ಶೆಟ್ಟರ್ ಟಿಕೆಟ್ ಬಿಕ್ಕಟ್ಟು; ಯಡಿಯೂರಪ್ಪ ರಂಗ ಪ್ರವೇಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಬೆಳಗಾವಿ ಲೋಕಸಭಾ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹರಿಸುವ ಪ್ರಯತ್ನವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿದ್ದಾರೆ.
ಮಂಗಳವಾರ ರಾತ್ರಿ ಬೆಳಗಾವಿಗೆ ಆಗಮಿಸಿರುವ ಯಡಿಯೂರಪ್ಪ ನಗರ ಯುಕೆ 27 ಹೊಟೆಲ್ ನಲ್ಲಿ ಕ್ಷೇತ್ರದ ಶಾಸಕರು ಹಾಗೂ ಪ್ರಮುಖರ ಸಭೆ ನಡೆಸುತ್ತಿದ್ದಾರೆ. ಅಸಮಾಧಾನಿತರ ಅಹವಾಲು ಆಲಿಸುವ ಯಡಿಯೂರಪ್ಪ, ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುವಂತೆ ಆದೇಶ ನೀಡಿ ಮರಳಲಿದ್ದಾರೆ.
ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡುವ ಸುದ್ದಿ ಹೊರಬಿದ್ದಾಗಿನಿಂದ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಜಿಲ್ಲೆಯ ಅನೇಕ ಶಾಸಕರು ಮತ್ತು ಪ್ರಮುಖ ಕಾರ್ಯಕರ್ತರು ಚುನಾವಣೆ ಕಾರ್ಯದಿಂದ ದೂರ ಉಳಿಯುವ ಚಿಂತನೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶೆಟ್ಟರ್ ವಿರೋಧಿ ಸಂದೇಶಗಳು ಜೋರಾಗಿವೆ.
ಶೆಟ್ಟರ್ ಅಧಿಕಾರದಲ್ಲದ್ದಷ್ಟೂ ಕಾಲ ಬೆಳಗಾವಿಗೆ ದ್ರೋಹವೆಸಗಿದ್ದಾರೆಯೇ ವಿನಃ ಯಾವುದೇ ಲಾಭವಾಗಿಲ್ಲ. ಇಲ್ಲಿಂದ ಅನೇಕ ಯೋಜನೆ ಮತ್ತು ಕಚೇರಿಗಳನ್ನು ಹುಬ್ಬಳ್ಳಿಗೆ ಕೊಂಡೊಯ್ದಿದ್ದಾರೆ. ಬಂಡವಾಳ ಹೂಡಿಕೆದಾರರ ಸಮಾವೇಶವನ್ನೂ ಬೆಳಗಾವಿಯಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಿ ಅನ್ಯಾಯ ಮಾಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ಸಾಗಿಸಿ ಬೆಳಗಾವಿ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಗರೇ ಪೋಸ್ಟ್ ಮಾಡುತ್ತಿದ್ದಾರೆ.
ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಿನ್ನಮತದ ಹಿನ್ನೆಲೆಯಲ್ಲಿ ಸಮಾಧಾನಪಡಿಯುವ ಯತ್ನವಾಗಿ ಯಡಿಯೂರಪ್ಪ ಆಗಮಿಸಿದ್ದಾರೆ. ಯಡಿಯೂರಪ್ಪ ಮಾತು ಕೇಳಿ ಶೆಟ್ಟರ್ ಪರ ಪ್ರಚಾರಕ್ಕೆ ಇಳಿಯುತ್ತಾರೋ? ನಮ್ಮ ದಾರಿ ನಮಗೆ ಎಂದು ಬಂಡಾಯದ ಹಾದಿ ಹಿಡಿಯುತ್ತಾರೋ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ