ಪ್ರಗತಿವಾಹಿನಿ ಸುದ್ದಿ: ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೂರು ಮೃತದೇಹಗಳು ಪತ್ತೆಯಾಗಿದ್ದು, ಈ ಮೂಲಕ 7 ಜನರ ಶವಗಳು ಪತೆಯಾಗಿವೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಸಂಭವಿಸಿತ್ತು. ಗುಡ್ಡ ಕುಸಿತದಲ್ಲಿ ಕಣ್ಮರೆಯಾದವರು ಹಾಗೂ ಸಾವನ್ನಪ್ಪಿದವರ ಸಂಖ್ಯೆ ಈವರೆಗೂ ಎಷ್ಟು ಎಂದು ಖಚಿತಪಟ್ಟಿಲ್ಲ. 7 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಇಂದು ಮುಂಜಾನೆ ಬಾಲಕಿ ಹಾಗೂ ಇಬ್ಬರು ಚಾಲಕರ ಮೃತದೇಹ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ.
ಬಾಲಕಿ ಅಂಕಿತಾ ಹಾಗೂ ಗ್ಯಾಸ್ ಟ್ಯಾಂಕರ್ ಚಾಲಕ ಮುರುಗನ್, ಚಿನ್ನ ಎಂಬುವವರ ಶವ ಅಂಕೋಲಾದ ಮಂಜಗುಣಿ ಬಳಿಯ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಘಟನೆ ನಡೆದ ದಿನ ಒಂದು ಮೃತದೇಹ ಹಾಗೂ ನಿನ್ನೆ ಮೂರು ಮೃತದೇಹಗಳು ಪತ್ತೆಯಾಗಿದ್ದವು. ಈ ಮೂಲಕ 7 ಜನರ ಶವ ಪತ್ತೆಯಾಗಿದೆ.
ಇತ್ತ ಹೆದ್ದಾರಿಯಲ್ಲಿ ಕುಸಿದು ಬಿದ್ದಿರುವ ಮಣ್ಣಿನ ತೆರವು ಕಾರ್ಯ ಮುಂದುವರೆದಿದೆ. ಮತ್ತೊಂದೆಡೆ ನದಿಯಲ್ಲಿ ಕೊಚ್ಚಿ ಹೋಗಿರುವವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಶಿರೂರು ಬಳಿ ಗುಡ್ಡ ಕುಸಿತದ ರಭಸಕ್ಕೆ ರಸ್ತೆ ಬದಿಯ ಟೀ ಅಂಗಡಿ ನೆಲಸಮವಾಗಿದ್ದು, ಚಲಿಸುತ್ತಿದ್ದ ಎರಡು ಗ್ಯಾಸ್ ಟ್ಯಾಂಕರ್, ಎರಡು ಕಾರುಗಳು ನದಿಗೆ ಬಿದ್ದು, ಕೊಚ್ಚಿ ಹೋಗಿವೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ