ಪ್ರಗತಿವಾಹಿನಿ ಸುದ್ದಿ: ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಜನವರಿ 22ರಂದು ಅಯೋಧ್ಯೆಯಲ್ಲಿ ಐತಿಹಾಸಿಕ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಈ ನಡುವೆ ಕಾಂಗ್ರೆಸ್ ನಾಯಕರು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದ್ದು, ಈ ಬಗ್ಗೆ ಬಿಜೆಪಿ ವ್ಯಾಪಕವಾಗಿ ಟೀಕೆ ಮಾಡಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ನಾನೂ ಅಯೋಧ್ಯೆಗೆ ಹೋಗುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಹೇಳಿಕೆ ನೀಡಿದ್ದಾರೆ.
ನಾವು ರಾಮನನ್ನು ವಿರೋಧಿಸಿಲ್ಲ. ನಾನೂ ಕೂಡ ರಾಮ ಭಕ್ತನೆ. ಆದರೆ ಈ ವಿಚಾರವನ್ನು ರಾಜಕೀಯ ಮಾಡಲ್ಲ. ನಾನೂ ಅಯೋಧ್ಯೆಗೆ ಹೋಗಿಬರುತ್ತೇನೆ. ಉದ್ಘಾಟನಾ ಕಾರ್ಯಕ್ರಮ ಮುಗಿದ ಬಳಿಕ ಅಯೋಧ್ಯೆಗೆ ಹೋಗಿ ರಾಮ ಮಂದಿರ ಯಾವ ರೀತಿ ನಿರ್ಮಾಣ ಮಾಡಿದ್ದಾರೆ ಎಂಬುದನ್ನು ನೋಡಿ ಬರುತ್ತೇನೆ ಎಂದು ತಿಳಿಸಿದ್ದಾರೆ.
ರಾಮ ಮಂದಿರ ನಿರ್ಮಾಣ ವಿಚಾರವನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಕಾಂಗ್ರೆಸ್ ನವರು ರಾಮನ ವಿರೋಧಿಗಳು ಎಂದು ಅನಗತ್ಯವಾಗಿ ಆರೊಪಿಸುತ್ತಿದ್ದಾರೆ. ನಾವ್ಯಾರೂ ರಾಮನ ವಿರೋಧಿಗಳಲ್ಲ. ನಾವೂ ಕೂಡ ಶ್ರೀರಾಮನ ಭಕ್ತರೇ. ನಮ್ಮ ಕಾರ್ಯಕರ್ತರು ಕೂಡ ರಾಮ ಮಂದಿರಗಳಿಗೆ ದೇವಸ್ಥಾನಗಳಿಗೆ ತೆರಳಿ ಪೂಜೆ ಮಾಡುತ್ತಾರೆ. ನಾವ್ಯಾರೂ ಬಿಜೆಪಿಯವರ ರೀತಿ ರಾಜಕೀಯ ಉದ್ದೇಶಕ್ಕೆ ಮಾಡಲ್ಲ. ರಾಮ ಮಂದಿರ ವಿಚಾರವನ್ನು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಇದನ್ನು ನಾವು ವಿರೋಧಿಸುತ್ತೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ