Belagavi NewsBelgaum NewsKannada NewsKarnataka NewsLatestPolitics

*’ಕುಣಿಯಲು ಬಾರದೆ ನೆಲ ಡೊಂಕು ಎಂದರಂತೆ’ ಎಂಬ ಗಾದೆಯಂತಾಗಿದೆ; ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿಯೊಬ್ಬ ವ್ಯಕ್ತಿಗೂ ೧೦ ಕೆಜಿ ಅಕ್ಕಿ ಕೊಡುವುದಾಗಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ, ಇದೀಗ ಅಕ್ಕಿ ಕೊಡಲಾಗದೇ ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವುದು ತನಗೆ ಕುಣಿಯಲು ಬಾರದೆ ನೆಲ ಡೊಂಕು ಎಂದರಂತೆ ಎಂಬ ಗಾದೆಯಂತಾಗಿದೆ” ಎಂದು ನಿಪ್ಪಾಣಿ ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಆರೋಪ ಮಾಡಿದರು.

ನಿಪ್ಪಾಣಿ ಪಟ್ಟಣದ ಎಂ.ಪಿ ಕಚೇರಿಯ ಸಭಾಗೃಹದಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿ, ಚುನಾವಣೆಗೂ ಮೊದಲು ಪ್ರತಿಯೊಂದು ಬಿಪಿಎಲ್ ಕುಟುಂಬದ ವ್ಯಕ್ತಿಗೆ ತಲಾ ೧೦ ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ತನ್ನ ಪಂಚ ಗ್ಯಾರಂಟಿಗಳಲ್ಲೊಂದಾದ ಅನ್ನಭಾಗ್ಯದ ಕುರಿತು ಭರವಸೆ ನೀಡಿ, ಇದೀಗ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಪ್ರದಾನಮಂತ್ರಿ ಮೋದಿ ಅವರ ವಿರುದ್ಧ ಹುರುಳಿಲ್ಲದ ಆರೋಪ ಮಾಡುತ್ತಿದ್ದು, ಈ ಕುರಿತು ರಾಜ್ಯಾದ್ಯಾಂತ ಕಾಂಗ್ರೆಸ್ ಪಕ್ಷ ಇಂದು ಪ್ರತಿಭಟನೆ ಮಾಡಿದ್ದು ಅವರ ಮನೋಧೋರಣೆ ಯನ್ನು ತೋರಿಸುತ್ತದೆ” ಎಂದರು.

“ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನುಡಿದಂತೆ ನಡೆಯುತ್ತಿಲ್ಲ. ೧೦ ಕೆಜಿ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದರು, ಕೇಂದ್ರದ ಬಿಜೆಪಿ ಸರ್ಕಾರ ನೀಡುತ್ತಿರುವ ೫ ಕೆಜಿ ಅಕ್ಕಿ ಕೂಡ ಇದರಲ್ಲಿ ಸೇರಿದೆ ಎಂದು ಏಕೆ ಹೇಳಲಿಲ್ಲ. ಹೀಗೆ ಅನ್ನಭಾಗ್ಯ ಯೋಜನೆ ತಮ್ಮದೇ ಯೋಜನೆ ಅನ್ನೋ ಹಾಗೆ ಬಿಂಬಿಸಿಕೊಳ್ಳುತ್ತಿದ್ದ ಕಾಂಗ್ರೆಸ್ ಕೇಂದ್ರ ಸರ್ಕಾರ ನೀಡುತ್ತಿರುವ ೫ ಕೆಜಿ ಅಕ್ಕಿಯೊಂದಿಗೆ ತಾನೂ ಕೂಡ ೧೦ ಕೆಜಿ ಅಕ್ಕಿ ನೀಡಲಿ. ಹೀಗೆ ಪ್ರತಿಯೊಂದು ಕುಟುಂಬಕ್ಕೆ ತಲಾ ೧೫ ಕೆಜಿ ಅಕ್ಕಿಯನ್ನು ಕೊಡಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕಿ ಜೊಲ್ಲೆ ಕಿಡಿ ಕಾರಿದರು.

ಕಾಂಗ್ರೆಸ್ ಸುಖಾ ಸುಮ್ಮನೆ ಪ್ರದಾನಮಂತ್ರಿ ಮೋದಿ ಅವರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರದ ಮೇಲೆ ರಾಜ್ಯದ ಕಾಂಗ್ರೆಸ್ ಸರ್ಕಾರ ಗೂಬೆ ಕೂರಿಸುವುದನ್ನು ಬಿಟ್ಟು, ಪ್ರತಿ ಕುಟುಂಬದ ವ್ಯಕ್ತಿಗೆ ತಲಾ ೧೫ ಕೆಜಿ ಅಕ್ಕಿಯನ್ನು ಕೊಡುವ ನಿರ್ಧಾರ ಕೈಗೊಳ್ಳುವ ಮೂಲಕ ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನಕ್ಕೆ ತೆಗೆದುಕೊಂಡು ಬಂದಲ್ಲಿ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ತಾವು ಸ್ವಾಗತಿಸುತ್ತೇವೆ” ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಜಗದೀಶ ಕವಟಗಿಮಠ, ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಸಂಜಯ ಪಾಟೀಲ, ಪ್ರವೀಣ ಕಾಂಬಳೆ, ಸಂಜೀವ ಅರಗೆ, ಶಾಂಭವಿ ಅಶ್ವತ್ಥಪೂರ, ಶಕುಂತಲಾ ಡೋಣವಾಡೆ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button