ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಗರದ ಲಕ್ಷ್ಮಿ ಟೇಕ್ಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾಮಠದಲ್ಲಿ ಇತ್ತೀಚಿಗೆ ನಿಧನರಾದ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಶ್ರದ್ಧಾಂಜಲಿ ಸಭೆಯನ್ನು ನೆರವೇರಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಮೌನವನ್ನು ಆಚರಿಸಿ ದಿವಂಗತ ರಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಕೇಂದ್ರ ಸಚಿವರಾದ ಮೇಲೆ ಸುರೇಶ್ ಅಂಗಡಿಯವರು ಜಿಲ್ಲೆ ಅಷ್ಟೇ ಎಲ್ಲಾ ರಾಜ್ಯಕ್ಕೆ ಇಡೀ ದೇಶಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಸರಳ ಸಜ್ಜನಿಕೆಗೆ ಹೆಸರಾಗಿ ಇವತ್ತು ನಮ್ಮನ್ನೆಲ್ಲ ಬಿಟ್ಟು ಆಗಲಿರುವುದು ದುಃಖಕರ ಸಂಗತಿ ಯಾಗಿದೆ. ನಮ್ಮ ಭಾಗದ ದುರಾದೃಷ್ಟ ಎನ್ನುತ್ತೇವೆ. ಏಕೆಂದರೆ ಬಹಳಷ್ಟು ದಿನಗಳ ನಂತರದಲ್ಲಿ ಒಬ್ಬ ಯೋಗ್ಯ ವ್ಯಕ್ತಿ ಕೇಂದ್ರ ಸಚಿವರಾಗಿ ನಮಗೆ ವಿಶೇಷವಾದ ಕೊಡುಗೆ ನೀಡಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂದರು.
ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಮುಕ್ತಾರ್ ಹುಸೇನ್ ಪಟಾನ್ ಅವರು ಶ್ರದ್ಧಾಂಜಲಿ ಅರ್ಪಿಸಿ ಮಾತನಾಡುತ್ತಾ ಪೇಂಟ್ ಹಚ್ಚುವ ಒಬ್ಬ ವ್ಯಕ್ತಿ ಬೆಳೆಯುವುದಕ್ಕೆ ಕಾರಣ ಸುರೇಶ್ ಅಂಗಡಿಯವರು ನನಗೆ ಅವರು ನೀಡಿರುವ ಭಿಕ್ಷೆ ಎಂದೇ ಭಾವಿಸಿದ್ದೇನೆ. ಅವರು ನಿಜಕ್ಕೂ ನನ್ನ ತಂದೆಯ ಸ್ಥಾನದಲ್ಲಿ ನಿಂತವರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅರವಿಂದ್ ಪಾಟೀಲ್, ಚಂದ್ರಶೇಖರಯ್ಯ ಸೌಡಿ ಸಾಲಿಮಠ್, ಅರವಿಂದ್ ಜೋಶಿ, ವಿರೂಪಾಕ್ಷಯ್ಯ ನೀರಲಗಿ, ಸೋಮಶೇಖರ್ ಹಿರೇಮಠ್, ಎನ್.ಎಸ್. ಚೌಗುಲೆ. ಮಹಾಂತೇಶ್ ಹಿರೇಮಠ್, ಮಂಜುನಾಥ್ ಧರಿಗೌಡರ ಸೇರಿದಂತೆ ಅನೇಕರು ಭಾಗಿಯಾಗಿ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ