Belagavi NewsBelgaum News

*ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಕ್ಕೆ ಮುಹೂರ್ತ ಫಿಕ್ಸ್: ಭಂಡಾರ ರಹಿತ ಜಾತ್ರೆಯಲ್ಲಿ ಹೊನ್ನಾಟವೇ ವಿಶೇಷ*

ಜಾತ್ರೆಯಲ್ಲಿ ಬ್ಯಾನರ್‌ ನಿರ್ಬಂಧ

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಮಾರ್ಚ್ 18ರಿಂದ 26ರ ವರೆಗೆ ನಡೆಯಲಿದ್ದು, ಭವ್ಯ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಅಧ್ಯಕ್ಷ ದೇವಣ್ಣ ಬಂಗೇನ್ನವರ ತಿಳಿಸಿದರು. 

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರತಿ ಐದು ವರ್ಷಕ್ಕೊಮ್ಮೆ ಅತ್ಯಂತ ಸಡಗರ ಸಂಭ್ರಮದಿAದ ಜಾತ್ರಾ ಮಹೋತ್ಸವ ನಡೆಯಲಿದ್ದು, ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಹಾಗೂ ಪೂಜಾರಿಗಳ ಸಮ್ಮುದಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಭಕ್ತರ ಅನುಕೂಲಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. 

ಮಾರ್ಚ್ 18ರಿಂದ 26ರ ವರೆಗೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಇಡೀ ಸುಳೇಭಾವಿ ಗ್ರಾಮ ಸಿದ್ಧಗೊಂಡಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. 9 ದಿನಗಳ ಕಾಲ ನಡೆಯುವ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. 

Home add -Advt

ಮಾರ್ಚ್ 18ರಂದು ರಾತ್ರಿ 12 ಗಂಟೆ ಸುಮಾರಿಗೆ ಗ್ರಾಮದ ಲಕ್ಷ್ಮೀ ಗಲ್ಲಿಯಲ್ಲಿರುವ ಬಡಿಗೇರ ಮನೆಯಿಂದ ಶ್ರೀ ಮಹಾಲಕ್ಷ್ಮೀ ದೇವಿಯ ವೈಭವದ ಹೊನ್ನಾಟ ಆರಂಭಗೊಳ್ಳಲಿದೆ. ಸಂಪ್ರದಾಯದAತೆ ದೇವಿಯ ಉಡಿ ತುಂಬುವ ಕಾರ್ಯಕ್ರಮದೊಂದಿಗೆ ಹೊನ್ನಾಟ ಶುರುವಾಗಲಿದೆ. ಇಡೀ ರಾತ್ರಿ ಭಂಡಾರ ರಹಿತ ಹೊನ್ನಾಟ ನಡೆದು ಬುಧವಾರ ಮಾರ್ಚ್ 19ರಂದು ಸಂಜೆ 8 ಗಂಟೆವರೆಗೆ ನಿರಂತರವಾಗಿ ಹೊನ್ನಾಟ ನಡೆಯಲಿದೆ. ನಂತರ 8 ಗಂಟೆ ಸುಮಾರಿಗೆ ಗ್ರಾಮದ ದೇವಸ್ಥಾನದಲ್ಲಿ ದೇವಿಯ ಪ್ರತಿಷ್ಠಾಪನೆ ಆಗುವುದು. ಈ ವರ್ಷ ನಡುಮನೆ ಜಾತ್ರೆ ಇದ್ದು, ಹೀಗಾಗಿ ದೇವಿಯನ್ನು ಮಂದಿರದಲ್ಲಿಯೇ ಪ್ರತಿಷ್ಠಾಪಿಸಲಾಗುತ್ತದೆ. ಮಾರ್ಚ್ 21ರಂದು ಶುಕ್ರವಾರ ಧಾರ್ಮಿಕ ವಿಧಿ ವಿಧಾನಗಳಿಂದ ಸುಳೇಭಾವಿ ಗ್ರಾಮಸ್ಥರಿಂದ ಉರುಳು ಸೇವೆ(ದೀಡ್ ನಮಸ್ಕಾರ) ಮತ್ತು ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಮಾ. 26ರಂದು ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು. 

ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ದೇವಿ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಲ್ಲಲು ಭಕ್ತರ ಅನುಕೂಲಕ್ಕಾಗಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸರದಿ ಸಾಲಿನಲ್ಲಿ ನಿಲ್ಲಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. 9. ದಿನಗಳ‌ ಕಾಲ‌ ವಿವಿ‌ಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಟ್ರಸ್ಟ್ ಸದಸ್ಯ ಬಸನಗೌಡ ಹುಂಕರಿಪಾಟೀಲ ಮಾತನಾಡಿ, ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಈ ಜಾತ್ರೆ ಉತ್ತರ ಕರ್ನಾಟಕದಲ್ಲಿಯೇ ಅತ್ಯಂಡ ಭವ್ಯ ಜಾತ್ರೆ ಇದಾಗಿದೆ.ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಮಹಾಲಕ್ಷ್ಮೀ ಭಕ್ತರ ಪಾಲಿನ ಕಾಮಧೇನು. ತಲೆತಲಾಂತರದಿಂದ ಜಾತ್ರಾ ಪದ್ಧತಿ ಸಂಪ್ರದಾಯದಿಂದ ನಡೆದುಕೊಂಡು ಬಂದಿದೆ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವು ನಡೆಯುತ್ತಿದ್ದೇವೆ ಎಂದು ಹೇಳಿದರು.

ಭಂಡಾರ ರಹಿತ ಜಾತ್ರೆಯಲ್ಲಿ ಹೊನ್ನಾಟವೇ ವಿಶೇಷ

ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಲಿದ್ದಾರೆ. ಭಂಡಾರ ರಹಿತ ಜಾತ್ರೆ ಇದಾಗಿದ್ದು, ಹೊನ್ನಾಟ ನೋಡುವುದೇ ಸೊಗಸು. ಇಂಥ ಭವ್ಯ ಹೊನ್ನಾಟವನ್ನು ಭಕ್ತರು ಕಣ್ತುಂಬಿಕೊಳ್ಳಬೇಕು. ಭಂಡಾರ ಇಲ್ಲದೇ ನಡೆಯುವ ಏಕೈಕ ಜಾತ್ರೆ ನಮ್ಮದು. ಈ ಮಾದರಿ ಜಾತ್ರೆಯನ್ನು ಇನ್ನುಳಿದ ಕಡೆಗಳಲ್ಲೂ ಅಳವಡಿಸಿಕೊಳ್ಳಲು ಟ್ರಸ್ಟ್ ಅಧ್ಯಕ್ಷ ದೇವಣ್ಣ ಬಂಗೇನ್ನವರ ಸಲಹೆ ನೀಡಿದರು. 

ಜಾತ್ರೆಯಲ್ಲಿ ಬ್ಯಾನರ್‌ಗೆ ನಿರ್ಬಂಧ

ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆ ವಿಶೇಷತೆ ಎಂದರೆ 9 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಎಲ್ಲಿಯೂ ಬ್ಯಾನರ್‌ಗಳನ್ನು ಅಳವಡಿಸಲು ಅವಕಾಶ ಇಲ್ಲ. ಬ್ಯಾನರ್, ಬಂಟಿಂಗ್ಸ್, ಕಟೌಟ್‌ಗಳಿಂದ ಗ್ರಾಮದ ಸೌಂದರ್ಯ ಹಾಳಾಗಬಾರದು, ಯಾರೂ ಪ್ರತಿಷ್ಠೆ ತೋರಿಸಬಾರದು ಎಂಬ ಕಾರಣಕ್ಕೆ ಹಲವಾರು ವರ್ಷಗಳಿಂದ ಬ್ಯಾನರ್ ಅಳವಡಿಕೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ ಡಿಜೆ-ಡಾಲ್ಬಿಗಳನ್ನು ಹಚ್ಚಲು ಅವಕಾಶ ಇರುವುದಿಲ್ಲ. ದೇಸಿ ವಾದ್ಯ ಮೇಳದೊಂದಿಗೆ ಜಾತ್ರೆ ನೆರವೇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಯ ಹೊನ್ನಾಟದ ವೈಭವ ನೋಡಬೇಕು ಎಂದು ಟ್ರಸ್ಟ್ ಸದಸ್ಯ ಬಸನಗೌಡ ಹುಕರಿಪಾಟೀಲ ತಿಳಿಸಿದರು. 

ಟ್ರಸ್ಟ್ ಸದಸ್ಯರಾದ ಶಶಿಕಾಂತ ಸಂಗೊಳ್ಳಿ, ಅಣ್ಣಪ್ಪಪಾಟೀಲ, ದ್ಯಾಮಣ್ಣ ಮುರಾರಿ, ಬಾಳಕೃಷ್ಣ ಬಡಕಿ, ಕಲ್ಲಪ್ಪ ಲೋಲಿ, ಲಗಮಪ್ಪ ಗುಡದಪ್ಪಗೋಳ, ಮಾರುತಿ ರವಳಗೌಡ, ಕಲ್ಲಪ್ಪ ರಾಗಿ, ಭೈರಣ್ಣ ಪರೋಜಿ, ಮುರುಗೇಶ ಹಂಪಿಹೊಳಿ, ಸಂಭಾಜಿ ಯಮೋಜಿ, ವಿಠ್ಠಲ ಚೌಗುಲೆ, ಮಲ್ಲಪ್ಪ ಯರಝರವಿ, ಲಕ್ಷ್ಮಣ ಮಂಡು, ಕೃಷ್ಣಾ ಕಲ್ಲೂರ, ಮಾರುತಿ ರವಳಗೌಡರ, ಅನಂತ ಕವಡಿ, ಪೂಜಾರಿಗಳಾದ ಭೀಮಶಿ ಪೂಜಾರಿ, ರಾಮ ಪೂಜಾರಿ, ಲಕ್ಷ್ಮಣ ಪೂಜೇರಿ, ಯಲ್ಲಪ್ಪ ದ್ಯಾಮರಾಯಿ, ಭೈರೋಬಾ ಕಾಂಬಳೆ ಇದ್ದರು.

Related Articles

Back to top button