*ರಮೇಶ್ ಕತ್ತಿಗೆ ಶಾಕ್: ಹುಕ್ಕೇರಿ ಕ್ಷೇತ್ರದ ಡಿಸಿಸಿ ಬ್ಯಾಂಕ್ ಚುನಾವಣೆ ಮಾತ್ರ ಮುಂದೂಡಿಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿದ್ದಾ ಜಿದ್ದಿನಿಂದ ಕೂಡಿದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಮೇಶ್ ಕತ್ತಿಗೆ ಶಾಕ್ ಎದುರಾಗಿದೆ. ನಾಳೆ ಚುನಾವಣೆ ನಡೆಯಲಿದೆ. ಆದರೆ ಹುಕ್ಕೇರಿ ಕ್ಷೇತ್ರದ ಚುನಾವಣೆ ಮಾತ್ರ ಮುಂದೂಡಲಾಗಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ನ 7 ನಿರ್ದೇಶಕ ಸ್ಥಾನಗಳಿಗೆ ಅ.19ರಂದು ಮತದಾನ ನಿಗದಿಯಾಗಿತ್ತು. ಆದರೆ, ಡೆಲಿಗೇಷನ್ ಸಮಸ್ಯೆ ಮುಂದಿಟ್ಟುಕೊಂಡು ಹುಕ್ಕೇರಿ ತಾಲ್ಲೂಕಿನ ಮದಿಹಳ್ಳಿ ಪಿಕೆಪಿಎಸ್ ನಿರ್ದೇಶಕರೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ. ಹೀಗಾಗಿ, ಹುಕ್ಕೇರಿ ಕ್ಷೇತ್ರದ ಮತದಾನವನ್ನು ಮುಂದೂಡಲು ನ್ಯಾಯಾಲಯ ನಿರ್ದೇಶನ ನೀಡಿದೆ.
ಕೋರಂ ಇಲ್ಲದೆಯೇ ಮದಿಹಳ್ಳಿ ಪಿಕೆಪಿಎಸ್‌ನಲ್ಲಿ ಡೆಲಿಗೇಷನ್ ಠರಾವು ಪಾಸ್ ಮಾಡಲಾಗಿದೆ ಎಂದು ದೂರಿ ನಿರ್ದೇಶಕರೊಬ್ಬರು ನ್ಯಾಯಾಲಯ ಮೊರೆ ಹೋಗಿದ್ದಾರೆ.
ಇದೇ ಪಿಕೆಪಿಎಸ್‌ನಲ್ಲಿ ಡೆಲಿಗೇಷನ್ ಠರಾವು ಪಾಸ್ ಮಾಡುವ ಸಂಬಂಧ ನಡೆದ ತಂಟೆಯಲ್ಲಿ, ಸಚಿವ ಸತೀಶ ಜಾರಕಿಹೊಳಿ ಅವರ ಎದುರಿಗೇ ಮಹಿಳೆಯೊಬ್ಬರು ತಮ್ಮ ಪತಿ, ನಿರ್ದೇಶಕರ ಕಪಾಳಮೋಕ್ಷ ಮಾಡಿದ್ದರು.
ನಾಳೆಯೆ ಚುನಾವಣೆ ನಡೆಯಲಿರುವ ಕಾರಣ ರಮೇಶ್ ಕತ್ತಿ ಸೇರಿದಂತೆ ಎಲ್ಲರು ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಹುಕ್ಕೇರಿ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಮುಂದೂಡಿರುವ ಪರಿಣಾಮ ಭಾರಿ ಚರ್ಚೆಗೆ ಕಾರಣವಾಗಿದೆ.
ಸಧ್ಯ ಕೋರ್ಟ್ ಆದೇಶದವರೆಗೆ ಚುನಾವಣೆ ಮುಂದೂಡಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ದೊರೆಯಬೇಕು.