ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ:
ಪ್ರಥಮಾಚಾರ್ಯ ಶಾಂತಿಸಾಗರ ಅವರ ತ್ಯಾಗಿ ಜೀವನ ಅತ್ಯಂತ ಗೌರವಶಾಲಿ ಜೀವನವಾಗಿದ್ದು, ಜೈನ ಧರ್ಮ ಕ್ಕೆ ಮತ್ತು ಇಂದಿನ ತ್ಯಾಗಿಗಳಿಗೆ ಆದರ್ಶವಾಗಿದೆ. ಪ್ರಥಮಾಚಾರ್ಯರ ಸಂದೇಶಗಳನ್ನು ನಾವಿಂದು ಪಾಲಿಸಬೇಕಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ. ವಿರೇಂದ್ರ ಹೆಗ್ಗಡೆ ಅವರು ಹೇಳಿದರು.
ಬೆಳಗಾವಿ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದಲ್ಲಿಂದು ಪ್ರಥಮಾಚಾರ್ಯ ಶಾಂತಿಸಾಗರ ಮುನಿ ಮಹಾರಾಜರ ದೀಕ್ಷಾ ಶತಮಾನೋತ್ಸವ ಅಂಗವಾಗಿ ಅವರ ಪಂಚಮ ಪಟ್ಟಾಧೀಶರಾದ ಆಚಾರ್ಯ ಶ್ರೀ.೧೦೮ ವರ್ಧಮಾನ ಸಾಗರ ಮುನಿಗಳ ಚಾತುರ್ಮಾಸದ ನಿಮಿತ್ಯ ಯರನಾಳ ಗ್ರಾಮ ಪ್ರವೇಶ ಸಮಾರೋಹ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ಪ್ರಥಮಾಚಾರ್ಯ ಶಾಂತಿಸಾಗರ ಮುನಿಗಳು ದಿಗಂಬರ ಮುನಿ ಪರಂಪರೆಯನ್ನು ಮುಂದುವರೆಸಿ ಅದಕ್ಕೊಂದು ಹೊಸ ಆಯಾಮ ನೀಡಿದ್ದಾರೆ. ನೂರು ವರ್ಷಗಳ ಹಿಂದೆ ಅವರು ಕಠಿಣ ವೃತಗಳನ್ನು ಆಚರಿಸುವ ಮೂಲಕ ಜೈನ ಧರ್ಮದ ಸಿದ್ದಾಂತಗಳನ್ನು ಎಲ್ಲೆಡೆ ಪ್ರಚಾರ ಪಡಿಸಿದ್ದಾರೆ. ಇಂತಹ ತ್ಯಾಗಿ ಜೀವನ ಗೌರವಶಾಲಿ ಜೀವನವಾಗಿದೆ ಎಂದು ಅವರು ತಿಳಿಸಿದರು.
ಪ್ರಥಮಾಚಾರ್ಯ ಶಾಂತಿಸಾಗರ ಮುನಿಗಳ ಪಂಚಮ ಪಟ್ಟಾಧೀಶರಾದ ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿಗಳು ಮತ್ತು ಅವರ ಸಂಘ ಶ್ರವಣಬೆಳಗೋಳದಲ್ಲಿ ಚಾತುರ್ಮಾಸ ಮತ್ತು ಮಹಾಮಸ್ತಾಕಾಭಿಷೇಕ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ತದನಂತರ ಅವರು ಧರ್ಮಸ್ಥಳದಲ್ಲಿ ಚಾತುರ್ಮಾಸ ಕೈಗೊಂಡು ನಮಗೆಲ್ಲ ಮಾರ್ಗದರ್ಶನ ಮಾಡಿದ್ದಾರೆ. ಇಂತಹ ಮುನಿಗಳ ಸಾನಿಧ್ಯ ಲಭಿಸಿರುವುದು ನಮ್ಮ ಭಾಗ್ಯ ಎಂದು ಅವರು ವಿವರಿಸಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಮಾತನಾಡಿ, ನೂರು ವರ್ಷಗಳ ಹಿಂದೆ ಪ್ರಥಮಾಚಾರ್ಯ ಶಾಂತಿಸಾಗರ ಮುನಿಗಳು ಇದೇ ಯರನಾಳ ಗ್ರಾಮದಲ್ಲಿ ಮುನಿ ದೀಕ್ಷೆ ಸ್ವೀಕರಿಸುವ ಮೂಲಕ ದಿಗಂಬರ ಪರಂಪರೆಗೆ ಹೊಸ ದಿಕ್ಕನ್ನು ತೋರಿಸಿದವರು. ಅಂದಿನ ಕಠಿಣ ಸಂದರ್ಭದಲ್ಲಿಯೂ ಸಹ ಶಾಂತಿಸಾಗರ ಮುನಿಗಳು ಜೈನ ಪರಂಪರೆಯ ಕೀರ್ತಿ ಪತಾಕೆಯನ್ನು ದೇಶದೆಲ್ಲೆಡೆ ಪ್ರಚಾರ ಕೈಗೊಂಡಿದ್ದರು. ಇಂತಹ ಮುನಿಗಳು ದೀಕ್ಷೆ ಸ್ವೀಕರಿಸಿದ ಯರನಾಳ ಗ್ರಾಮ ಪುಣ್ಯಭೂಮಿಯಾಗಿದೆ. ಮುಂಬರುವ ದಿನಗಳಲ್ಲಿ ಇದೇ ಗ್ರಾಮದಿಂದ ಹೊಸ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ಶಶಿಕಾಂತ ನಾಯಿಕ, ಸಂಜಯ ಪಾಟೀಲ ಮೊದಲಾದವರು ಮಾತನಾಡಿದರು. ಆಚಾಐ ಶ್ರೀ ಶಾಂತಿಸಾಗರ ಮಹಾರಾಜರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವದ ರಾಷ್ಟ್ರೀಯ ಆಯೋಜನ ಸಮಿತಿ ಕಾರ್ಯಾಧ್ಯಕ್ಷ ಹಾಗೂ ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ಅವರು ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಮೇಲೆ ಅಶೋಕ ಪಟನಿ, ಸರಿತಾ ಜೈನ್, ಶ್ರೀಪಾಲ ಗಂಗವಾಲ, ರಾಕೇಶ ಸೇಠಿ, ಅನಿಲ ಸೇಠಿ, ಡಿ.ಎ.ಪಾಟೀಲ, ಸುರೇಶ ಸಬಲಾವತ, ವಿನೋದ ದೊಡ್ಡಣ್ಣವರ, ಸುರೇಶ ಪಾಟೀಳ, ಡಿ.ಎ.ಪಾಟೀಲ,ಮಹಾವೀರ ನಿಲಜಗಿ, ರವೀಂದ್ರ ಚೌಗುಲಾ, ಪುಷ್ಪಕ ಹನಮಣ್ಣವರ ಮೊದಲಾದವರು ಉಪಸ್ಥಿತರಿದ್ದರು.
ಶ್ರೀಗಳಿಗೆ ಭವ್ಯ ಸ್ವಾಗತ:
ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದಲ್ಲಿ ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿಗಳು ಚಾತುರ್ಮಾಸ ಆಚರಿಸಲಿದ್ದು, ಇಂದು ಬೆಳಿಗ್ಗೆ ತಾಲೂಕಿನ ಬಡಕುಂದ್ರಿ ಗ್ರಾಮದ ಬಳಿ ಅವರಿಗೆ ಭವ್ಯವಾದ ಸ್ವಾಗತ ಕೋರಲಾಯಿತು. ಹುಕ್ಕೇರಿಯಿಂದ ಮುನಿಗಳು ಆಗಮಿಸುತ್ತಿದ್ದಂತೆ ಮಹಾವೀರ ನಿಲಜಗಿ ಮತ್ತು ಅವರ ಕುಟುಂಬದ ಸದಸ್ಯರು ಪಾದಪೂಜೆ ನೆರವೇರಿಸಿದರು. ತದನಂತರ ಭವ್ಯವಾದ ಮೆರವಣಿಗೆ ಮೂಲಕ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ಯರನಾಳ ಗ್ರಾಮದ ಹತ್ತಿರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಶ್ರೀಗಳಿಗೆ ಪಾದಪೂಜೆ ನೆರವೇರಿಸಿದರು. ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ -ಶ್ರಾವಕಿಯರು ಉಪಸ್ಥಿತರಿದ್ದರು.
ಇದನ್ನೂ ಓದಿ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ