Kannada NewsKarnataka NewsLatestPolitics

*ತಮಿಳುನಾಡಿಗೆ ನೀರು ಬಿಡುವ ಸ್ಥಿತಿ ಇಲ್ಲ; ಪ್ರಧಾನಿ ಮೋದಿಗೆ ಪತ್ರ ಭರೆಯುವುದಾಗಿ ತಿಳಿಸಿದ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮಿಳಿನಾಡಿಗೆ ನೀರು ಬಿಡಿವ ಸ್ಥಿತಿಯಲ್ಲಿ ಇಲ್ಲ. ನಮ್ಮಲಿಯೇ ಮಳೆ ಕೊರತೆಯಿಂದಾಗಿ ನೀರಿನ ಅಭಾವ ಸೃಷ್ಟಿಯಾಗಿದೆ. ಹಾಗಾಗಿ ವಾಸ್ತವಾಂಶವನ್ನು ವಿವರಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಾವೇರಿ ನದಿ ನೀರು ವಿಚಾರವಾಗಿ ವಿಧನಸೌಧದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ ನೀರು ಬಿಡಬೇಕಾ ಬೇಡವಾ ಎನ್ನುವುದಕ್ಕಿಂತ ನಮ್ಮಲ್ಲಿ ನೀರೇ ಇಲ್ಲ. ಹೀಗಾಗಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತವನ್ನು ಎಲ್ಲರೂ ಒಟ್ಟಾಗಿ ಕಾಪಾಡೋಣ ಎಂದರು.

ಇದುವರೆಗಿನ ಆದೇಶದ ಪ್ರಕಾರ ನಾವು 99 ಟಿಎಂಸಿ ನೀರು ಬಿಡಬೇಕಿತ್ತು. ಆದರೆ ಇದುವರೆಗೂ 37 ಟಿಎಂಸಿ ಮಾತ್ರ ಹೋಗಿದೆ.
ನಮಗೆ 70 ಟಿಎಂಸಿ ನೀರು ಬೆಳೆ ರಕ್ಷಣೆಗೆ ಬೇಕು. ಕುಡಿಯುವ ನೀರಿಗೆ 33 ಟಿಎಂಸಿ ನೀರು ಬೇಕು. ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಬೇಕು. ಆದರೆ ನಮ್ಮಲ್ಲಿ ಸಂಗ್ರಹ ಇರುವುದು 53 ಟಿಎಂಸಿ ಮಾತ್ರ. ಹೀಗಾಗಿ ನಮ್ಮಲ್ಲಿ ನೀರೇ ಇಲ್ಲ. ನಮ್ಮ ಅಧಿಕಾರಿಗಳು ರಾಜ್ಯದ ವಾಸ್ತವಾಂಶವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೂ ನಿತ್ಯ 5 ಟಿಎಂಸಿ ನೀರು ಬಿಡಲು ಸೂಚಿಸಲಾಗಿದೆ. ನಮ್ಮ ರೈತರ ಪ್ರಾಣವನ್ನು, ಹಿತವನ್ನು ಕಡೆಗಣಿಸಿ ನೀರು ಬಿಡಬೇಕು ಎಂದು ಯಾರೂ ಹೇಳಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಕಳೆದ 123 ವರ್ಷಗಳ ಇದೇ ಅವಧಿಗೆ ಹೋಲಿಸಿದರೆ ಅತಿ ಕಡಿಮೆ ಮಳೆಯಾಗಿದೆ. ಅತೀ ಕಡಿಮೆ ನೀರು ಸಂಗ್ರಹದಲ್ಲಿದೆ. ಈ ಹಿನ್ನೆಲೆಯಲ್ಲಿ ನೀರಿನ ಕೊರತೆ ಇರುವುದರಿಂದ ಕೈಗೊಳ್ಳಬಹುದಾದ ಕಾನೂನು ಕ್ರಮಗಳು, ರಾಜಕೀಯ ಕ್ರಮಗಳು ಹಾಗೂ ಕೇಂದ್ರ ಸರ್ಕಾರದ ನೆರವು ಕೋರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ತಾಂತ್ರಿಕ ಪರಿಣತರು, ಕಾನೂನು ತಜ್ಞರು, ಆ ಭಾಗದ ಜನಪ್ರತಿನಿಧಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಡಾ. ಜಿ. ಪರಮೇಶ್ವರ, ಹೆಚ್‌.ಕೆ.ಪಾಟೀಲ, ಚೆಲುವರಾಯಸ್ವಾಮಿ, ಕೆ.ಹೆಚ್. ಮುನಿಯಪ್ಪ, ಕೆ.ಎನ್. ರಾಜಣ್ಣ, ಎನ್‌.ಎಸ್. ಭೋಸರಾಜು, ಕೆ.ವೆಂಕಟೇಶ್‌, ಜಮೀರ್ ಅಹಮದ್ ಖಾನ್ , ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಈ ಭಾಗದ ಸಂಸದರು, ಶಾಸಕರು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಕಾನೂನು ತಜ್ಞರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇತರೆ ಹೈಲೈಟ್ಸ್

ಕಳೆದ 28 ರಂದು ನಡೆದ ಸರ್ವಪಕ್ಷ ಸಭೆಯಲ್ಲಿ ಕಾವೇರಿ, ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಚರ್ಚಿಸಲಾಗಿತ್ತು. ಇಂದು ಕೇವಲ ಕಾವೇರಿ ನೀರಿನ ವಿಚಾರವಾಗಿ ಸಭೆ ನಡೆಸಿದ್ದೇವೆ

ಅಂದು ಕೂಡ ಕಾವೇರಿ ನೀರು ನಿಯಂತ್ರಣ ಸಮಿತಿಯು 10 ಸಾವಿರ ಕ್ಯೂಸೆಕ್ಸ್‌ ನೀರು ಬಿಡುವಂತೆ ಆದೇಶ ನೀಡಿ ನಮ್ಮ ವಾದ ಆಲಿಸಿದ ನಂತರ ಐದು ಸಾವಿರ ಕ್ಯೂಸೆಕ್ಸ್ ಬಿಡಲು ಸೂಚಿಸಿತ್ತು. ಮತ್ತೆ ನಿನ್ನೆ ಐದು ಸಾವಿರ ಕ್ಯೂಸೆಕ್ಸ್‌ ನೀರು ಬಿಡುವಂತೆ ಆದೇಶ ಮಾಡಿದೆ. ಸಾಮಾನ್ಯ ಮಳೆಯಾದಾಗ ನೀರು ಬಿಡಲು ತಕರಾರಿಲ್ಲ. ಕಳೆದ ವರ್ಷ 667 ಟಿಎಂಸಿ ಬಿಡಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶ ಪ್ರಕಾರ ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ನೀರು ಬಿಡಬೇಕು. ಆದರೆ ದುರದೃಷ್ಟವಶಾತ್‌ ಸಂಕಷ್ಟ ಹಂಚಿಕೆ ಸೂತ್ರವಿಲ್ಲದ ಕಾರಣ ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದೇವೆ

99 ಟಿಎಂಸಿ ನೀರು ಕೊಡಬೇಕಾಗಿತ್ತು. ಇವತ್ತಿನ ವರೆಗೆ 37.7 ಟಿಎಂಸಿ ನೀರು ಬಿಡಲಾಗಿದೆ. ನಮಗೆ 70 ಟಿಎಂಸಿ ನೀರು ಬೆಳೆ ಉಳಿಸಿಕೊಳ್ಳಲು ಬೇಕು. 33 ಟಿಎಂಸಿ ಕುಡಿಯುವ ನೀರಿಗಾಗಿ ಬೇಕು. ಜೊತೆಗೆ 3 ಟಿಎಂಸಿ ಕೈಗಾರಿಕೆಗಳಿಗೆ ಬೇಕು. ಇದೀಗ ಲಭ್ಯವಿರುವುದು ನಾಲ್ಕೂ ಜಲಾಶಯಗಳಿಂದ 53 ಟಿಎಂಸಿ ನೀರು ಬೇಕಾಗಿದೆ. ಬೆಳೆಗಳಿಗೆ ಕಟ್ಟುನೀರು ಬಿಡಲಾಗುತ್ತಿದೆ. ಅಧಿಕಾರಿಗಳು ರಾಜ್ಯದ ಪರಿಸ್ಥಿತಿ, ವಾಸ್ತವಾಂಶ ತಿಳಿಸಿದರೂ ನೀರು ಬಿಡುವಂತೆ ಸೂಚಿಸಿದ್ದಾರೆ

ನಮ್ಮ ಮುಂದೆ ಎರಡು ದಾರಿ ಇದೆ- ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮತ್ತೆ ಅರ್ಜಿ ಹಾಕುವುದು ಮೊದಲ ದಾರಿ. ಎರಡನೇ ಆಯ್ಕೆ ನೀರು ಇಲ್ಲ ನಮ್ಮ ಬಳಿ ಎಂದು ಸುಪ್ರೀಂ ಕೋರ್ಟಿನ ಮೊರೆ ಹೋಗಬೇಕು

ಇಂದು ಜಲಸಂಪನ್ಮೂಲ ಸಚಿವರು ದೆಹಲಿಗೆ ತೆರಳಿ ಜಲಶಕ್ತಿ ಸಚಿವರನ್ನು ಭೇಟಿಯಾಗಲಿದ್ದಾರೆ. ವಕೀಲರ ತಂಡದೊಂದಿಗೆ ಚರ್ಚಿಸಲಿದ್ದಾರೆ. ನಾವು ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ, ನೀರು ಕೊಡುವುದು ಕಷ್ಟವಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ.

ರೈತರನ್ನು ಬಲಿಕೊಟ್ಟು ನೀರು ಕೊಡಲಾಗದು. ಈಗ ಸಂಕಷ್ಟದಲ್ಲಿದ್ದೇವೆ ನಾವು. ನಾವೆಲ್ಲರೂ ಒಟ್ಟಿಗೆ ಹೋಗಬೇಕು.
ಈ ಸಂಕಷ್ಟಕ್ಕೆ ಮೇಕೆದಾಟು ಯೋಜನೆಯೇ ಪರಿಹಾರ ಎಂದರು. ಹೀಗಾಗಿ ಎಲ್ಲ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ನಮ್ಮ ರಾಜಕೀಯ ಒಲವು, ನಿಲುವುಗಳನ್ನು ಬದಿಗಿಟ್ಟು, ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಒಟ್ಟಿಗೆ ಕೆಲಸ ಮಾಡೋಣ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button