ಯುವಕರನ್ನು ಭ್ರಮಾಲೋಕದಲ್ಲಿ ತೇಲುವಂತೆ ಮಾಡಿದ ಮೋದಿ; ಮೈತ್ರಿ ನಾಯಕರಿಗೆ ಮತ ಕೇಳುವ ಹಕ್ಕಿಲ್ಲ ಎಂದು ಕಿಡಿ
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ನ ಸತ್ಯ ಹಾಗೂ ಜೆಡಿಎಸ್ — ಬಿಜೆಪಿ ಸುಳ್ಳಿನ ನಡುವಿನ ಹೋರಾಟದಲ್ಲಿ ಸತ್ಯವನ್ನೇ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅವರು ಇಂದು ಮಂಡ್ಯ ಲೋಕಸಭಾ ವ್ಯಾಪ್ತಿಯ ಕೆ. ಆರ್ ನಗರ ದಲ್ಲಿ ತಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸ್ಟಾರ್ ಚಂದ್ರು ರವರ ಪರ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ತಮ್ಮ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಗೆದ್ದರೆ ಮಾತ್ರ ನ್ಯಾಯ ಪತ್ರ ಪ್ರಣಾಳಿಕೆಯಲ್ಲಿ ಘೋಷಣೆಯಾಗಿರುವ ಎಲ್ಲಾ ಯೋಜನೆಗಳು ಜಾರಿಯಾಗಲಿವೆ. ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದು ಆಶ್ವಾಸನೆ ನೀಡಿದರು.
ಬಿಜೆಪಿ ಕೇಂದ್ರದಲ್ಲಿ ನರೇಂದ್ರ ಮೋದಿ ಯವರ ನೇತೃತ್ವದಲ್ಲಿ ಹತ್ತು ವರ್ಷ ಆಡಳಿತ ಮಾಡಿದ್ದರೂ ಬಡವರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ, ಅಲ್ಪಸಂಖ್ಯಾತರು, ದಲಿತರಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಬೇಕು. ಅವರು ಚುನಾವಣಾ ಸಂದರ್ಭದಲ್ಲಿ ಹೇಳಿದಂತೆ ನಡೆದುಕೊಂಡಿದ್ದಾರೆಯೇ ಇಲ್ಲವೇ ಎಂದು ವಿಚಾರ ಮಾಡಬೇಕು. ನರೇಂದ್ರ ಮೋದಿ ಅವರ ಹೆಸರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮತಯಾಚನೆ ಮಾಡುತ್ತಿದ್ದಾರೆ. ಮತ ಕೇಳುವ ನೈತಿಕ ಹಕ್ಕು ಅವರಿಗಿದೆಯೇ? ಅಥವಾ ಕಾಂಗ್ರೆಸ್ ಪಕ್ಷಕ್ಕಿದೆಯೇ ? ಎಂದರು.
ದೇಶದ ಪ್ರಧಾನಿಯಾಗಲು ಲಾಯಕ್ಕೇ
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದಾರೆಯೇ? ಯುವಕರನ್ನು ಭ್ರಮಾಲೋಕದಲ್ಲಿ ತೇಲುವಂತೆ ಮಾಡಿದ್ದಾರೆ. ನಿರುದ್ಯೋಗ ದೇಶದಲ್ಲಿ ಬೆಳೆಯುತ್ತಿದೆ. ಉದ್ಯೋಗ ಕೇಳಿದರೆ ಪಕೋಡಾ ಮಾಡುವಂತೆ ಹೇಳಿದ ಇವರು ದೇಶದ ಪ್ರಧಾನಿಯಾಗಲು ಲಾಯಕ್ಕೇ ಎಂದು ಪ್ರಶ್ನಿಸಿದರು.
ಬಿಜೆಪಿ ಮತ ಕೇಳುವ ಹಕ್ಕನ್ನು ಕಳೆದುಕೊಂಡಿದ್ದಾರೆ
ರಾಜೀವ್ ಗಾಂಧಿಯವರು 18 ವರ್ಷ ತುಂಬಿದ ಎಲ್ಲರಿಗೂ ಮತ ಹಾಕಲು ಅವಕಾಶ ಕಲ್ಪಿಸಿದರು. ಅದರ ದುರುಪಯೋಗವನ್ನು ಮಾಡಿಕೊಂಡದ್ದು ಸರಿಯೇ? ಎಂದರು. ಯಾವುದರ ಬೆಲೆ ಇಳಿಸಲಿಲ್ಲ. ಬಿಜೆಪಿ ಮತ ಕೇಳುವ ಹಕ್ಕನ್ನು ಕಳೆದುಕೊಂಡಿದ್ದಾರೆ.
2022 ನೇ ಇಸವಿಗೆ ದುಪ್ಪಟ್ಟು ಮಾಡುವುದಾಗಿ , ಸ್ವಾಮಿನಾಥನ್ ವರದಿ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿ ಮಾಡುವುದಾಗಿ ಹೇಳಿದ್ದರು. ಮನ್ ಮೋಹನ್ ಸಿಂಗ್ ಅವರು 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು. ನನ್ನ ಅಧಿ ಕಾರದ ಅವಧಿಯಲ್ಲಿ 50 ಸಾವಿರವರೆಗಿನ ರೈತರ ಸಾಲವನ್ನು 8165 ಕೋಟಿ ರೂ.ಗಳನ್ನು 27 ಲಕ್ಷ ರೈತ ಕುಟುಂಬಗಳಿಗೆ ಮನ್ನಾ ಮಾಡಿದ್ದೆ ಎಂದು ಸ್ಮರಿಸಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಮಾಡುವ ಗ್ಯಾರಂಟಿ ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಲ್ಲದೆ ಎಂ.ಎಸ್.ಪಿಗೆ ಕಾನೂನು ಜಾರಿ ಮಾಡಲಾಗುವುದು ಎಂದರು.
ಕನ್ನಡಿಗರ ಆಶೀರ್ವಾದ ಇರುವವರೆಗೂ ನನಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ
ಹೆಚ್.ಡಿ.ದೇವೇಗೌಡರು ನಾಚಿಕೆಯಿಲ್ಲದೆ ಒಟ್ಟು ನಾಲ್ಕರಲ್ಲಿ ಮೂರು ಸ್ಥಾನಗಳಲ್ಲಿ ಅವರ ಮನೆಯವರೇ ನಿಂತಿದ್ದಾರೆ. ಕನ್ನಡಿಗರ ಆಶೀರ್ವಾದ ಇರುವವರೆಗೂ ನನಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಹಗಲುಗನಸು ಕಾಣುತ್ತಿದ್ದಾರೆ
ಕಾಂಗ್ರೆಸ್ ಸರ್ಕಾರ ಇದ್ದೇ ಇರುತ್ತದೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಹಗಲುಗನಸು ಕಾಣುತ್ತಿದ್ದಾರೆ. ಅವರಿಗೆ ಅವರ ಕುಟುಂಬದವರನ್ನು ಬಿಟ್ಟರೆ ಬೇರೆ ಯಾರನ್ನೂ ಸಹಿಸುವುದಿಲ್ಲ. ಇದಕ್ಕಾಗಿ ಅವರು ಅಧಿಕಾರಕ್ಕೆ ಬರಬೇಕೇ ಎಂದು ಪ್ರಶ್ನಿಸಿದರು.
ಶಾಸಕ ರವಿಶಂಕರ್ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುತ್ತಾರೆ. ದ್ವೇಷದ, ತೇಜೋವಧೆ ಮಾಡುವ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ರವಿಶಂಕರ್ ಅವರಿಗೆ 4 ವರ್ಷ ಬಲ ತುಂಬಲು ವೆಂಕಟರಮಣ ಗೌಡ ಅವರನ್ನು ಕನಿಷ್ಠ 30 ಸಾವಿರ ಅಂತರದಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ