*ದೇಶದ ರೈತರು ಗುಣಾತ್ಮಕ ಬೆಳೆಗಳನ್ನು ಬೆಳೆದು ಉದ್ಯಮಿಗಳಾಗಬೇಕಾಗಿದೆ: ಶೋಭಾ ಕರಂದ್ಲಾಜೆ*
ಕೆಎಲ್‍ಇ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ಭವನ, ಸಿಬ್ಬಂದಿ ವಸತಿ ಗೃಹಗಳ ಮತ್ತು ಸ್ವಯಂ ಚಾಲಿತ ಹನಿ ನೀರಾವರಿ ಘಟಕ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿ: ಅಂತರಾಷ್ಟ್ರೀಯ ಮಾರುಕಟ್ಟೆಗೆ ಬೆಳೆಯನ್ನು ಒದಗಿಸಬೇಕಾದರೆ ಅದರ ಮಾನದಂಡದಡಿ ರೈತರು ಗುಣಮಟ್ಟದ ಬೆಳೆಗಳನ್ನು ಬೆಳೆಯಬೇಕು. ನಮ್ಮ ಸಾಂಪ್ರದಾಯಿಕ ಆಹಾರ ಸಿರಧಾನ್ಯ ಅದನ್ನು ಉಳಿಸುವುದು ಇಂದಿನ ಅಗತ್ಯತೆ ಇದೆ ಎಂದು ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರದ್ಲಾಂಚೆ ಅವರು ಹೇಳಿದರು.
ಅವರು ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದಲ್ಲಿರುವ ಕೆಎಲ್‍ಇ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ಭವನ, ಸಿಬ್ಬಂದಿ ವಸತಿ ಗೃಹಗಳ ಮತ್ತು ಸ್ವಯಂ ಚಾಲಿತ ಹನಿ ನೀರಾವರಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ದೇಶವಿಂದು ಬೀಜೋತ್ಪಾದನೆಯಲ್ಲಿ ಸ್ವಾವಲಂಬಿಯಾಗಿ, ಉತ್ತಮವಾದ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮವಾದ ಆದಾಯವನ್ನು ಗಳಿಸುವಂತಾಗಬೇಕು. ಅದರೊಂದಿಗೆ ಕೃಷಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಬೇಕು. ಕೇಂದ್ರ ಸರಕಾರ ಸಾಕಷ್ಟು ಹಣವನ್ನು ಅದಕ್ಕಾಗಿಯೇ ಮೀಸಟ್ಟಿದೆ, ಅದನ್ನು ಸದುಪಯೋಗ ಪಡಿಸಿಕೊಂಡು ರೈತರು ಉದ್ಯಮಿಗಳಾಗಿ ಬೆಳೆಯಬೇಕಾಗಿದೆ. ಆದರೆ ಜಿಲ್ಲಾವಾರು ಅವಶ್ಯವಿರುವ ಯೋಜನೆಗಳ ಕುರಿತು ಮಾಹಿತಿಯನ್ನು ಕೇಂದ್ರಕ್ಕೆ ಕಳಿಸುತ್ತಿಲ್ಲ ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಪ್ರಸ್ತತ ಸಾಲಿನಲ್ಲಿ 2005 ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು ರೈತರು ಅವುಗಳತ್ತ ಗಮನಹರಿಸಬೇಕು. ಬೇರೆ ಬೇರೆ ದೇಶಗಳು ತಯಾರಾದ ಆಹಾರಗಳನ್ನು ಬೇಡುತ್ತಿವೆ ಆದರೆ ಗುಣಮಟ್ಟದ ಆಹಾರವನ್ನು ಭಾರತವು ರಪ್ತು ಮಾಡಲು ಸಾಧ್ಯವಾಗುತ್ತಿಲ್ಲ. ಸಾಂಪ್ರದಾಯಿಕ ಆಹಾರ ಪದ್ಧತಿ ಆಹಾರಗಳನ್ನು, ಎಣ್ಣೆಕಾಳುಗಳನ್ನು ಬೆಳೆಯಬೇಕು. ರಾಸಾಯಿಕಗಳನ್ನು ಬಳಸದೆ ಸಾವಯವ ಕೃಷಿಯೆಡೆಗೆ ಗಮನಹರಿಸಬೇಕಾಗಿದೆ ಎಂದರು.
ದೇಶದ ಜನಸಂಖ್ಯೆಗೆ ಆಹಾರವನ್ನು ಪೂರೈಸಲು 1960 ರ ದಶಕದಲ್ಲಿ ದೇಶವು ಗೋದಿಯನ್ನು ಆಮದು ಮಾಡಿಕೊಂಡು ಹೊಸ ತಳಿಗಳ ಉತ್ಪಾದನೆಯಿಂದ ಹಸಿರು ಕ್ರಾಂತಿಯನ್ನು ಸಾಧಿಸಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಅನುಕೂಲವಾಯಿತು. ಇದು ದೇಶದ ರೈತರ ಶ್ರಮದಿಂದ ಸಾಧ್ಯವಾಗಿದೆ. ಇಂದು ದೇಶದಲ್ಲಿ 140 ಕೋಟಿ ಜನಸಂಖ್ಯೆಯಿದ್ದು, ಪ್ರತಿವರ್ಷ 130 ಮಿಲಿಯನ್ ಟನ್ ಆಹಾರ ಧಾನ್ಯ ಹಾಗೂ 265 ಮಿಲಿಯನ್ ಟನ್ ತರಕಾರಿ ಹಾಗೂ ಹಣ್ಣು ಬೆಳೆಗಳÀ ಉತ್ಪಾದನೆಯಾಗುತ್ತಿದೆ. ಇದು 140 ಕೋಟಿ ಜನಸಂಖ್ಯೆಗೆ ಬೇಕಾದ ಆಹಾರ ಬೇಡಿಕೆಗಿಂತ ಅಧಿಕವಾಗಿದೆ. ಈ ದಿಸೆಯಲ್ಲಿ ಗುಣಮಟ್ಟದ ಆಹಾರ ಪೂರೈಸುವ ಹಾಗೂ ಉತ್ಪಾದನೆಯ ಅವಶ್ಯಕತೆ ಇದೆ. ಈ ದೃಷ್ಟ್ಟಿಯಿಂದ ರೈತರು ಬೆಳೆಯುತ್ತಿರುವ ಕೃಷಿ ಉತ್ಪನ್ನಗಳಿಗೆ ಹೊರ ದೇಶದಲ್ಲಿ ಮಾರುಕಟ್ಟೆ ಮಾಡುವುದು ಅವಶ್ಯಕವಾಗಿದೆ. ರಫ್ತು ಮಾಡುವ ಗುಣಾತ್ಮಕ ಅಂಶಗಳನ್ನು ಪೂರೈಸುವ ನಿಟ್ಟಿನಲ್ಲಿ ನಾವು ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ ಹಾಗೂ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಬೇಕಾದ ಅವಶ್ಯಕತೆ ಇದೆ.
ಮುಂದುವರೆದು ಮಾತನಾಡಿದ ಅವರು ಅವಶ್ಯವಿದ್ದಷ್ಟು ಬೆಳೆಗಳಿಗೆ ನೀರು ಹರಿಸಬೇಕು. ಅಂದಾಗ ಗುಣಮಟ್ಟದ ಬೆಳೆ ಬರುತ್ತದೆ. ಅದಕ್ಕಾಗಿ ಇಸ್ರೇಲ್ ಮಾದರಿಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಅದಕ್ಕೆ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇಂದು ನಕಲಿ ಬೀಜಗಳ ಹಾವಳಿ ಹೆಚ್ಚಾಗಿದ್ದು ಅನೇಕ ಕಾನೂನಿನ ಕ್ರಮಗಳನ್ನು ಕೈಗೊಂಡಿದೆ. ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಈ ನಿಟ್ಟಿನಲ್ಲಿ ಅಳವಡಿಸಿಕೊಂಡಿದ್ದೇ ಆದರೆ ರೈತರ ಮೋಸ ಹೋಗುವ ಪ್ರಮೆಯೇ ಬರುವುದಿಲ್ಲ. ಅದನ್ನು ಕೇಂದ್ರ ಸರ್ಕಾರ ಶೀಘ್ರವಾಗಿ ಜಾರಿಗೆ ತರಲಿದೆ ಎಂದರು.
ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರ ಮಹತ್‍ಸಾಧನೆ:
ಡಾ.ಪ್ರಭಾಕರ ಕೋರೆಯವರ ಇಚ್ಛಾಶಕ್ತಿಯಿಂದ ಪ್ರಾರಂಭಗೊಂಡಿರುವ ಕೃಷಿ ವಿಜ್ಞಾನ ಕೇಂದ್ರ ಒಂದು ಮಾದರಿ ಕೇಂದ್ರವೆನಿಸಿದ್ದು, ಈ ಭಾಗದ ರೈತರಿಗೆ ವರದಾನವೆನಿಸಿದೆ. ರೈತರಿಗೆ ಇಸ್ರೇಲ್ ಮಾದರಿಯ ಹನಿ ನೀರಾವರಿಯನ್ನು ಪರಿಚಯಿಸುವುದರ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಆಧಾರವಾಗಿ ನಿಂತಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಆಗಮಿಸಿ ತರಬೇತಿಯನ್ನು ಪಡೆದು, ತಮ್ಮ ಕೃಷಿಭೂಮಿಯಲ್ಲಿ ಅಳವಡಿಕೊಳ್ಳಬೇಕೆಂದು ಕರೆನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ.ಪ್ರಭಾಕರ ಕೋರೆಯವರು ಇಂದು ಕೃಷಿ ಮಾಡುವ ರೈತನಿಗೆ ಹೆಣ್ಣುಮಕ್ಕಳನ್ನು ಕೊಡುತ್ತಿಲ್ಲ. ಇದು ದುರ್ದೈವದ ಸಂಗತಿ. ಎಲ್ಲರಿಗೂ ಉತ್ತಮ ಸಂಬಳವನ್ನು ಪಡೆಯುವವರೆ ಬೇಕಾಗಿದ್ದಾರೆ. ಅವನು ನಿಜವಾದ ಅನ್ನದಾತ. ಇಂದು ಚಿಕ್ಕೋಡಿ ಭಾಗದಲ್ಲಿ ರೈತರು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರಗತಿಪರ ರೈತರೆನಿಸಿಕೊಂಡಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿ ಮತ್ತಕೊಪ್ಪದಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ಹುಟ್ಟುಹಾಕಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಉತ್ತಮ ಬೀಜ, ಬೆಳೆಗಳ ತರಬೇತಿ, ಹೈನುಗಾರಿಕೆ ಮೊದಲ್ಗೊಂಡು ಅನೇಕ ಪ್ರಯೋಗಗಳಿಗೆ ಕೇಂದ್ರ ತರಬೇತಿಯನ್ನು ನೀಡುತ್ತಿದೆ. ರೈತರು ಇದರ ಸದುಪಯೋಗಪಡಿಸಿಕೊಂಡಾಗ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಕೆಎಲ್‍ಇ ಸಂಸ್ಥೆಯು 107 ವರ್ಷಗಳ ತನ್ನ ಅಭಿಯಾನದಲ್ಲಿ ಶಿಕ್ಷಣ-ಸಂಶೋಧನೆ-ಆರೋಗ್ಯ ಕ್ಷೇತ್ರದಲ್ಲಿ ಅಗಾಧವಾದ ಸೇವೆಯನ್ನು ಸಲ್ಲಿಸಿತ್ತು. ಇದು ಕೃಷಿ ಕೇಂದ್ರದ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ ಎಂದು ಹೇಳಿದರು. ನಮಗೆ ಸರ್ಕಾರದಿಂದ ಸಬ್ಸಿಡಿಗಳನ್ನು ಕೇಳುವುದಿಲ್ಲ ನಮಗೆ ನೀರು ಕೊಡಿ. ನೀರಿದ್ದರೆ ಕೃಷಿ ಸಾಧ್ಯ. ಅದಕ್ಕಾಗಿ ಯೋಜನೆಗಳನ್ನು ಸರ್ಕಾರ ರೂಪಿಸಬೇಕಾಗಿದೆ. ಇಸ್ರೇಲ್ ದೇಶವು ಹನಿನೀರಾವರಿಗಾಗಿ ಸಾಕಷ್ಟು ಶ್ರಮಿಸಿ ಯಶಸ್ಸನ್ನು ಸಾಧಿಸಿದೆ ಅಂತೆಯೇ ಭಾರತವು ಹೆಜ್ಜೆ ಇಡುತ್ತಿದೆ. ನಾನು 20 ರೈತರನ್ನು ಇಸ್ರೇಲ್ ದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನೀರಾವರಿ ಉಪಯೋಗಗಳನ್ನು ಪ್ರಾತ್ಯಕ್ಷಿಯ ಮೂಲಕ ತೋರಿಸಿಕೊಟ್ಟಿದ್ದೇನೆ. ಎಲ್ಲ ರೈತರು ಹನಿ ನೀರಾವರಿಯೆಡೆಗೆ ಗಮನಹರಿಸಬೇಕೆಂದು ಹೇಳಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪಿ.ಎಲ್. ಪಾಟೀಲ ಅವರು ಗೌರವ ಅತಿಥಿಗಳಾಗಿ ಆಗಮಿಸಿ, ಕೃಷಿ ವಿಜ್ಞಾನ ಕೇಂದ್ರವು ವಿವಿಧ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೈತರಿಗೆ ತರಬೇತಿ ನೀಡುತ್ತಿದೆ. ಹಸಿರುಕ್ರಾಂತಿ ಮಾಡಿದೆ. ನಮ್ಮ ರೈತರು ಸ್ವಾವಲಂಬಿಯಾಗುವಲ್ಲಿ ಅಹರ್ನಿಶಿಯಾಗಿ ಪ್ರಯತ್ನಿಸುತ್ತಿದೆ. ಎಲ್ಲರೂ ಇದರ ಪ್ರಯೋಜನ ಪಡೆದು ಗುಣಾತ್ಮಕವಾದ ಬೆಳೆಯುವಂತಾಗಬೇಕೆಂದು ಸಲಹೆ ನೀಡಿದರು.
ಐಸಿಎಆರ್ ಅಟಾರಿಯ ನಿರ್ದೇಶಕರಾದ ಡಾ.ವಿ.ವೆಂಕಟಸುಬ್ರಮಣಿಯನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಕಾರ್ಯಾಧ್ಯಕ್ಷರು ಹಾಗೂ ಕೆಎಲ್‍ಇ ಆಡಳಿತ ಮಂಡಳಿಯ ನಿರ್ದೇಶಕರಾದ ಬಸವರಾಜ ಆರ್. ಪಾಟೀಲ ಸ್ವಾಗತಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಕೆವಿಕೆ ಮುಖ್ಯಸ್ಥರಾದ ಶ್ರೀದೇವಿ ಅಂಗಡಿ ವಂದಿಸಿದರು.
ಇದೇ ಸಂದರ್ಭದಲ್ಲಿ ಕೆವಿಕೆ ವಿಡಿಯೋ, ಆರು ಗ್ರಂಥಗಳು, ಜೈವಿಕ ಪರಿಕರಗಳನ್ನು ಬಿಡುಗಡೆಗೊಳಿಸಲಾಯಿತು.ಪ್ರಗತಿಪರ ರೈತರಾದ ಮುದಕವಿಯ ಈರವ್ವ ಮಠಪತಿ, ಕುರುಗುಂದದ ಮಹಾದೇವಿ ಅಪ್ಪಯ್ಯನವರಮಠ, ವಸುಂಡಿಯ ಪ್ರಶಾಂತ ನೇಗೂರ, ಬೈಲಹೊಂಗಲದ ಓಂಪ್ರಕಾಶ ಪಾಟೀಲ, ಹಿರೇಕೊಪ್ಪದ ಅಣ್ಣೇಶಗೌಡ ಪಾಟೀಲ, ಸುನ್ನಾಳದ ಅಜ್ಜಪ್ಪ ಕುಲಗೋಡ ಅವರನ್ನು ಮಾನ್ಯ ಸಚಿವೆ ಗೌರವಿಸಿ ಸತ್ಕರಿಸಿದರು.
ಕೆಎಲ್‍ಇ ಉಪಾಧ್ಯಕ್ಷರಾದ ಬಸವರಾಜ ತಟವಟಿ, ನಿರ್ದೇಶಕರಾದ ಡಾ.ವಿಶ್ವನಾಥ ಪಾಟೀಲ, ಡಾ.ವಿ.ಎಸ್.ಸಾಧುನವರ, ಬಾಬಣ್ಣ ಮೆಟಗುಡ್, ಪ್ರವೀಣ ಬಾಗೇವಾಡಿ ಉಪಸ್ಥಿತರಿದ್ದರು. ಕೆಎಲ್‍ಇ ಸಂಗೀತ ಶಾಲೆಯ ಸಿಬ್ಬಂದಿ ಪ್ರಾರ್ಥಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ