ಪ್ರಗತಿವಾಹಿನಿ ಸುದ್ದಿ, ಧಾರವಾಡ: ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಎಲ್ಲ ನೆಲೆ-ಮೂಲಗಳ ಸಂಪೂರ್ಣ ಗುರುತ್ವಾಧಿಕಾರವನ್ನು ತಮಗೆ ಧಾರೆ ಎರೆದಿರುವ ಗುರುಗಳಾದ ಶಾಂತಲಿಂಗ ಶಿವಾಚಾರ್ಯ ಶ್ರೀಗಳು ಮುಕ್ತ ಮನದ ಮೇರು ಹೃದಯಿಯಾಗಿದ್ದಾರೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.
ಅವರು ರವಿವಾರ ತಮ್ಮ ಶ್ರೀಮಠದಲ್ಲಿ ಭಕ್ತ ಸಮೂಹ ಹಮ್ಮಿಕೊಂಡಿದ್ದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ 91ನೆಯ ವರ್ಧಂತಿ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕೇವಲ ಹೆಸರಿಗೆ ಮಾತ್ರ ಉತ್ತರಾಧಿಕಾರಿ ಮಾಡಿಕೊಂಡು ಯಾವ ಅಧಿಕಾರವನ್ನೂ ಬಿಟ್ಟುಕೊಡದೇ ಎಲ್ಲವನ್ನೂ ತಮ್ಮ ಬಳಿಯೇ ಇಟ್ಟುಕೊಂಡ ದ್ವಂದ್ವಗಳ ಸಂಕೀರ್ಣತೆಯಲ್ಲಿರುವ ಮಠಗಳನ್ನು ಕಂಡಿದ್ದೇವೆ. ಆದರೆ ಗುರುಗಳಾದ ಶ್ರೀಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ತಮಗೆ ಒಪ್ಪಿಸಿ ಮುಕ್ತರಾಗಿದ್ದಾರೆ ಎಂದರು.
ಶ್ರೀಗುರುವಿನ ಋಣ
ಭಕ್ತಗಣದ ವಿವಿಧ ತುಲಾಭಾರ ಸೇವೆಗಳನ್ನು ಸ್ವೀಕರಿಸಿ ಆಶೀರ್ವಚನ ನೀಡಿದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರು, ಜನ್ಮ ನೀಡಿದ ತಂದೆ-ತಾಯಿ ಹಾಗೂ ಧರ್ಮ ದೀಕ್ಷೆ ನೀಡಿದ ಶ್ರೀಗುರುವಿನ ಋಣವನ್ನು ತೀರಿಸಲು ಎಲ್ಲರೂ ಸಂಕಲ್ಪಿಸಬೇಕು. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸಾಕ್ಷಾತ್ ಭಗವತ್ ಸ್ವರೂಪವೇ ಆಗಿರುವ ಶ್ರೀಗುರುವಿನ ಸೇವೆಗೆ ಸಮರ್ಪಿಸಿಕೊಂಡಾಗ ಮೋಕ್ಷ ಮಾರ್ಗದ ಬೆಳಗು ಕಾಣಸಿಗುತ್ತದೆ ಎಂದರು.
ಸಕ್ಕರೆ, ಬೆಲ್ಲ, ಅಕ್ಕಿ, ರವೆ, ತೆಂಗಿನಕಾಯಿ ಮತ್ತು ನಾಣ್ಯಗಳಿಂದ ತುಲಾಭಾರ ಸೇವೆಗಳನ್ನು ಸಲ್ಲಿಸಿದ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ, ಶೋಭಾ ಯರಗಂಬಳಿಮಠ, ಪ್ರೇಮಾ ರುದ್ರಾಪೂರ (ಗುಡಿ), ಬಿ.ಸಿ.ಕೊಳ್ಳಿ, ಹೂವಿನ ಹಡಗಲಿ ತಾಲೂಕು ಹೊಳಗುಂದಿಯ ಗುರುಬಸವರಾಜ ಮತ್ತೂರಮಠ, ಪವನಕುಮಾರ ಮಲ್ಲಿಕಾರ್ಜುನ ಕುಸೂಗಲ್ಲ, ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಸುನೀಲ ಗುಡಿ, ಕಿತ್ತೂರ ರಾಣಿ ಚೆನ್ನಮ್ಮ ಸೌಹಾರ್ದ ಸಹಕಾರಿಯ ಕೇಂದ್ರ ಆಡಳಿತ ಮಂಡಳಿ ಸದಸ್ಯ ರಾಮಣ್ಣ ಜಕ್ಕಣ್ಣವರ, ಬಸಪ್ಪ ಉಗರಗೋಳ, ವಕೀಲ ಅಶೋಕ ಗುಡಿ, ದೀಪಕ ಗೊಡಚಿ ಹಾಗೂ ಅಕ್ಕಮಹಾದೇವಿ ಯರಗಂಬಳಿಮಠ ಅವರನ್ನು ಶ್ರೀಗಳು ಗೌರವಿಸಿ ಆಶೀರ್ವದಿಸಿದರು.
ಸುನೀಲ ಗುಡಿ ಹಾಗೂ ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು. ಅಬಕಾರಿ ಸಿಪಿಐ ಅಮೃತ ಗುಡಿ ನಡೆಸಿದ ದಾಸೋಹ ಸೇವೆಯಲ್ಲಿ ಅನ್ನಸಂತರ್ಪಣೆ ಜರುಗಿತು. ಇದೇ ಸಂದರ್ಭದಲ್ಲಿ ಶಕ್ತಿ ಮಾತೆಯ ಸ್ಮರಣೆಯೊಂದಿಗೆ ಗ್ರಾಮದ ಶೋಭಾ ಯರಗಂಬಳಿಮಠ ಅವರು 108 ಮುತ್ತೈದೆಯರಿಗೆ ಉಡಿತುಂಬಿದರು. ನವನಗರದ ಶ್ರೀಕಾಶಿ ವಿಶ್ವೇಶ್ವರ ರುದ್ರ ಮಹಿಳಾ ಬಳಗದ ಮಾತೆಯರೂ ಸೇರಿದಂತೆ ಹುಬ್ಬಳ್ಳಿ-ಧಾರವಾಡ ಅವಳಿನಗರ, ಅಮ್ಮಿನಬಾವಿ ಮತ್ತು ಹತ್ತಿರದ ಎಲ್ಲ ಗ್ರಾಮಗಳ ಭಕ್ತಗಣ ಪಾಲ್ಗೊಂಡಿತ್ತು. ವಿನಾಯಕ ಹಿರೇಮಠ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ