ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಯುಗಾದಿ ಹಬ್ಬವನ್ನು ಧಾರ್ಮಿಕ ದಿನವನ್ನಾಗಿ ಸರಕಾರ ಘೋಷಿಸಿದ್ದು, ಪ್ರಥಮ ಧಾರ್ಮಿಕ ದಿನದ ರಾಜ್ಯಮಟ್ಟದ ಕಾರ್ಯಕ್ರಮ ನಿಪ್ಪಾಣಿಯ ಶ್ರೀ ವಿರೂಪಾಕ್ಷ ಲಿಂಗ ಸಮಾಧಿ ಮಠದಲ್ಲಿ ನಡೆಯಿತು.
ಮುಜರಾಯಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು, ಸಾಂಪ್ರದಾಯಿಕ ಪೂಜೆ-ಪುನಸ್ಕಾರ ಮೂಲಕ ಯುಗಾದಿಯಂದು ಧಾರ್ಮಿಕ ದಿನವನ್ನು ಆಚರಿಸಿದರು.
ಗೋ ಪೂಜೆ, ಲಕ್ಷ್ಮೀ ಪೂಜೆ, ಮಾಡಿ ನೇಗಿಲು ಹೊಡೆದ ಜೊಲ್ಲೆ ದಂಪತಿಗಳು ನಂತರ ನೇಗಿಲು ಹಿಡಿದು ಬಿತ್ತನೆ ಮಾಡುವ ಮೂಲಕ ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಅವರು, ಯುಗಾದಿ ಹಬ್ಬವನ್ನು ಇನ್ನು ಮುಂದೆ ಪ್ರತಿವರ್ಷ ಸರಕಾರದ ವತಿಯಿಂದ ಧಾರ್ಮಿಕ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಸಮಾಧಿ ಮಠದಲ್ಲಿ ಸರ್ಕಾರದಿಂದಲೇ ಕಾರ್ಯಕ್ರಮ ಆಯೋಜನೆ ಮಾಡಿ ಪ್ರಥಮಬಾರಿಗೆ ಧಾರ್ಮಿಕ ದಿನಾಚರಣೆಯನ್ನು ಆಚರಣೆ ಆರಂಭಿಸಲಾಗಿದೆ ಎಂದು ಹೇಳಿದರು.
ಸಚಿವೆ ಶಶಿಕಲಾ ಜೊಲ್ಲೆ ಅವರಿಂದ ವಚನಗಾಯನ:
ಇದೇ ವೇಳೆ ಸಚಿವೆ ಶಶಿಕಲಾ ಜೊಲ್ಲೆ ಹುಕ್ಕೇರಿಶನ ವಚನ ಗಾಯನ ಹಾಗೂ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಹಾಡು ಹಾಡುವ ಮೂಲಕ ಹಿಂದೂ ಸಂಪ್ರದಾಯದ ಹೊಸ ವರ್ಷಾಚರಣೆಯ ಮಹತ್ವವನ್ನು ತಿಳಿಸಿದರು.
ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡರ ಹಾಗೂ ಅನೇಕ ಧರ್ಮಗುರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅವರವರ ಹಬ್ಬ, ಧರ್ಮಾಚರಣೆಗೆ ಸ್ವಾತಂತ್ರ್ಯವಿದೆ ಎಂದ ಸಿಎಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ