Kannada NewsKarnataka News

ಶಂಕರಗೌಡ ಪಾಟೀಲ ಅವರಿಗೆ ಸಚಿವ ದರ್ಜೆ ಹುದ್ದೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಹಿರಿಯ ಬಿಜೆಪಿ ನಾಯಕ ಶಂಕರಗೌಡ ಪಾಟೀಲ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯ ಸಚಿವರ ಸ್ಥಾನ ಹೊಂದಿರುವ ಈ ಹುದ್ದೆಗೆ ಅವರನ್ನು ನೇಮಿಸಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.

ವಿಜಯಪುರ ಮೂಲದ ಶಂಕರಗೌಡ ಪಾಟೀಲ ಬೆಳಗಾವಿಯಲ್ಲೇ ಕಳೆದ ಹಲವು ವರ್ಷಗಳಿಂದ ವಾಸವಾಗಿದ್ದಾರೆ. 1990ರ ಕಾಲದಿಂದಲೂ ಪಕ್ಷದಲ್ಲಿ ಕೆಲಸ ಮಾಡುತ್ತ ಬಂದಿರುವ ಅವರು, ಯುವಮೋರ್ಚಾದಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿ, ಅಯೋಧ್ಯೆ ವಿವಾದ ಹಾಗೂ ಕಾಶ್ಮೀರ ವಿವಾದಗಳಲ್ಲಿ ಸಹ 1994ರ ವೇಳೆಗೆ ಮುರಳಿಮನೋಹರ ಜೋಶಿ ಹಾಗೂ ನರೇಂದ್ರ ಮೋದಿ ಅವರೊಂದಿಗೆ ಹೋರಾಟ ನಡೆಸಿದ್ದರು.

ಕರ್ನಾಟಕ ಅರಣ್ಯ ಕೈಗಾರಿಕೆ ನಿಗಮದ ಚೇರಮನ್ ಆಗಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಚೇರಮನ್ ಆಗಿ ಕೆಲಸ ಮಾಡಿದ್ದಾರೆ. 2 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಅತ್ಯಂತ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದರು.

ಪಕ್ಷದ ಜೊತೆಗೆ ಯಡಿಯೂರಪ್ಪ ಅವರಿಗೂ ನಿಷ್ಠರಾಗಿ, ಅವರು ಕೆಜೆಪಿ ಪಕ್ಷ ಕಟ್ಟಿದಾಗಲೂ ಅವರೊಂದಿಗಿದ್ದರು.

ಹಾರ, ಶಾಲು ಬೇಡ, ಪ್ರವಾಹಕ್ಕೆ ಕೊಡಿ

ತಮ್ಮ ಆಯ್ಕೆಯ ಕುರಿತು ಪ್ರಗತಿವಾಹಿನಿ ಜೊತೆ ಮಾತನಾಡಿದ ಶಂಕರಗೌಡ ಪಾಟೀಲ, ತಮ್ಮ ಮೇಲೆ ವಿಶ್ವಾಸವಿಟ್ಟು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದ್ದಕ್ಕಾಗಿ ಯಡಿಯೂರಪ್ಪ ಹಾಗೂ ಪಕ್ಷದ ಎಲ್ಲ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನನ್ನನ್ನು ನೇಮಿಸಿದ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನರು ಫೋನ್ ಮಾಡಿ ಶುಭಾಷಯ ತಿಳಿಸಿದ್ದಾರೆ. ಯಾರೂ ತಮ್ಮನ್ನು ಅಭಿನಂದಿಸಲು ಹಾರ, ಶಾಲು ತರಬಾರದು. ಪ್ರವಾಹ ಇರುವುದರಿಂದ ಹಾರ ಹಾಗೂ ಶಾಲು ತರಲು ಖರ್ಚು ಮಾಡುವ ಹಣವನ್ನು ಪ್ರವಾಹ ಸಂತ್ರಸ್ತರಿಗೆ ಕೊಡಬೇಕು ಎಂದು ಶಂಕರಗೌಡ ಪಾಟೀಲ ಮನವಿ ಮಾಡಿದ್ದಾರೆ.

ಸಂಬಂಧಿಸಿದ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ – ಮಾನವೀಯ ರಾಜಕಾರಣಿ ಶಂಕರಗೌಡ ಪಾಟೀಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button