Belagavi NewsBelgaum NewsKannada NewsKarnataka NewsLatest

*ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಶಾಸಕಿ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಈ ತಂತ್ರಜ್ಞಾನ, ವಿಜ್ಞಾನ, ಆಧುನಿಕ, ಗಣಕಯಂತ್ರ, ಫ್ಯಾಶನ್, ಸ್ಪರ್ಧಾತ್ಮಕ ಯುಗ ಎಂದೆನಿಸಿಕೊಂಡ 21ನೇ ಶತಮಾನದಲ್ಲಿ ಶಿಕ್ಷಣವು ಬಹಳ ಮಹತ್ವ ಪಡೆದುಕೊಂಡಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉಪವಾಸವಿದ್ದು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಲು ಪರಿಶ್ರಮಿಸುವ ತಂದೆ-ತಾಯಿಗಳನ್ನು ಹಾಗೂ ನಿಮಗೆ ಗುಣಮಟ್ಟದ ವಿದ್ಯಾಭ್ಯಾಸ ಕೊಡಲು ಶ್ರಮಿಸುವ ಶಿಕ್ಷಕರನ್ನು ಜೀವನದಲ್ಲಿ ಎಂದೆಂದಿಗೂ ಮರೆಯಬಾರದು ಎಂದು ಶಾಸಕಿ ಶಶಿಕಲಾ ಜೊಲ್ಲೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಮುನಿಸಿಪಲ್ ಪ್ರೌಢಶಾಲೆಯ ಆವರಣದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಯಲ್ಲಿ ಶುಕ್ರವಾರ ಆಯೋಜಿಸಿದ ೨೦೨೩-೨೪ನೇ ಸಾಲಿನ ಕ್ರೀಡಾ ಸಾಮಗ್ರಿ ವಿತರಣೆ, ಉಚಿತ ಸಮವಸ್ತ್ರ ವಿತರಣೆ ಹಾಗೂ ೨೦೨೨-೨೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದ ಪ್ರೌಢಶಾಲೆಗಳಿಗೆ ಸ್ಮರಣಿಕೆ ಹಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಂದು ಶಾಲೆಗೆ ಭೇಟಿ ನೀಡಿ ಮನಸ್ಸುಕೊಟ್ಟು ಅಧ್ಯಯನ ನಡೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೇರಣೆ(ಮೋಟಿವೇಶನಲ್ ಸ್ಪೀಚ್) ನೀಡುವೆ’ ಎಂದರು. ಮಕ್ಕಳು ಮನಸ್ಸು ಕೊಟ್ಟು ಅಧ್ಯಯನ ನಡೆಸಬೇಕು. ಸತತ ಪ್ರಯತ್ನದಿಂದ ಫಲ ಸಿಕ್ಕೆ ಸಿಗುತ್ತದೆ. ತಿಳಿಯದೇ ಇದ್ದಲ್ಲಿ ಶಿಕ್ಷಕರಿಗೆ ಮತ್ತೊಮ್ಮೆ ಕೇಳಿ ತಿಳಿದುಕೊಳ್ಳಿ. ಕೇವಲ ಶಿಕ್ಷಣದ ಉಪಯೋಗಕ್ಕಾಗಿ ಮಾತ್ರ ಮೊಬೈಲ್ ಬಳಸುವಂತಾಗಲಿ ಎಂದು ಹೇಳಿದರು. ಇದೇ ವೇಳೆ ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆಯಾಗದ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು.

ದೈಹಿಕ ಪರಿವೀಕ್ಷಕ ಎಸ್‌ಬಿ. ಜೋಗಳೆ ಪ್ರಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸಭಾಪತಿ ರಾಜೇಂದ್ರ ಗುಂದೇಶಾ, ಸದಸ್ಯರು, ಇಸಿಓ ಮಹಾಲೀಂಗೇಶ್ವರ, ಕೆಪಿಎಸ್‌ನ ಮುಖ್ಯಶಿಕ್ಷಕ ಅನೀಲ ಪೋಳ, ಅಜಿತಕುಮಾರ ಶಿಂತ್ರೆ, ಶಿಕ್ಷಕರ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಮಹಾದೇವ ಗೋಕಾರ, ಆದಮಅಲಿ ಪೀರಜಾದೆ, ಯಲ್ಲಪ್ಪ ಹಂಡಿ, ಭಾಸ್ಕರ ಸ್ವಾಮಿ, ಆರ್.ಬಿ. ಕಾಗೆ, ಜ್ಞಾನದೇವ ನಾಯಿಕ, ವಿಭಾವರಿ ಖಾಂಡಕೆ, ಯಲ್ಲಟ್ಟಿ, ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಿಕ ಸ್ವಾಗತಿಸಿದರು. ಶಿಕ್ಷಕಿ ಯಾಸ್ಮೀನ್ ಮುಲ್ಲಾ ಕಾರ್ಯಕ್ರಮ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button