Kannada NewsKarnataka NewsLatest

ಹುಟ್ಟು ಹಬ್ಬಕ್ಕೆ ಶುಭ ಕೋರಲು ಬಂದವರಿಗೆ ಸಿದ್ದರಾಮಯ್ಯ ಶಾಕ್!

ಮೈಸೂರಿನಿಂದ ಶಿರಾಡಿ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಸಿಎಂ

200 ಕಿಮೀ ರಸ್ತೆ ಮಾರ್ಗ: ಮಾದುದ್ದಕ್ಕೂ ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ

ಹೊಸ ರಸ್ತೆ ಕಾಮಗಾರಿಗಳ ಪ್ರಗತಿ, ರಸ್ತೆ ಗುಂಡಿಗಳ ಬಗ್ಗೆ, ಉದ್ದೇಶಿತ ಯೋಜನೆಗಳ ಸ್ಥಿತಿ -ಗತಿಗಳ ಬಗ್ಗೆ ಧೂರವಾಣಿ ಮೂಲಕವೇ ಮಾಹಿತಿ ಕೇಳಿದ ಸಿಎಂ*

ಪ್ರಗತಿವಾಹಿನಿ ಸುದ್ದಿ, ಮೈಸೂರು : ಮೈಸೂರಿನಿಂದ ಶಿರಾಡಿ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಮುಖ್ಯಮಂತ್ರಿಗಳು ಮಾರ್ಗದುದ್ದಕ್ಕೂ ನಾನಾ ರಸ್ತೆ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.

ಮುಖ್ಯಮಂತ್ರಿಗಳ ಕಾರು ಬಿಳಿಕೆರೆ ಕ್ರಾಸ್ ಸಮೀಪಿಸುತ್ತಿದ್ದಂತೆ ಬಿಳಿಕೆರೆ ಕ್ರಾಸ್ ನಿಂದ ಯಡಗೊಂಡನಹಳ್ಳಿ ವರೆಗಿನ 41ಕಿಮೀ ಉದ್ದದ ನಾಲ್ಕು ಪಥ ರಾಷ್ಟ್ರೀಯ ಹೆದ್ದಾರಿ ಉದ್ದೇಶಿತ ಯೋಜನೆ ಬಗ್ಗೆ ಮಾಹಿತಿ ಪಡೆದರು.

600 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಟೆಂಡರ್ ಕರೆಯಲಾಗಿದೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ಬಂತು.

ಮಾರ್ಗದಲ್ಲಿ ಅಲ್ಲಲ್ಲಿ ಕಾಣಿಸಿದ ರಸ್ತೆ ಗುಂಡಿಗಳಿಗೆ ಗರಂ ಆದ ಮುಖ್ಯಮಂತ್ರಿಗಳು, ಇದರಿಂದ ಅಪಘಾತಗಳ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮಳೆ ಇಲ್ಲದ ಸಮಯ ನೋಡಿಕೊಂಡು ಗುಂಡಿಗಳನ್ನು ಮುಚ್ಚಿಸುವಂತೆ ಸೂಚನೆ ನೀಡಿದರು.

ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಸೂಚನೆ

ಹೊಳೆ ನರಸೀಪುರ ತಾಲ್ಲೂಕಿನ ದೊಡ್ಡಕಾಡನೂರು ಮಾರ್ಗವಾಗಿ ಸಾಗಿತ್ತಿದ್ದಂತೆ ಅಪಾಯದ ಸೂಚನೆ ನೀಡುತ್ತಿದ್ದ ವಿದ್ಯುತ್ ಕಂಬಗಳನ್ನು ಬದಲಾಯಿಸಿ, ವೈರ್ ಗಳನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಧೂರವಾಣಿ ಮೂಲಕವೇ ಸೂಚಿಸಿದರು.

ಹಳ್ಳಿ ಮೈಸೂರು ಹಾದು ಹೋಗುವಾಗ ಹಾಳಾಗಿದ್ದ ರಸ್ತೆ ವಿಭಜಕಗಳನ್ನು ಗುರುತಿಸಿ ಸರಿ ಪಡಿಸಲು ಸೂಚನೆ ನೀಡಿದರು.

ನಾನು ಹುಟ್ಟು ಹಬ್ಬ ಮಾಡಲ್ಲ: ಇವೆಲ್ಲಾ ಯಾಕೆ ತಂದ್ರಿ?

ಮಾರ್ಗದುದ್ದಕ್ಕೂ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಲು ಹಾರ ತುರಾಯಿ, ಶಾಲುಗಳ ಸಮೇತ ಅಲ್ಲಲ್ಲಿ ಕಾದಿದ್ದರು. ಯಾವುದನ್ನೂ ಸ್ವೀಕರಿಸದ ಸಿಎಂ, ನಾನು ಹುಟ್ಟು ಹಬ್ಬ ಆಚರಿಸಲ್ಲ ಎಂದು ಕೈ ಬೀಸಿ, ಕೈ ಮುಗಿದು ಮುಂದೆ ಸಾಗಿದರು.

ಶಿರಾಡ್ ಘಾಟ್ ಗುಡ್ಡ ಕುಸಿತದ ಭೀಕರತೆಗೆ ಸಿಎಂ‌ ಶಾಕ್

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗೆ ಸಿಎಂ ಪ್ರಶ್ನೆಗಳ ಸುರಿಮಳೆ

ಖರ್ಚು ಕಡಿಮೆ ಮಾಡಲು ತಡೆಗೋಡೆ ನಿರ್ಮಿಸದ್ದಕ್ಕೆ, 90 ಡಿಗ್ರಿಯಲ್ಲಿ ಗುಡ್ಡ ಕಡಿದಿರುವುದಕ್ಕೆ ಸಿಎಂ‌ ಆಕ್ರೋಶ*

ಕೇಂದ್ರ ಸಚಿವ ಗಡ್ಕರಿ ಅವರಿಗೆ ಪತ್ರ ಬರೆದು ವಿವರಿಸಲು ತೀರ್ಮಾನ: ಸಿಎಂ ಸಿದ್ದರಾಮಯ್ಯ

ಶಿರಾಡ್ ಘಾಟ್ ಗುಡ್ಡ ಕುಸಿತದ ಭೀಕರತೆಗೆ ಶಾಕ್ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಅವರಿಗೆ ಸಾಲು ಸಾಲು ಪ್ರಶ್ನೆಗಳ ಸುರಿಮಳೆಗೈದರು.

ಗುಡ್ಡ ಕುಸಿತದ ಸ್ಥಳ ಪರಿಶೀಲನೆಗೆ ಅಧಿಕಾರಿಗಳ ತಂಡದೊಂದಿಗೆ ರಸ್ತೆ ಮಾರ್ಗವಾಗಿ ಘಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು 90 ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದಕ್ಕೆ ಅಸಮಾಧಾನಗೊಂಡು ಗುಡ್ಡ ಕುಸಿತಕ್ಕೆ ಇದೂ ಕೂಡ ಪ್ರಮುಖ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ಕಾಮಗಾರಿ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಿಎಂ ಗೆ ವಿವರಿಸುತ್ತಾ, “ಒಟ್ಟು 45 km ನಲ್ಲಿ 35 km ಹೈವೇ ಕಾಮಗಾರಿ ಮುಗಿದಿದೆ. 10 km ಬಾಕಿ ಇದೆ. ಆದರೆ ಇಲ್ಲಿಯವರೆಗೂ ಎಲ್ಲೂ ತಡೆಗೋಡೆಗಳನ್ಜು ನಿರ್ಮಿಸಿಲ್ಲ, ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಂತೆ ಇಲ್ಲ” ಎಂದು ವಿವರಿಸಿದರು.

ಮೊಣಕಾಲುದ್ದುದ ಕೆಸರಲ್ಲೇ ಗುಡ್ಡ ಕುಸಿತದ ಜಾಗದುದ್ದಕ್ಕೂ ನಡೆದು ಪರಿಶೀಲಿಸಿದ ಮುಖ್ಯಮಂತ್ರಿಗಳು ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ SDRF ತಂಡದೊಂದಿಗೆ ಕೆಲ ಹೊತ್ತು ಚರ್ಚಿಸಿದರು.

ಬಳಿಕ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ‌ ಅಧಿಕಾರಿ ವಿಲಾಸ್ ಅವರ ಮುಂದೆ ಸಿಎಂ ಸಾಲು ಸಾಲು ಪ್ರಶ್ನೆಗಳನ್ನು ಇಟ್ಟರು…

*ಹಣ ಉಳಿಸುವ ಉದ್ದೇಶದಿಂದ ಕಡಿಮೆ ಭೂಮಿ ಸ್ವಾಧೀನಗೊಳಿಸಿಕೊಳ್ಳುವುದು, ಬಳಿಕ ಖರ್ಚು ಉಳಿಸಲು 90 ಡಿಗ್ರಿಯಲ್ಲಿ ಗುಡ್ಡಗಳನ್ನು ಕತ್ತರಿಸಿದ್ದೀರಿ. ಇದು ಅವೈಜ್ಞಾನಿಕ ಕಾಮಗಾರಿ ಅಲ್ಲವೇ?

*ಗುಡ್ಡಗಳನ್ನು 30 ರಿಂದ 45 ಡಿಗ್ರಿಯಲ್ಲಿ ಕತ್ತರಿಸಿ ತಡೆಗೋಡೆ ನಿರ್ಮಿಸಿದ್ದರೆ ಮಣ್ಣು ಕುಸಿತವನ್ನು ತಡೆಯಬಹುದಿತ್ತಲ್ಲವೇ?

*ಕಾಮಗಾರಿ ಆರಂಭಿಸುವ ಮೊದಲು ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿದ್ದೀರಾ? ಅದಕ್ಕೆ ತಕ್ಕಂತೆ ಮುಂಜಾಗ್ರತಾ ಕ್ರಮ ಏಕೆ ವಹಿಸಿಲ್ಲ ಎಂದು ಪ್ರಶ್ನಿಸಿದರು.

ವಿಲಾಸ್ ಅವರಿಂದ ಸೂಕ್ತ ಉತ್ತರ ಬರದಿದ್ದಾಗ ಒಟ್ಟಾರೆ ಸ್ಥಿತಿ ಗತಿ ಕುರಿತು ಕೇಂದ್ರ ಸಚಿವರಾದ ಗಡ್ಕರಿ ಅವರಿಗೆ ಪತ್ರ ಬರೆಯುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು.

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಶಾಸಕ ಶಿವಲಿಂಗೇಗೌಡರು, ಸಂಸದ ಶ್ರೇಯಸ್ ಪಟೇಲ್ , ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್ ಸೇರಿ ಹಿರಿಯ ಅಧಿಕಾರಿಗಳ ತಂಡವೇ ಸ್ಥಳದಲ್ಲಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button