ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವುದೇ ಈಗ ದೊಡ್ಡ ಚರ್ಚೆಯ ವಿಷಯ. ಬಾದಾಮಿ, ಚಾಮುಂಡೇಶ್ವರಿ, ಕೋಲಾರ, ವರುಣಾ, ಸವದತ್ತಿ ಸೇರಿದಂತೆ ಹತ್ತಾರು ಕ್ಷೇತ್ರಗಳ ಹೆಸರು ಬಂದು ಹೋಗುತ್ತಿವೆ.
ಮಾಜಿ ಮುಖ್ಯಮಂತ್ರಿಯೊಬ್ಬರಿಗೇ ಕ್ಷೇತ್ರ ಸಿಗುತ್ತಿಲ್ಲ, ಇದು ಕಾಂಗ್ರೆಸ್ ನ ದುರ್ಗತಿ ಎಂದು ಬಿಜೆಪಿಯ ಹಲವು ನಾಯಕರು ವ್ಯಂಗ್ಯವಾಡುತ್ತಿದ್ದಾರೆ. ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸಹ ಟೀಕಿಸಿದ್ದಾರೆ. ಈ ಎಲ್ಲ ಚರ್ಚೆಗಳ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೇರೆಯದೇ ಮಾತು ಹೇಳಿದ್ದಾರೆ. ಸಿದ್ದರಾಮಯ್ಯಗೆ ಕ್ಷೇತ್ರ ಸಿಕ್ಕಿಲ್ಲ ಅನ್ನೋದೆಲ್ಲ ಸುಳ್ಳು, ಬೇಕಂತಲೇ ಪ್ರಚಾರ ಗಿಟ್ಟಿಸುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಯಡ್ಯೂರಪ್ಪ ಹೇಳಿದ್ದಾರೆ. ಇದು ಸಿದ್ದರಾಮಯ್ಯ ಪ್ರಚಾರದ ಗಿಮಿಕ್. ತಮ್ಮನ್ನು ಎಲ್ಲ ಕಡೆ ಕರೆಯುತ್ತಿದ್ದಾರೆ ಎಂದು ತೋರಿಸಲು, ಎಲ್ಲಿ ನಿಂತರೂ ಗೆಲ್ಲುತ್ತೇನೆ ಎಂದು ತೋರಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಆದರೆ, ಈ ರೀತಿ ಮಾಡುವುದರಿಂದ ಅವರಿಗೆ ಹೇಗೆ ಮತ್ತು ಏನು ಪ್ರಯೋಜನ ಆಗುತ್ತದೆಯೋ ನನಗಂತೂ ಅರ್ಥವಾಗುತ್ತಿಲ್ಲ ಎಂದೂ ಯಡಿಯೂರಪ್ಪ ಹೇಳಿದ್ದಾರೆ.
ಇದರ ಬೆನ್ನಿಗೇ ಬಿಜೆಪಿ ಸಂಸದ ಪ್ರತಾಪ ಸಿಂಹ್ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತೆ ಸಿದ್ದರಾಮಯ್ಯ ಕ್ಷೇತ್ರ ಗೊಂದಲಕ್ಕೆ ಟೀಕೆ ಮಾಡಿದ್ದಾರೆ. ಅವರಿಗೇ ಕ್ಷೇತ್ರ ಸಿಗದಿರುವಾಗ ತಮ್ಮ ಅನುಯಾಯಿಗಳಿಗೆ ಹೇಗೆ ಕೊಡಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ