಸಾಮಾಜಿಕವಾಗಿ ತಮ್ಮ ವಯೋಮಾನದವರೊಂದಿಗೆ ಬೆರೆತು ಓದು, ಆಟೋಟ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಂತೋಷವಾಗಿ ಕಾಲಕಳೆಯಲು ಹಗಲು ಯೋಗಕ್ಷೇಮ ಕೇಂದ್ರಗಳಲ್ಲಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

 ಹಾಗೂ ಒಟ್ಟು 25  ಹಗಲು ಯೋಗಕ್ಷೇಮ ಕೇಂದ್ರಗಳಲ್ಲಿ ಪ್ರತಿ ವರ್ಷ ಪ್ರತಿ ಕೇಂದ್ರಕ್ಕೆ  ರೂ.11.20 ಲಕ್ಷಗಳ ಅನುದಾನವನ್ನು ಸರ್ಕಾರದಿಂದ ನೀಡಲಾಗುತ್ತಿದೆ. 

3. ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳು: 

ಎಲ್ಲಾ ಜಿಲ್ಲೆಗಳಲ್ಲಿ ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆಯ ನೆರವಿನೊಂದಿಗೆ ಹಿರಿಯ ನಾಗರಿಕರಿಗೆ ಉಚಿತವಾಗಿ ಆರೋಗ್ಯ, ಆರ್ಥಿಕ ಮತ್ತು ಕಾನೂನಾತ್ಮಕವಾದ ಸಲಹೆ,  ಮಾರ್ಗದರ್ಶನ, ಸಂಕಷ್ಟದಲ್ಲಿರುವವರ ಸಂರಕ್ಷಣೆ ಮುಂತಾದ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹಿರಿಯರ ಸಹಾಯವಾಣಿ ಸಂಖ್ಯೆ 1090 (ಶುಲ್ಕರಹಿತ ದೂರವಾಣಿ) ಮೂಲಕ ಕಾರ್ಯನಿರ್ವಹಿಸುತ್ತಿದೆ.

ಪ್ರತಿ ವರ್ಷ ಪ್ರತಿ ಕೇಂದ್ರಕ್ಕೆ  ರೂ.6.15 ಲಕ್ಷ ರೂ.ಗಳ ಅನುದಾನವನ್ನು ಸರ್ಕಾರದಿಂದ ನೀಡಲಾಗುತ್ತಿದೆ.  

  ಕೇಂದ್ರ ಸರ್ಕಾರದೊಂದಿಗೆ ಸೇರಿ  ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ 14567 ನ್ನು ರಾಜ್ಯದಲ್ಲಿ ಸಹ ನಡೆಸಲಾಗುತ್ತಿದೆ.

ಈ ಸಹಾಯವಾಣಿಯಲ್ಲಿ ಉನ್ನತ ತಾಂತ್ರಿಕತೆಯನ್ನು ಬಳಸಿಕೊಂಡು ಹಿರಿಯ ನಾಗರಿಕರಿಗೆ ಶೀಘ್ರವಾಗಿ ಸೇವೆ ನೀಡಲಾಗುತ್ತಿದೆ.

4. ಡಿಮೆನ್ಷಿಯಾ ಹಗಲು ಯೋಗಕ್ಷೇಮ ಕೇಂದ್ರ :

ಮರೆಗುಳಿತನದಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಚಿಕಿತ್ಸಾ ಸೌಲಭ್ಯ ನೀಡಲು   ಡಿಮೆನ್ಷಿಯಾ ಹಗಲು ಯೋಗಕ್ಷೇಮ ಕೇಂದ್ರವನ್ನು ದಾವಣಗೆರೆ  ಜಿಲ್ಲೆಯಲ್ಲಿ ಸ್ವಯಂಸೇವಾ ಸಂಸ್ಥೆಯ ಮುಖಾಂತರ ನಡೆಸಲಾಗುತ್ತಿದೆ.  

20 ಫಲಾನುಭವಿಗಳ ಒಂದು ಕೇಂದ್ರಕ್ಕೆ ವಾರ್ಷಿಕ ರೂ.25 ಲಕ್ಷ ರೂ.ಗಳ ಅನುದಾನವನ್ನು ನೀಡಲಾಗುತ್ತಿದೆ. 

5. ವೃದ್ಧಾಪ್ಯ ವೇತನ:

  ರಾಜ್ಯದಲ್ಲಿನ ಬಡ ಹಿರಿಯ ನಾಗರಿಕರಿಗೆ ಮಾಸಾಶನ ನೀಡಲಾಗುತ್ತಿದ್ದು, 60 ರಿಂದ 64 ವರ್ಷ ವಯೋಮಾನದ ವೃದ್ಧರಿಗೆ ಪ್ರತಿ ತಿಂಗಳು 600 ರೂ. ಹಾಗೂ 65 ವರ್ಷ ಮೇಲ್ಪಟ್ಟ ವೃದ್ಧರಿಗೆ 1200 ರೂ. ಮಾಸಾಶನ ನೀಡಲಾಗುತ್ತಿದೆ. 

 ಒಟ್ಟು ರಾಜ್ಯದಲ್ಲಿ 49,17,928 ಹಿರಿಯ ನಾಗರಿಕರಿಗೆ ಮಾಸಾಶನ ನೀಡಲಾಗುತ್ತಿದೆ. ಕಂದಾಯ ಇಲಾಖೆಯಿಂದ ಮಾಸಾಶನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಇದಕ್ಕಾಗಿ ವಾರ್ಷಿಕ ರೂ.5720 ಕೋಟಿ ವೆಚ್ಚ ಮಾಡಲಾಗುತ್ತಿದೆ.   

6. ಸಂಚಾರಿ ಆರೋಗ್ಯ ಘಟಕ (ಮೊಬೈಲ್ ಮೆಡಿಕೇರ್ ಯುನಿಟ್):

ಹಿರಿಯ ನಾಗರಿಕರಿಗೆ ಅವರು ವಾಸಿಸುವ ಸ್ಥಳದಲ್ಲಿಯೇ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಸಂಚಾರಿ ಆರೋಗ್ಯ ಘಟಕವನ್ನು ಕೇಂದ್ರ ಸರ್ಕಾರದ ವತಿಯಿಂದ ಕೋಲಾರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಒಂದು ಕೇಂದ್ರಕ್ಕೆ  11.20 ಲಕ್ಷ ರೂ. ಅನುದಾನವನ್ನು ನೀಡಲಾಗುತ್ತಿದೆ.

7. ಜಿರಿಯಾಟ್ರಿಕ್ ಕೇಂದ್ರಗಳು:  

ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ಉಚಿತ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿರಿಯಾಟ್ರಿಕ್ ಕೇಂದ್ರಗಳನ್ನು ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ನಡೆಸಲಾಗುತ್ತಿದೆ.  

8. ಪಾಲಕರ ಪೋಷಣೆ ಸಂರಕ್ಷಣೆ:

 ಪಾಲಕರ ಪೋಷಣೆ ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ 2007ರನ್ವಯ ದೌರ್ಜನ್ಯ, ಶೋಷಣೆ, ಮೋಸ, ವಂಚನೆಗೆ ಒಳಪಟ್ಟ ಹಿರಿಯ ನಾಗರಿಕರು ಕಾಯ್ದೆಯನ್ವಯ ಪ್ರತಿ ಕಂದಾಯ ಉಪವಿಭಾಗದ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ನಿರ್ವಹಣಾ ನ್ಯಾಯಮಂಡಳಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ನ್ಯಾಯವನ್ನು ಪಡೆಯಬಹುದಾಗಿರುತ್ತದೆ. 

9. ಬಸ್ ಪ್ರಯಾಣ ದರದಲ್ಲಿ ರಿಯಾಯಿತಿ:

  ಹಿರಿಯ ನಾಗರಿಕರಿಗೆ ರಾಜ್ಯ ಹಾಗೂ ನಗರ ಸಾರಿಗೆ ಬಸ್‌ಗಳಲ್ಲಿ ಶೇ.25ರಷ್ಟು ಪ್ರಯಾಣದರದಲ್ಲಿ ರಿಯಾಯಿತಿಯನ್ನು ನೀಡಲಾಗುತ್ತಿದೆ. 

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಹಿರಿಯ ಮಹಿಳೆಯರೂ ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಬಹುದಾಗಿದೆ.

10. ಹಿರಿಯ ನಾಗರಿಕರಿಗೆ ಗುರುತಿನ ಚೀಟಿ:

 ವಿವಿಧ ಸೌಲಭ್ಯಗಳನ್ನು ಪಡೆಯಲು ಅನುವಾಗುವಂತೆ ನೀಡಲಾಗುತ್ತಿರುವ ಹಿರಿಯರ ಗುರುತಿನ ಚೀಟಿಯನ್ನು ಸೇವಾಸಿಂಧು ಆನ್‌ಲೈನ್ ಮೂಲಕ ವಿತರಿಸಲಾಗುತ್ತಿದೆ.

ಈವರೆಗೆ ಸೇವಾಸಿಂಧು ಪೋರ್ಟ್‌ಲ್‌ನಲ್ಲಿ 2,13,705 ಹಿರಿಯರು ಗುರುತಿನ ಚೀಟಿ ಪಡೆಯಲು ನೋಂದಣಿ ಮಾಡಿಸಿದ್ದು, 2,07,189 ಮಂದಿ ಈಗಾಗಲೆ ಗುರುತಿನ ಚೀಟಿ ಪಡೆದಿದ್ದಾರೆ.

11. ರಾಜ್ಯ / ರಾಷ್ಟ್ರೀಯ ಪ್ರಶಸ್ತಿ:

 ವೃದ್ಧಾಪ್ಯವು ಭವಿಷ್ಯದಲ್ಲಿ ಯಾರನ್ನೂ ಕಾಡದೆ ಬಿಡುವುದಿಲ್ಲ.

 ವೃದ್ದರು ನಮ್ಮ ಬದುಕಿಗೆ ನೀಡಿರುವ ಕೊಡುಗೆಯನ್ನು ಸದಾ ನೆನಪಿಸಿಕೊಂಡು ಅದಕ್ಕೆ ಕೃತಜ್ಞತೆ ವ್ಯಕ್ತಪಡಿಸಬೇಕಾಗುತ್ತದೆ.

ಸಮಾಜಕ್ಕೆ ಮಾದರಿಯಾಗಿ ನಿಲ್ಲುವ ಹಿರಿಯರನ್ನು ಗೌರವಿಸುವ ಸಲುವಾಗಿ ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯರನ್ನು ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಹಾಗೂ ಅವರ ಒಳಿತಿಗಾಗಿ ಶ್ರಮಿಸಿದ ಸಂಸ್ಥೆಯನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿ ಅವರನ್ನು ಗೌರವಿಸಲಾಗುತ್ತಿದೆ.

ಇದೇ ರೀತಿ ಕೇಂದ್ರ ಸರ್ಕಾರದಿಂದಲೂ ಸಹ ವಿವಿಧ ಕ್ಷೇತ್ರಗಳ ಸಾಧಕರಿಗೆ ವಯೋಸಮ್ಮಾನ್ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗುತ್ತಿದೆ.   

          ಪ್ರಸಕ್ತ ಸಾಲಿನಲ್ಲಿ ಈ ಪ್ರಶಸ್ತಿಗಳಿಗೆ ಭಾಜನರಾದ ಎಲ್ಲಾ ಹಿರಿಯರಿಗೂ ನನ್ನ ಅಭಿನಂದನೆಗಳು ಹಾಗೂ ವಂದನೆಗಳನ್ನು ಅರ್ಪಿಸುತ್ತೇನೆ.

ಹಿರಿಯ ನಾಗರಿಕರ ಒಳಿತಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಹಾಗೂ ರಾಜ್ಯದಲ್ಲಿ ಹಿರಿಯ ನಾಗರಿಕರಿಗಾಗಿ ಅನುಷ್ಠಾನಗೊಳಿಸುತ್ತಿರುವ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯಿದೆ-2007ರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮಕೈಗೊಳ್ಳಲಾಗಿದೆ.

12. ಹಿರಿಯರ ನಾಗರಿಕರ ದಿನಾಚರಣೆ ಅಂಗವಾಗಿ  ಕ್ರೀಡಾ & ಸಾಂಸ್ಕೃತಿಕ ಕಾರ್ಯಕ್ರಮ: 

ಹಿರಿಯರ ಏಕತಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಹಿರಿಯ ನಾಗರಿಕರ ದಿನಾಚರಣೆಯ ಸಂದರ್ಭದಲ್ಲಿ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಪ್ರಸಕ್ತ ಸಾಲಿನಲ್ಲಿ  ಜಿಲ್ಲಾ ಮಟ್ಟದಲ್ಲಿ  ಆಯೋಜಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button