ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಪದೇ ಪದೆ ನಡೆಯುತ್ತಿರುವ ಗಡಿ ಮತ್ತು ಭಾಷೆ ಗಲಭೆಯನ್ನು ಹುಬ್ಬಳ್ಳಿ ರಾಜಕಾರಣಿಗಳು ವರವಾಗಿಸಿಕೊಂಡಿದ್ದಾರೆಯೇ? ಅಂತಹ ದಟ್ಟವಾದ ಅನುಮಾನ ಈಗ ಬೆಳಗಾವಿಯನ್ನು ಕಾಡುತ್ತಿದೆ. ಗಲಭೆ ಬೆಳಗಾವಿಗೆ ಶಾಪವಾದರೆ ಹುಬ್ಬಳ್ಳಿಗೆ ಅದೇ ವರವಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಬಿಯಾಂಡ್ ಹುಬ್ಬಳ್ಳಿ ಆಗಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದರು.
ಇದನ್ನು ಓದಿ:
ಅಭಿವೃದ್ಧಿ ಯೋಜನೆಗಳು ಹುಬ್ಬಳ್ಳಿ ದಾಟಿ ಬರುತ್ತಿಲ್ಲ. ಎಲ್ಲವೂ ಹುಬ್ಬಳ್ಳಿಯಲ್ಲೇ ನಿಲ್ಲುತ್ತವೆ ಎನ್ನುವುದು ಇದರ ಹಿಂದಿನ ಅಸಮಾಧಾನ, ಕಳಕಳಿಯಾಗಿತ್ತು. ಎಲ್ಲ ಯೋಜನೆಗಳನ್ನು ಹುಬ್ಬಳ್ಳಿ ರಾಜಕಾರಣಿಗಳು ಕಬಳಿಸುತ್ತಾರೆ. ಬೆಳಗಾವಿಗೆ ಏನನ್ನೂ ಕೊಡುವುದಿಲ್ಲ, ಅಷ್ಟೇ ಅಲ್ಲ ಬೆಳಗಾವಿಗೆ ಮಂಜೂರಾಗಿದ್ದನ್ನೂ ರದ್ದುಪಡಿಸಿ ಹುಬ್ಬಳ್ಳಿಗೆ ಕೊಂಡೊಯ್ಯುತ್ತಾರೆ ಎನ್ನುವ ಆರೋಪ ಹಲವು ವರ್ಷಗಳಿಂದ ಇದೆ. ಇದಕ್ಕೆ ಮೊನ್ನೆ ಮೊನ್ನೆ ನಡೆದ ರಾಷ್ಟ್ರೀಯ ಯುವಜನೋತ್ಸವದಿಂದ ಹಿಡಿದು ಇದೀಗ ಬೆಳಗಾವಿಯಿಂದ ರದ್ದಾಗಿರುವ 12 ವಿಮಾನದವರೆಗೆ ಹತ್ತಾರು ಉದಾಹರಣೆಗಳು ಸಿಗುತ್ತವೆ.
ಉಡಾನ್ ಯೋಜನೆಯನ್ನು ಹುಬ್ಬಳ್ಳಿಗೆ ತಂದು ಬೆಳಗಾವಿ ವಿಮಾನ ನಿಲ್ದಾಣ ಮುಚ್ಚುವ ಸ್ಥಿತಿಗೆ ತಂದಿಡಲಾಗಿತ್ತು. ನಂತರದಲ್ಲಿ ಎಚ್ಚೆತ್ತ ಬೆಳಗಾವಿ ತೀವ್ರ ಹೋರಾಟ ಮಾಡಿ ಉಡಾನ್ ಪಡೆಯಿತು. ಬೆಳಗಾವಿಯಿಂದ ದಟ್ಟ ಟ್ರಾಫಿಕ್ ನೊಂದಿಗೆ ಹಾರಾಟ ನಡೆಸುವ ವಿಮಾನಗಳನ್ನೂ ರದ್ದು ಮಾಡಿ ಹುಬ್ಬಳ್ಳಿಯಿಂದ ಹಾರಾಟ ನಡೆಸುವಂತೆ ಮಾಡುತ್ತಿರುವುದು ಈಗಿನ ವಿದ್ಯಮಾನ.
ಬೆಳಗಾವಿಗೆ ಬರುವ ದೊಡ್ಡ ದೊಡ್ಡ ಯೋಜನೆಗಳನ್ನು ಹುಬ್ಬಳ್ಳಿ ಕಸಿದುಕೊಳ್ಳುತ್ತಿರುವುದು ಗೊತ್ತಿರುವ ಸಂಗತಿಯಾದರೂ ಇದು ಹೇಗೆ ಎನ್ನುವುದು ಯಕ್ಷಪ್ರಶ್ನೆಯಾಗಿಯೇ ಉಳಿದಿತ್ತು, ಬೆಳಗಾವಿಯ ರಾಜಕಾರಣಿಗಳಲ್ಲಿ ಒಗ್ಗಟ್ಟಿಲ್ಲ, ಹುಬ್ಬಳ್ಳಿ ರಾಜಕಾರಣಿಗಳೆಲ್ಲ ಅಭಿವೃದ್ಧಿಯ ವಿಷಯ ಬಂದಾಗ ಒಟ್ಟಾಗುತ್ತಾರೆ ಎನ್ನುವ ಆರೋಪವನ್ನೂ ಜನಸಾಮಾನ್ಯರು ಮಾಡುತ್ತಿದ್ದರು.
ಆದರೆ ಈಗ ಇದಕ್ಕಿಂತ ಭಿನ್ನವಾದ ಅನುಮಾನ ಕಾಡತೊಡಗಿದೆ. ಬೆಳಗಾವಿಗೆ ದೊಡ್ಡ ಯೋಜನೆಗಳು ಬರುತ್ತವೆ ಎನ್ನುವುದು ಗೊತ್ತಾಗುತ್ತಿದ್ದಂತೆ ಉದ್ಯಮಿಗಳನ್ನು ಸಂಪರ್ಕಿಸುವ ಕೆಲವು ರಾಜಕಾರಣಿಗಳು, `ಬೆಳಗಾವಿ ಗಲಭೆ ಪೀಡಿತ ಪ್ರದೇಶ, ಅಲ್ಲಿ ನಿಮ್ಮ ಉದ್ಯಮ ನಡೆಸುವುದು ಕಷ್ಟ. ಹಾಗಾಗಿ ಹುಬ್ಬಳ್ಳಿಯಲ್ಲೇ ಬಂಡವಾಳ ಹೂಡಿ. ನಿಮಗೆ ಬೇಕಾದ ವ್ಯವಸ್ಥೆ ಮಾಡಿಕೊಡುತ್ತೇವೆ’ ಎಂದು ಮನವೊಲಿಸಿ ಹುಬ್ಬಳ್ಳಿಗೆ ಡೈವರ್ಟ್ ಮಾಡಿಕೊಳ್ಳುತ್ತಾರೆ ಎನ್ನುವ ಬಲವಾದ ಶಂಕೆಯನ್ನು ಬೆಳಗಾವಿಯ ಕೆಲವು ಅಭಿವೃದ್ಧಿ ಚಿಂತಕರು ವ್ಯಕ್ತಪಡಿಸಿದ್ದಾರೆ. ಗಲಭೆಯ ಬೆದರಿಕೆ ಮೂಲಕ ಬೆಳಗಾವಿಗೆ ಅಭಿವೃದ್ಧಿ ಬರುವುದನ್ನು ತಡೆಯುವುದು ಸುಲಭ. ಹಾಗಾಗಿ ಇದನ್ನೇ ಬಂಡವಾಳ ಮಾಡಿಕೊಂಡು ಬೆಳಗಾವಿ ಅಭಿವೃದ್ಧಿಯಾಗದಂತೆ ನಮ್ಮವರೇ ತಡೆಯುತ್ತಿದ್ದಾರೆ ಎಂದು ಅವರು ಆರೋಪಿಸುತ್ತಾರೆ.
ರಾಜ್ಯ ಸರಕಾರ ಬಿಯಾಂಡ್ ಬೆಂಗಳೂರು ಎನ್ನುತ್ತಿದೆ. ಆದರೆ ಬಿಯಾಂಡ್ ಹುಬ್ಬಳ್ಳಿ ಏನೂ ಬರುತ್ತಿಲ್ಲ. ಬಿಯಾಂಡ್ ಹುಬ್ಬಳ್ಳಿ ಆದರೆ ಮಾತ್ರ ಗಡಿ ಜಿಲ್ಲೆ ಬೆಳಗಾವಿ ಬೆಳೆಯಲು ಸಾಧ್ಯ. ಸುಮ್ಮನೆ ಇಲ್ಲಿಗೆ ಬಂದು ಭಾಷಣ ಮಾಡಿ ಹೋಗುವುದರಿಂದ ಏನೇನೂ ಪ್ರಯೋಜನವಿಲ್ಲ. ಇಲ್ಲಿನ ಯುವಕರಿಗೆ ಉದ್ಯೋಗವೂ ಸಿಗುವುದಿಲ್ಲ ಎಂದು ಅಭಯ ಪಾಟೀಲ ಅಧಿವೇಶನದಲ್ಲಿ ತಮ್ಮದೇ ಸರಕಾರಕ್ಕೆ ಖಾರವಾಗಿ ಬಿಸಿಮುಟ್ಟಿಸಿದ್ದರು.
ಅಪವಾದ ಹೋಗಲಾಡಿಸಲು ಹೊಸ ಯೋಚನೆ
ಗಲಭೆ ಪೀಡಿತ ಪ್ರದೇಶ ಎನ್ನುವ ಬೆಳಗಾವಿ ಮೇಲಿರುವ ಕಳಂಕ ನಿವಾರಿಸಲು ಈಗ ಕೆಲವು ಅಭಿವೃದ್ಧಿ ಚಿಂತಕರು ಮುಂದಾಗಿದ್ದಾರೆ. ಸಮಾಜದ ಮೇಲೆ ಮತ್ತು ಉದ್ಯಮಿಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಇರುವವರನ್ನು ಬಳಸಿಕೊಂಡು ಅವರ ಮೂಲಕ ಬೆಳಗಾವಿ ಉದ್ಯಮಸ್ನೇಹಿಯಾಗಿದೆ ಎನ್ನುವ ಸಂದೇಶ ಸಾರಲು ಪ್ರಯತ್ನ ಆರಂಭಿಸಲಾಗಿದೆ. ಫೆಬ್ರವರಿ ಮೊದಲ ವಾರ ಇಂತಹ ಪ್ರಯತ್ನಕ್ಕೆ ಚಾಲನೆ ಸಿಗಲಿದೆ.
ಇದರ ಜೊತೆಗೆ ಹುಬ್ಬಳ್ಳಿಯ ರಾಜಕಾರಣಿಗಳ ಮೇಲಿರುವ ಇಂತಹ ಆರೋಪ ನಿಜವಾಗಿದ್ದಲ್ಲಿ ಅವರು ಸಹ ಕೆಲವು ಪ್ರಮುಖ ಉದ್ಯಮಗಳನ್ನು, ಅಭಿವೃದ್ಧಿ ಯೋಜನೆಗಳನ್ನು ಬೆಳಗಾವಿಗೆ ಬಿಟ್ಟುಕೊಡಲು ಮುಂದಾಗಬೇಕು. ಇಲ್ಲವಾದಲ್ಲಿ ಬೆಳಗಾವಿ ಜನರ ಪಾಲಿಗೆ ವಿಲನ್ ಗಳಾಗಿ ಕಾಣಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.
For English News –
*ಬೆಳಗಾವಿ: 12 ವಿಮಾನಗಳ ಸೇವೆ ಸ್ಥಗಿತ; ಉದ್ಯಮಿಗಳ ಆಕ್ರೋಶ*
https://pragati.taskdun.com/belgaum-airport12-flights-suspendedbusinessmenchamber-of-commerce-hall-meeting/
ಮಹಾರಾಷ್ಟ್ರ ಸಂಸದರಿಗೆ ಬೆಳಗಾವಿ ಎಂಟ್ರಿ ಬ್ಯಾನ್; ರಾತ್ರೋರಾತ್ರಿ ಆಜ್ಞೆ ಹೊರಡಿಸಿದ ಬೆಳಗಾವಿ ಡಿಸಿ
https://pragati.taskdun.com/belgaum-entry-ban-for-maharashtra-mp-belgaum-dc-issued-an-order-overnight/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ