Kannada NewsKarnataka NewsLatest

‍*ಅಭಿಮನ್ಯುವಿನ ಕುಟುಂಬದಲ್ಲಿ ಶೋಕದ ಛಾಯೆ*: *ಮಾವುತ ವಸಂತ ಪತ್ನಿ ಅಂಬಿಕಾ ನಿಧನ*

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆಯೇ ದುಃಖದ ಸುದ್ದಿ ಹೊರಬಿದ್ದಿದೆ. ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆಯ ಮಾವುತ ಜೆ.ಎಸ್. ವಸಂತ ಅವರ ಪತ್ನಿ ಅಂಬಿಕಾ (35) ಅವರು ಅನಾರೋಗ್ಯದಿಂದ ಅಕ್ಟೋಬರ್ 15ರಂದು ಬೆಳಿಗ್ಗೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಈ ಸುದ್ದಿ ಗಜಪಡೆಯ ಮಾವುತರು ಮತ್ತು ಕಾವಾಡಿಗರ ಕುಟುಂಬಗಳಲ್ಲಿ ಶೋಕ ಮೂಡಿಸಿದೆ.

ಈ ಬಾರಿ ದಸರಾ ಮಹೋತ್ಸವದಲ್ಲಿ ನಿಶಾನೆ ಆನೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಭಿಮನ್ಯುವಿನೊಂದಿಗೆ ಮಾವುತ ವಸಂತ ಅವರ ಕುಟುಂಬವೂ ಮೈಸೂರಿನ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿತ್ತು. ಮೂರು ದಿನಗಳ ಹಿಂದೆ ಅಂಬಿಕಾ ಅವರ ಆರೋಗ್ಯದಲ್ಲಿ ಏಕಾಏಕಿ ತೀವ್ರ ವ್ಯತ್ಯಯ ಉಂಟಾಗಿತ್ತು. ಕೂಡಲೇ ಅವರನ್ನು ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಆರೋಗ್ಯ ಮತ್ತಷ್ಟು ಹದಗೆಟ್ಟ ಪರಿಣಾಮ ಗುರುವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಅಂಬಿಕಾ ಅವರ ನಿಧನದ ಬಳಿಕ ಪಾರ್ಥಿವ ಶರೀರವನ್ನು ಮತ್ತಿಗೋಡು ಆನೆ ಕ್ಯಾಂಪ್‌ಗೆ ಕೊಂಡೊಯ್ಯಲಾಗಿದೆ. ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ದಸರಾ ಗಜಪಡೆಯ ಇತರ ಮಾವುತರು ಮತ್ತು ಕಾವಾಡಿಗರು ಮೈಸೂರಿನಿಂದ ತೆರಳಿದ್ದಾರೆ. ಕುಟುಂಬದಲ್ಲಿ ದುಃಖ ಮಡುಗಟ್ಟಿರುವ ನಡುವೆಯೂ ದಸರಾ ಕರ್ತವ್ಯ ಮುಂದುವರಿಯಲಿದ್ದು, ಅಭಿಮನ್ಯುವಿನ ಜವಾಬ್ದಾರಿಯನ್ನು ಕಾವಾಡಿ ರಾಜು ಅವರು ವಹಿಸಿಕೊಳ್ಳಲಿದ್ದಾರೆ.

ಅಂಬಿಕಾ ಅವರು ಅಭಿಮನ್ಯುವನ್ನು ಮನೆಯ ಮಗನಂತೆ ಪ್ರೀತಿಸುತ್ತಿದ್ದರು. ಅಭಿಮನ್ಯು ಕೂಡ ವಸಂತ ಅವರ ಕುಟುಂಬದ ಸದಸ್ಯನಂತೆಯೇ ಬೆಳೆದಿದ್ದಾನೆ. ಈ ಕುಟುಂಬ ಮತ್ತು ಅಭಿಮನ್ಯುವಿನ ನಡುವಿನ ಬಾಂಧವ್ಯ ಹಲವು ವರ್ಷಗಳ ಹಿಂದಿನದು. ವಸಂತ ಅವರ ಕುಟುಂಬ ಮೂರನೇ ಪೀಳಿಗೆಯಿಂದ ಆನೆಗಳ ಆರೈಕೆ ಹಾಗೂ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅಭಿಮನ್ಯುವಿನೊಂದಿಗೆ ಈ ಕುಟುಂಬ ಹೊಂದಿರುವ ಆತ್ಮೀಯ ಸಂಬಂಧಕ್ಕೆ ದಶಕಗಳ ಇತಿಹಾಸವಿದೆ.

ವಸಂತ ಅವರ ತಂದೆ ಸಣ್ಣಪ್ಪ ಅವರು ಅಭಿಮನ್ಯುವಿನ ಮುಖ್ಯ ಮಾವುತರಾಗಿದ್ದರು. ಚಿಕ್ಕಂದಿನಿಂದಲೇ ತಂದೆಯೊಂದಿಗೆ ಆನೆಯ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದ ವಸಂತ, ಆರಂಭದಲ್ಲಿ ಕಾವಾಡಿಯಾಗಿ ಸೇವೆ ಸಲ್ಲಿಸಿದರು. ತಂದೆಯ ನಿವೃತ್ತಿಯ ನಂತರ ಅಭಿಮನ್ಯುವಿನ ಮುಖ್ಯ ಮಾವುತರ ಜವಾಬ್ದಾರಿ ವಹಿಸಿಕೊಂಡರು. “ಅಭಿಮನ್ಯು ಮತ್ತು ನನ್ನ ನಡುವಿನ ಸಂಬಂಧ ಒಂದು ಜೀವ, ಎರಡು ದೇಹ ಇದ್ದಂತೆ” ಎಂದು ವಸಂತ ಅವರು ಹಲವು ಬಾರಿ ತಮ್ಮ ಬಾಂಧವ್ಯವನ್ನು ವಿವರಿಸಿದ್ದಾರೆ. ಅಭಿಮನ್ಯುವಿನ ಸ್ವಭಾವವನ್ನು ಅರ್ಥಮಾಡಿಕೊಂಡು ಅದರೊಂದಿಗೆ ನಿಕಟವಾಗಿ ಬೆರೆತಿರುವ ವಸಂತ ಅವರಿಗೆ ಆನೆಯ ಮೇಲಿನ ಪ್ರೀತಿ ಅಪಾರ.

2002ರಲ್ಲಿ ಮಸ್ತಿಗುಡಿ ಅರಣ್ಯ ಪ್ರದೇಶದಲ್ಲಿ ನಡೆದ ಹುಲಿ ಕಾರ್ಯಾಚರಣೆಯ ಸಂದರ್ಭದಲ್ಲಿ ಉಳಿದ ಆನೆಗಳು ಹೆದರಿ ಓಡಿದರೂ ಅಭಿಮನ್ಯು ಧೈರ್ಯದಿಂದ ನಿಂತು ವಸಂತ ಅವರ ಪ್ರಾಣ ಕಾಪಾಡಿದ್ದ ಎಂಬ ಘಟನೆ ಇವರಿಬ್ಬರ ನಡುವಿನ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಇಂತಹ ಅನೇಕ ಅನುಭವಗಳು ಅವರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.

ಕರ್ತವ್ಯಕ್ಕೆ ವಸಂತ ಅವರ ಕುಟುಂಬ ನೀಡಿರುವ ಮಹತ್ವವೂ ಗಮನಾರ್ಹ. ಕಾಡಾನೆ ಸೆರೆ ಕಾರ್ಯಾಚರಣೆಯ ಸಂದರ್ಭದಲ್ಲಿ ಮಗನ ನಿಧನದ ಸುದ್ದಿ ಬಂದಾಗಲೂ, ಮತ್ತೊಂದು ಸಂದರ್ಭದಲ್ಲಿ ತಾಯಿ ಅಗಲಿದಾಗಲೂ ವಸಂತ ಅವರು ಕರ್ತವ್ಯದ ಸ್ಥಳದಲ್ಲೇ ಉಳಿದು ಅಭಿಮನ್ಯುವಿನೊಂದಿಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ವನ್ಯಜೀವಿ ಸಂರಕ್ಷಣೆಯ ಸೇವೆ ಮತ್ತು ಕರ್ತವ್ಯನಿಷ್ಠೆಯನ್ನು ಗುರುತಿಸಿ ಅವರಿಗೆ ಮುಖ್ಯಮಂತ್ರಿಗಳ ಪದಕವೂ ಲಭಿಸಿದೆ. ಇದೀಗ ಅಂಬಿಕಾ ಅವರ ನಿಧನದಿಂದ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ದಸರಾ ಗಜಪಡೆಯೊಂದಿಗೆ ಬೆಸೆದುಕೊಂಡಿದ್ದ ಆತ್ಮೀಯ ಕುಟುಂಬವೊಂದು ದುಃಖದಲ್ಲಿ ಮುಳುಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button