*ಅರ್ಜಿ ಕೊಡಲು ಬರಬೇಡಿ, ಆಶಿರ್ವಾದ ಮಾಡಲು ಮಾತ್ರ ಬನ್ನಿ ಎಂದಿದ್ದರಾ ಸಿಎಂ ಡಿ.ಕೆ.ಶಿವಕುಮಾರ್? ವಿವಾದದ ಬಗ್ಗೆ ಸಿದ್ದಗಂಗಾ ಶ್ರೀ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ: ನೈಸ್ ಯೋಜನೆಗೆಂದು ಸಿದ್ಧಗಂಗಾ ಮಠದ 7 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು, ಅದರಲ್ಲಿ 1 ಎಕರೆ ಮಾತ್ರ ಬಳಕೆ ಮಾಡಲಾಗಿದೆ. ಉಳಿದ ಭೂಮಿಯನ್ನು ಮಠಕ್ಕೆ ವಾಪಸ್ ಕೊಡುವಂತೆ ಕೇಳಿದಾಗ ಸಿದ್ದಗಂಗಾ ಸ್ವಾಮೀಜಿಗಳ ಜತೆ ಸಿಎಂ ಡಿಲ್.ಕೆ.ಶಿವಕುಮಾರ್ ಉದ್ಧಟತನದಿಂದ ವರ್ತಿಸಿದ್ದಾರೆ. ಅರ್ಜಿ ಕೊಡಲು ಬರಬೇಡಿ ಆಶಿರ್ವಾದ ಮಾಡಲು ಮಾತ್ರ ಬನ್ನಿ ಎಂದು ಹೇಳಿದ್ದಾರೆಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಸ್ವತಃ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.
‘ಹಲವು ವಿಚಾರಗಳ ಬಗ್ಗೆ ಚರ್ಚಿಸುವುದಕ್ಕಾಗಿ ಮುಖ್ಯಮಂತ್ರಿಗಳ ಭೇಟಿಗೆ ತೆರಳಿದ್ದು ನಿಜ. ನೈಸ್ ರಸ್ತೆಗೆ ಬಳಸದೇ ಇರುವ ಜಮೀನನ್ನು ವಾಪಸ್ ಕೊಡಿ ಎಂಬುದು ನಮ್ಮ ಬೇಡಿಕೆಯಾಗಿದೆ. ನಾವು ಮಠದ 7 ಎಕರೆ 39 ಗುಂಟೆ ಜಮೀನನ್ನು (ಸೋಮಪುರದಲ್ಲಿ ಮಠಕ್ಕೆ ದಾನವಾಗಿ ಸಿಕ್ಕಿದ್ದ ಜಾಗ) ಯೋಜನೆಗೆ ಎಂದು ನೀಡಿದ್ದೆವು. 2001-2002 ರ ಸಂದರ್ಭದಲ್ಲಿ ಅಶೋಕ್ ಖೇಣಿಯವರೇ ಆ ಬಗ್ಗೆ ಮಠಕ್ಕೆ ಬಂದು ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ಮಠಕ್ಕೆ ನಿಗದಿತ ಆದಾಯ ಬರುವಂತೆ ಮಾಡಿಕೊಡುವುದಾಗಿ ಭರವಸೆಯನ್ನೂ ನೀಡಿದ್ದರು. ಆದರೆ, ಅವ್ಯಾವುವೂ ಈಡೇರಿಲ್ಲ. ಆ ಬಗ್ಗೆ ಮಠದಿಂದ ಹಲವು ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಮಠದಿಂದ ಪಡೆದ 1.5 ಎಕರೆ ಭೂಮಿ ಯೋಜನೆಗೆ ಬಳಕೆಯಾಗಿದ್ದು ಬಿಟ್ಟರೆ ಉಳಿದ ಜಮೀನು ಖಾಲಿ ಬಿಡಲಾಗಿದೆ. ಸರ್ಕಾರದ ಯೋಜನೆಗೆಂದು ಸ್ವಾಧೀನ ಮಾಡಿದ ಜಾಗ 25 ವರ್ಷಗಳಿಂದ ಬಳಕೆಯಾಗದೆ ಇದ್ದರೆ ಅದನ್ನು ಮೂಲ ಭೂಮಾಲೀಕರಿಗೆ ಕೊಡಬೇಕೆಂಬ ನಿಯಮ ಇದೆಯಂತೆ. ಈ ಮಧ್ಯೆ, ಮಠದವರೇ ಜಾಗ ನೀಡುತ್ತಿದ್ದಾರೆ ಎಂದು ಅನೇಕ ರೈತರು ಸಹ ಜಮೀನು ನೀಡಿದ್ದರು. ರೈತರು ನಮ್ಮನ್ನು ಬಹಳ ಒತ್ತಾಯಿಸಿದರು. ರಸ್ತೆ ಆದಮೇಲೆ ಜಾಗವನ್ನ ಟೋಲ್ಗೆ ಬಳಕೆ ಮಾಡುತ್ತಿದ್ದಾರೆ. ಇದರಿಂದ ಭಕ್ತರಿಗಷ್ಟೇ ಅಲ್ಲ, ನಮಗೂ ತುಂಬಾ ನೋವಾಯ್ತು. ಹಾಗಾಗಿ ಮಠದ ಜಾಗವನ್ನು ನಾವು ವಾಪಸ್ ಕೇಳುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ಇನ್ನು ಸಿಎಂ ಹೇಳಿಕೆ ವಿಚಾರವಾಗಿ, ನಮಗೆ ಅನಿವಾರ್ಯ ಇತ್ತು, ಸಮಸ್ಯೆ ಯಾರಿಗೆ ಹೇಳೋಣ? ಅದಕ್ಕಾಗಿ ಸಿಎಂ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದೆವು. ಅವರು ಸಿಎಂ ಆಗಿ ಒಂದು ತಿಂಗಳಾಗಿರಬಹುದು. ಆದರೆ ನಾನೇ ಭೇಟಿಗೆ ಬರುತ್ತೇನೆಂದು ಅವರ ಸಿಬ್ಬಂದಿಗೆ ತಿಳಿಸಿರಲಿಲ್ಲ. ಹೀಗಾಗಿ ಮಠದಿಂದ ಬೇರಾರೋ ಬರುತ್ತಾರೆಂದು ಅವರು ತಿಳಿದಿದ್ದರು. ಹಾಗಾಗಿ ಅವರು, ನೀವು ಆಶೀರ್ವಾದ ಮಾಡುವುದಕ್ಕೆ ಮಾತ್ರ ಬನ್ನಿ. ನೀವು ಕರೆದರೆ ನಾನೇ ಬರುತ್ತೇನೆ ಎಂಬ ಸಂಸ್ಕಾರದ ಮಾತುಗಳನ್ನು ಹೇಳಿದರು’ ಎಂದು ತಿಳಿಸಿದ್ದಾರೆ.
ಇನ್ನು ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ಸಂದರ್ಭ ಮಠಕ್ಕೆ ತೆರಳಿದ್ದಾಗಿಯೂ ಚಿನ್ನದ ಕರಡಿಗೆ ನೀಡಿದ್ದಾಗಿಯೂ ಅಶೋಕ್ ಖೇಣಿ ಹೇಳಿದ್ದಾರೆ ಎನ್ನಲಾದ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದಲಿಂಗ ಶ್ರೀ, ಇದನ್ನೆಲ್ಲ ನಿರಾಕರಿಸಿದ್ದಾರೆ. ಖೇಣಿಯವರು ಆ ಸಂದರ್ಭದಲ್ಲಿ ಮಠಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




