Latest

ಶಿವಾಜಿನ ನಗರ ಕಾಂಗ್ರೆಸ್ ಗೆಲುವು: ಲಕ್ಷ್ಮಣ ಸವದಿಗೆ ವರ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ರಾಜ್ಯದ 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ 12 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಹಾಗೂ ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅದರಲ್ಲೂ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಸವಾಲಾಗಿತ್ತು. ಅಲ್ಲಿ ಅವರು ತಮ್ಮ ಪ್ರಭಾವವನ್ನು ತೋರಿಸಲೇಬೇಕಿತ್ತು. ಈ ಸವಾಲಿನಲ್ಲಿ ಅವರು ಗೆದ್ದಂತಾಗಿದೆ.

ಇದರ ಜೊತೆಗೆ ಲಕ್ಷ್ಮಣ ಸವದಿಗೆ ಇರುವ ಮುಂದಿನ ಸವಾಲು ಉಪಮುಖ್ಯಮಂತ್ರಿ ಸ್ಥಾನ ಉಳಿಸಿಕೊಲ್ಳಬೇಕಾದದ್ದು. ಅದಕ್ಕಾಗಿ ಅವರು ಇನ್ನು 3 ತಿಂಗಳಲ್ಲಿ ವಿಧಾನಸಭೆ ಅಥವಾ ವಿಧಾನಪರಿಷತ್ ಗೆ ಆಯ್ಕೆಯಾಗಲೇಬೇಕಾಗಿದೆ.

ಆದರೆ ಸಧ್ಯಕ್ಕೆ ವಿಧಾನಸಭೆ ಚುನಾವಣೆ ಇಲ್ಲದಿರುವುದರಿಂದ ಮತ್ತು ಅಥಣಿ ಕ್ಷೇತ್ರವನ್ನು ಕಳೆದುಕೊಂಡಿದ್ದರಿಂದ ಅವರಿಗೆ ವಿಧಾನಪರಿಷತ್ ಅನಿವಾರ್ಯವಾಗಿದೆ. ಆದರೆ ವಿಧಾನಪರಿಷತ್ ಸ್ಥಾನಕ್ಕೆ ಕೂಡ ಸಧ್ಯಕ್ಕೆ ಅವಕಾಶ ಇರಲಿಲ್ಲ.

ಆದರೆ ಈಗ ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಆಯ್ಕೆಯಾಗಿರುವುದು ಲಕ್ಷ್ಮಣ ಸವದಿಗೆ ವರವಾಗುವ ಸಾಧ್ಯತೆ ಇದೆ. ಶಿವಾಜಿ ನಗರದಿಂದ ಆಯ್ಕೆಯಾಗಿರುವ ರಿಜ್ವಾನ್ ಅರ್ಷದ್ ವಿಧಾನಪರಿಷತ್ ಸದಸ್ಯರಾಗಿದ್ದರು. ಈಗ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗಿದೆ. ಆ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲು ಲಕ್ಷ್ಮಣ ಸವದಿಗೆ ಅವಕಾಶ ವಾಗಬಹುದು.

ಇದರಿಂದಾಗಿ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಬಹುದು.

ಆದರೆ, ರಿಜ್ವಾನ್ ಅರ್ಷದ್ ಯಾವಾಗಾ ರಾಜಿನಾಮೆ ನೀಡುತ್ತಾರೆ? ಚುನಾವಣೆ  ಯಾವಾಗ   ಘೋಷಣೆಯಾಗುತ್ತದೆ ಕಾದು ನೋಡಬೇಕಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button