ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡು ಸಿದ್ದರಾಮಯ್ಯ ಸರಕಾರ ನಡೆಸುತ್ತಿದ್ದಾರೆ – ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣನ ತತ್ವಗಳನ್ನು ಅಳವಡಿಸಿಕೊಂಡು ರಾಜ್ಯದಲ್ಲಿ ಸರಕಾರ ನಡೆಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಅಥಣಿಯಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಗಳಾದ ನಂತರ ಮೊದಲ ಬಾರಿಗೆ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಗೆ, ಅಥಣಿಗೆ ಆಗಮಿಸಿದ್ದಾರೆ. ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡು ಸರಕಾರವನ್ನು ಮುನ್ನಡೆಸುತ್ತಿರುವ ಸಿದ್ದರಾಮಯ್ಯ ಅವರು ಬಡವರಿಗಾಗಿ, ರಾಜ್ಯದ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನುಡಿದಂತೆ ನಡೆಯುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಕಳೆದ ಚುನಾವಣೆಯಲ್ಲಿ ಅಥಣಿ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಇಡೀ ರಾಜ್ಯದ ಜನರು ನೋಡುತ್ತಿದ್ದರು. ಮತದಾರರ ಆಶಿರ್ವಾದದೊಂದಿಗೆ ನಾವಿಬ್ಬರೂ ಅತೀ ಹೆಚ್ಚಿನ ಮತಗಳ ಅಂತರದಿಂದ ಆಯ್ಕೆಯಾಗಲು ಸಾಧ್ಯವಾಯಿತು. ಲಕ್ಷ್ಮಣ ಸವದಿ ಧೀಮಂತ ನಾಯಕರು. ಅವರು ನಮ್ಮ ಪಕ್ಷ ಸೇರುವಾಗ ಬಹಳ ಬೇಡಿಕೆಗಳನ್ನು ಇಡುತ್ತಾರೆ ಅಂದುಕೊಂಡಿದ್ವಿ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ, ಅರ್ಧವಾಗಿರುವ ಕೆಲಸಗಳನ್ನು ಪೂರ್ಣಗೊಳಿಸಬೇಕು ಎನ್ನುವ ಒಂದೇ ಬೇಡಿಕೆ ಇಟ್ಟರು. ನನ್ನ ಕ್ಷೇತ್ರದ ಜನರ ಮುಖದಲ್ಲಿ ನಗು ಇರಬೇಕಾದರೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿಕೊಡಿ ಎಂದು ಕೇಳಿದರು. ಸಚಿವರಾಗಬೇಕು, ಅಧಿಕಾರ ಬೇಕು ಎಂದು ಕೇಳಲಿಲ್ಲ. ರೈತರಿಗಾಗಿ ವೆಟರ್ನರಿ ಕಾಲೇಜನ್ನು ತಂದರು ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ, ಚಿಕ್ಕೋಡಿ ಎರಡನ್ನೂ ಗೆಲ್ಲಲೇಬೇಕಾಗಿದೆ. ನಿಮ್ಮೆಲ್ಲ ಸಹಕಾರ, ಆಶಿರ್ವಾದ ಲಕ್ಷ್ಮಣ ಸವದಿಯವರ ಮೇಲಿರಲಿ, ನಮ್ಮ ಸರಕಾರದ ಮೇಲಿರಲಿ ಎಂದು ಹೆಬ್ಬಾಳಕರ್ ಮನವಿ ಮಾಡಿದರು.
ಇದೇ 27ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟೂ 11.88 ಲಕ್ಷ ಫಲಾನುಭವಿಗಳಿದ್ದು, 9 ಲಕ್ಷ ಮಹಿಳೆಯರು ಈಗಾಗಲೆ ನೊಂದಣಿ ಮಾಡಿಕೊಂಡಿದ್ದಾರೆ. ಈ ವೇದಿಕೆಯನ್ನು ಉಪಯೋಗಿಸಿಕೊಂಡು ತಮಗೆಲ್ಲ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದೇನೆ. ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಿ ಎಂದು ಅವರು ವಿನಂತಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್.ಎಸ್.ಭೋಸರಾಜು, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಸರಕಾರದ ವಿಧಾನಸಭೆ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಶಾಸಕರಾದ ಭರಮಗೌಡ ಕಾಗೆ, ವಿಶ್ವಾಸ ವೈದ್ಯ, ಜೆ.ಟಿ.ಪಾಟೀಲ, ಮಹೇಂದ್ರ ತಮ್ಮಣ್ಣವರ, ಬಾಬಾಸಾಹೇಬ್ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ಹುಕ್ಕೇರಿ, ಚನ್ನರಾಜ್ ಹಟ್ಟಿಹೊಳಿ, ಕೊಕಟನೂರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಪೂಜಾರಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು ವೇದಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ