
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ವರ್ತುಲ (ರಿಂಗ್) ರಸ್ತೆ ಕಾಮಗಾರಿಗೆ ರಾಜ್ಯದ ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ರೂ 140 ಕೋಟಿ ಅನುದಾನ ನೀಡಿದ್ದಾರೆ.
ಬೆಳಗಾವಿ ವರ್ತುಲ ರಸ್ತೆಗೆ ಅನುದಾನ ಮತ್ತು ಕಾಮಗಾರಿಗೆ ಚಾಲನೆ ನೀಡಬೇಕೆಂದು ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಅವರು ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನ್ಯಾಯವಾದಿ ಎನ್.ಆರ್.ಲಾತೂರ್ ಮತ್ತು ಹಿರಿಯ ವಕೀಲರು ತಿಳಿಸಿದ್ದಾರೆ.

ಫೆಬ್ರವರಿ 10ರಂದು ಬೆಳಗಾವಿಯಿಂದ ವಕೀಲರ ನಿಯೋಗ ಶಂಕರಗೌಡ ಪಾಟೀಲ್ ಮುಖಾಂತರ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ರಿಂಗ್ ರೋಡ್ ಬಗ್ಗೆ ಮನವಿ ಸಲ್ಲಿಸಿತ್ತು ಎಂದೂ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಜನತೆಯ ಅಶೋತ್ತರಗಳಿಗೆ ಹಾಗೂ ಶಂಕರಗೌಡ ಪಾಟೀಲ್ ಅವರ ದಶಕದ ಪ್ರಯತ್ನದ ಫಲವಾಗಿ ಮುಖ್ಯಮಂತ್ರಿಗಳು ರಿಂಗ್ ರಸ್ತೆಗೆ ಹಣ ನೀಡಿದ್ದಾರೆ. ಶಂಕರಗೌಡ ಪಾಟೀಲ 2008ರಿಂದಲೇ ರಿಂಗ್ ರಸ್ತೆಗಾಗಿ ಹೋರಾಟ ನಡೆಸುತ್ತ ಬಂದಿದ್ದಾರೆ ಎಂದಿರುವ ಅವರು 2012ರಲ್ಲಿ ನಡೆದ ಹೋರಾಟದ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.
ಬೆಳಗಾವಿ ರಿಂಗ್ ರಸ್ತೆ ಕಾಮಗಾರಿಯು, ಹಿಂದಿನ ಸರ್ಕಾರದ ನಿರ್ಲಕ್ಷ್ಯದಿಂದ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ರಿಂಗ್ ರಸ್ತೆ ನಿರ್ಮಾಣದಿಂದ ಮೂಲ ಸೌಕರ್ಯವು ಅಭಿವೃದ್ಧಿಯಾಗಿ, ವಾಣಿಜ್ಯ ಚಟುವಟಿಗಳಿಗೆ ಪುಷ್ಟಿ ನೀಡುವುದಲ್ಲದೆ, ಉದ್ಯೋಗವಕಾಶಗಳೂ ಹೆಚ್ಚಾಗುವುದರಿಂದ, ರಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡುವುದು ಕ್ಷೇತ್ರದ ಜನತೆಯ ಬಹುದಿನಗಳ ಬೇಡಿಕೆಯಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ