Karnataka NewsLatestPolitics

*ಪ್ರಧಾನಿ ಮೋದಿಗೆ ಭದ್ರತಾ ಲೋಪ; ಮೊಹಮ್ಮದ್ ನಲಪಾಡ್ ಪೊಲೀಸ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಸಮಾವೇಶ ಮುಗಿಸಿ ತೆರಳುತ್ತಿದ್ದ ವೇಳೆ ಭದ್ರತಾ ಲೋಪವುಂಟಾಗಿದೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಪ್ರಧಾನಿ ಮೋದಿಗೆ ಚೊಂಬು ಪ್ರದರ್ಶಿಸಿದ್ದಾರೆ. ತಕ್ಷಣ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಎನ್ ಡಿಎ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾದರು. ಇದೇ ವೇಳೆ ಅರಮನೆ ಮೈದಾನದ ಹೊರಭಾಗದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಜನರಿಗೆ ಕೇವಲ ಭರವಸೆಗಳನ್ನು ನೀಡಿ ಖಾಲಿ ಚೊಂಬು ಕೊಟ್ಟಿದ್ದಾರೆ ಎಂದು ಪ್ರತಿಭಟನೆ ನಡೆಸುತ್ತಿದ್ದರು.

ಸಮಾವೇಶ ಮುಗಿಸಿ ಅರಮನೆ ಮೈದಾನಿಂದ ಪ್ರಧಾನಿ ಮೋದಿ ವಾಪಾಸ್ ಆಗುತ್ತಿದ್ದಾಗ ಮೊಹಮ್ಮದ್ ನಲಪಾಡ್ ಹಾಗೂ ಇತರ ಕಾರ್ಯಕರ್ತರು ಪ್ರಧಾನಿ ಮೋದಿಗೆ ಚೊಂಬು ಪ್ರದರ್ಶಿಸಿದ್ದಾರೆ. ಈ ಮೂಲಕ ಭದ್ರತಾ ಲೋಪವೆಸಗಿದ್ದಾರೆ ಎನ್ನಲಾಗಿದೆ.

ತಕ್ಷಣ ಪೊಲೀಸರು ಮೊಹಮ್ಮದ್ ನಲಪಾಡ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕೆ ಪಡೆದು, ಠಾಣೆಗೆ ಕರೆದೊಯ್ದಿದ್ದಾರೆ.

ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ಏರುತ್ತಿದ್ದು, ಒಂದೆಡೆ ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ. ಪ್ರಧಾನಿ ಮೋದಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ. ಕಳೆದ ಎರಡು ಚುನವಣೆಗಳಲ್ಲಿ ಘೋಷಿಸಿದ್ದ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ ಜನರಿಗೆ ಚೊಂಬು ಕೊಟ್ಟಿದ್ದಾರೆ ಎಂದು ಚೊಂಬಿನ ಪೋಸ್ಟರ್ ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಕೈಯಲ್ಲಿ ಚೊಂಬು ಹಿಡಿದು ಪ್ರತಿಭಟಿಸುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Related Articles

Back to top button