Kannada NewsKarnataka News

ದಿ.ಶ್ರೀಮಂತ ಚಿಂತಾಮಣರಾವ್ ಪಟವರ್ಧನ ರಾಜೇ ಅವರ ಪ್ರತಿಮೆ ಸ್ಥಾಪನೆಗೆ ಶಂಕುಸ್ಥಾಪನೆ

ದಿ.ಶ್ರೀಮಂತ ಚಿಂತಾಮಣರಾವ್ ಪಟವರ್ಧನ ರಾಜೇ ಅವರ ಪ್ರತಿಮೆ ಸ್ಥಾಪನೆಗೆ ಶಂಕುಸ್ಥಾಪನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಹಾಪುರದ ಚಿಂತಾಮಣರಾವ್ ಪ್ರೌಢ ಶಾಲೆಯಲ್ಲಿ ಗುರುವಾರ ದಿ.ಶ್ರೀಮಂತ ಚಿಂತಾಮಣರಾವ್ ಪಟವರ್ಧನ ರಾಜೇ ಅವರ ಪ್ರತಿಮೆ ಸ್ಥಾಪನೆಗೆ ಶಂಕುಸ್ಥಾಪನೆಯನ್ನು ಸಾಂಗ್ಲಿ ಸಂಸ್ಥಾನದ ವಿಜಯಸಿಂಗ್ ರಾಜೇಪಟವರ್ಧನ ನೆರವೇರಿಸಿದರು.

ಜೊತೆಗೆ ಸ್ಮಾರ್ಟ್ ಕ್ಲಾಸ್ ರೂಂ, ಡಿಜಿಟಲ್ ಲೈಬ್ರರಿ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಬಿಟ್ಟು ಇಂದು ಬದುಕಲು ಸಾಧ್ಯವಿಲ್ಲ. ಅದಿಲ್ಲದೇ ದೇಶ ಮುನ್ನಡೆಯಲು ಸಾಧ್ಯವೇ ಇಲ್ಲ.  ಹಾಗಾಗಿ ವಿದ್ಯಾರ್ಥಿಗಳು ತಂತ್ರಜ್ಞಾನದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.

ಕೋಮುಸೌಹಾರ್ಧತೆ ಇಂದಿನ ಅಗತ್ಯವಾಗಿದೆ. ಇದಕ್ಕಾಗಿ ಸಾಂಗ್ಲಿ ಸಂಸ್ಥಾನ ಹಿಂದಿನಿಂದಲೂ ಮಹತ್ವದ ಕೊಡುಗೆ ನೀಡುತ್ತ ಬಂದಿದೆ. ಈಗಲೂ ಮುಂದುವರಿದಿದೆ ಎಂದು ಅವರು ಹೇಳಿದರು. ಚಿಂತಾಮಣರಾವ್ ಪ್ರೌಢ ಶಾಲೆಯಲ್ಲಿ ದೇಶಕ್ಕೇ ಮಾದರಿಯಾಗುವಂತೆ ಸ್ಮಾರ್ಟ್ ಕ್ಲಾಸ್ ರೂಂ ಹಾಗೂ ಡಿಜಿಟಲ್ ಲೈಬ್ರರಿ ಸ್ಥಾಪನೆ ಮಾಡಿರುವ ಶಾಸಕ ಅಭಯ ಪಾಟೀಲ ಅವರ ಕಾರ್ಯವನ್ನು ವಿಜಯಸಿಂಗ್ ರಾಜೇಪಟವರ್ಧನ ಶ್ಲಾಘಿಸಿದರು.

ಸರಕಾರಿ ಶಾಲೆಗಳಲ್ಲಿ ಸಿಗುವ ಜ್ಞಾನ

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಬೇಕು. ದೇಶದ ದೊಡ್ಡ ಜನರೆಲ್ಲ ಸರಕಾರಿ ಶಾಲೆಗಳಲ್ಲೇ ಕಲಿತವರು. ಸರಕಾರಿ ಶಾಲೆಗಳಲ್ಲಿ ಸಿಗುವ ಜ್ಞಾನ ಬೇರೆಲ್ಲೂ ಸಿಗುವುದಿಲ್ಲ. ನಾನೂ ಕೂಡ ಸರಕಾರಿ ಶಾಲೆಯಲ್ಲೇ ಕಲಿತು ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ ಎಂದರು.

ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಮಾತನಾಡಿ, ಮೈಸೂರು ಮಹಾರಾಜರಂತೆ ಪಟವರ್ಧನ ರಾಜಮನೆತನವೂ ಶಿಕ್ಷಣಕ್ಕಾಗಿ ಅಪಾರ ಕೊಡುಗೆಗಳನ್ನು ನೀಡಿದೆ. ನಾಡಿನ ಸಂಸ್ಕೃತಿ, ಕಲೆಗಳನ್ನು ಉಳಿಸಲು ಆದ್ಯತೆ ನೀಡುತ್ತ ಬಂದಿವೆ ಎಂದರು.

ಕಾರ್ಯಕ್ರಮದ ರೂವಾರಿ ಶಾಸಕ ಅಭಯ ಪಾಟೀಲ ಮಾತನಾಡಿ, ಶಾಲೆಯನ್ನು ಅಭಿವೃದ್ಧಿಪಡಿಸಲು ಹಾಕಿಕೊಂಡಿರುವ ಯೋಜನೆಗಳನ್ನು ವಿವರಿಸಿದರು. 5 ಲಕ್ಷ ರೂ. ವೆಚ್ಚದಲ್ಲಿ ದಿ.ಶ್ರೀಮಂತ ಚಿಂತಾಮಣರಾವ್ ಪಟವರ್ಧನ ರಾಜೇ ಅವರ ಪ್ರತಿಮೆ ಸ್ಥಾಪನೆ ಮಾಡಲಾಗುವುದು. 60 ಲಕ್ಷ ರೂ. ವೆಚ್ಚದಲ್ಲಿ ಸಭಾಭವನವನ್ನೂ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ಶಾಸಕ ಅನಿಲ ಬೆನಕೆ, ಪೊಲೀಸ್ ಆಯುಕ್ತ ಲೋಕೇಶಕುಮಾರ ಮಾತನಾಡಿದರು. ರಾಜಲಕ್ಷ್ಮಿ ರಾಜೇ ಪಟವರ್ಧನ ವೇದಿಕೆಯಲ್ಲಿದ್ದು, ಕಾರ್ಯಕ್ರಮಕ್ಕೆ ವಿಜಯಸಿಂಗ್ ರಾಜೇಪಟವರ್ಧನ ಅವರನ್ನು ವಾದ್ಯ ಮೇಳಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button