*ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಾಗ್ದಾಳಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದು ಎರಡ್ಮೂರು ತಿಂಗಳಲ್ಲಿಯೇ ಈ ಹಿಂದೆ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ರೈತಪರ ಯೋಜನೆ ಸೇರಿದಂತೆ ಸುಮಾರು 19 ರಿಂದ 20 ಯೋಜನೆಗಳನ್ನು ತಡೆ ಹಿಡಿದಿದ್ದು ಖಂಡನೀಯ ಎಂದು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಾಗ್ದಾಳಿ ನಡೆಸಿದ್ದಾರೆ.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದೆ. ದೇಶದ ಬೆನ್ನೆಲುಬು ರೈತರಿಗೆ ಕಾಂಗ್ರೆಸ್ ಸರಕಾರ ಅನ್ಯಾಯ ಮಾಡುತ್ತಿದೆ. ಕೇಂದ್ರ ಸರಕಾರದ ರೈತಪರ ಯೋಜನೆ ಹಾಗೂ ಹಿಂದಿನ ಬಿಜೆಪಿ ಸರಕಾರದ ರೈತರ ಯೋಜನೆಯನ್ನು ಸ್ಥಗೀತಗೊಳಿಸಿರುವುದು ದುರ್ದೈವದ ಸಂಗತಿ ಎಂದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಮೂರು ಸಾವಿರ ರೂ. ಹಾಗೂ ರಾಜ್ಯ ಸರಕಾರದಿಂದ ನಾಲ್ಕು ಸಾವಿರ ರೂ. ಹಣ ನೀಡುತ್ತಿತ್ತು. ಆದರೆ ರಾಜ್ಯ ಸರಕಾರದಿಂದ ನೀಡಬೇಕಾಗಿದ್ದ ಹಣವನ್ನು ರೈತರಿಗೆ ನೀಡದೆ ಅದನ್ನು ಸ್ಥಗೀತಗೊಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ 11 ಲಕ್ಷ ರೈತ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರಕಾರದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳಿಗಾಗಿ ವಿದ್ಯಾಸಿರಿ ಯೋಜನೆ ಜಾರಿಗೆ ತಂದಿದ್ದರು. ಅದನ್ನು ಸ್ಥಗೀತ ಮಾಡಿದೆ. ಅವುಗಳನ್ನು ಮರು ಜಾರಿ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಎಪಿಎಂಸಿ ಕಾನೂನು ರೈತರಿಗೆ ಬೇಕಾದ ಕಡೆಗಳಲ್ಲಿ ತಾವು ಬೆಳೆದ ಬೆಳೆ, ತರಕಾರಿ ಮಾರುವ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಎಪಿಎಂಸಿ ಕಾಯ್ದೆಯನ್ನು ರದ್ದು ಮಾಡಿದ್ದು ರೈತರಿಗೆ ಮಾಡಿದ ಅನ್ಯಾಯ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾದ ಬಳಕ ವಿದ್ಯುತ್ ಬಿಲ್ ದುಪ್ಪಟ್ಟು ಬಂದಿದೆ. ಇದರಿಂದ ರೈತರು ಹಾಗೂ ಜನಸಾಮಾನ್ಯರಿಗೆ ಸಾಕಷ್ಟು ಹೊರೆಯಾಗಿದೆ. ಅಲ್ಲದೆ ರಾಜ್ಯದಲ್ಲಿನ ಗೋ ಶಾಲೆಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಿರುವುದು ವಿಪರ್ಯಾಸದ ಸಂಗತಿ ಎಂದರು.
ಶ್ರಮ ಶಕ್ತಿ ಯೋಜನೆ ಚಿಕ್ಕ ಯೋಜನೆಯಾದರೂ ರೈತ ಕುಟುಂಬ ಇರುವ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ 500 ರೂ. ಪ್ರೋತ್ಸಾಹ ದನ ನೀಡುತ್ತಿದ್ದ ಬಿಜೆಪಿ ಸರಕಾರದ ಯೋಜನೆಯನ್ನು ಕಾಂಗ್ರೆಸ್ ಸರಕಾರ ತಡೆ ಹಿಡಿದಿದೆ ಎಂದು ಹರಿಹಾಯ್ದರು.
ಸಹಸ್ರ ಸರೋವರ ಹಾಗೂ ಸಹ್ಯಾದ್ರಿ ಯೋಜನೆ, ಮೀನುಗಾರಿಕೆ, ಕಲ್ಯಾಣ ಕರ್ನಾಟಕದಲ್ಲಿ ಕೃಷಿ ಕ್ಲಷ್ಟರ್ ಯೋಜನೆಯನ್ನು ಬಿಜೆಪಿ ಸರಕಾರ ಕೇಂದ್ರ ಸರಕಾರದ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಆ ಎಲ್ಲಾ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ದೂರಿದರು.
ಜಾರಕಿಹೊಳಿ ಸಹೋದರರ ನಾಯಕತ್ವ ಒಪ್ಪುತ್ತಿರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಲೇ ನಾನು ಇದನ್ನು ಹೇಳುವುದಿಲ್ಲ. ಹೈಕಮಾಂಡ್ ಹೇಳಿದ ಹಾಗೆ ಕೇಳುತ್ತೇವೆ ಎಂದು ತಿಳಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಬೆಳಗಾವಿ ಜಿಲ್ಲೆಗೆ ಹಿಂದಿನ ಬಿಜೆಪಿ ಸರಕಾರದ ಅವದಿಯಲ್ಲಿ ಸಾಕಷ್ಟು ಅನುದಾನವನ್ನು ಬಸವರಾಜ ಬೊಮ್ಮಾಯಿ ಅವರು ನೀಡಿದ್ದರು. ಆದರೆ ಕಾಂಗ್ರೆಸ್ ಸರಕಾರ ಎಲ್ಲಾ ನೀರಾವರಿ ಯೋಜನೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯನ್ನು ಕೊಡುವುದಿಲ್ಲ ಎಂದು ಹೇಳಿದ್ದಾರೆ. ಇದು ಉತ್ತರ ಕರ್ನಾಟಕದ ಜನ ವಿರೋಧಿ ಸರಕಾರ ಎಂದು ಬಿಂಬಿತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿಗೆ ಹೋಗಿದ್ದು ಅಭಿವೃದ್ಧಿ ವಿಚಾರಕ್ಕಾಗಿ ನಾವು ಹೋಗಿದ್ದೇವು. ಆದರೆ ಯಾರ ವ್ಯಕ್ತಿಯ ವಿರುದ್ಧವೂ ದೂರು ನೀಡಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಸೋಲಿಗೆ ಸಾಕಷ್ಟು ಕಾರಣ ಇವೆ. ಆದರೆ ಗೆಲುವಿಗೆ ಕಾರಣ ಇರುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಅವಕಾಶ ನೀಡಿದರೆ ಚಿಕ್ಕೋಡಿ ಅಥವಾ ಬೆಳಗಾವಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಸೂಚನೆ ನೀಡಿದರೆ ನಾನು ಸ್ಪರ್ಧಿಸುತ್ತೇನೆ. ಅಲ್ಲದೇ, ಬೇರೆ ಅಭ್ಯರ್ಥಿಗಳನ್ನು ಸ್ಪಂರ್ದಿಸಿದರೂ ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.
ಬೆಳಗಾವಿ ನಗರ ಘಟಕದ ಅಧ್ಯಕ್ಷ ಅನಿಲ್ ಬೆನಕೆ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ನೇರಲಿ, ಶಾಸಕರಾದ ನಿಖಿಲ್ ಕತ್ತಿ, ಮಹಾಂತೇಶ ಕವಟಗಿಮಠ, ಉಜ್ವಲಾ ಬಡವನಾಚೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ