ನನ್ನ ಮತ್ತು ಡಿ.ಕೆ.ಶಿವಕುಮಾರ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ವಿರೋಧ ಪಕ್ಷಗಳ ಹುನ್ನಾರಕ್ಕೆ ಮಾಧ್ಯಮಗಳು ಆಯುಧವಾಗಿ ಬಳಕೆಯಾಗಬಾರದು
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಿದ್ದರಾಮಯ್ಯ ಅವರ ಹೇಳಿಕೆಯೊಂದು ಭಾರಿ ಚರ್ಚೆಗೆ ಕಾರಣವಾಗುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಾನು ಆ ತರಹ ಹೇಳಿಯೇ ಇಲ್ಲ ಎಂದು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಸಿಎಂ ಅಭ್ಯರ್ಥಿ ಎಂದು ಹೇಳಿಲ್ಲ. ನನ್ನ ಹೇಳಿಕೆಯನ್ನು ಯಾರೋ ತಿರುಚಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೂ ಸಿಎಂ ಹುದ್ದೆ ಆಕಾಂಕ್ಷಿ, ಡಿ.ಕೆ.ಶಿವಕುಮಾರ್ ಕೂಡ ಸಿಎಂ ಹುದ್ದೆ ಆಕಾಂಕ್ಷಿ. ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ಸಿಎಂ ಆಯ್ಕೆಯಾಗಲಿದೆ ಎಂದು ಹೇಳಿದ್ದೇನೆ ಎಂದರು.
ಆದರೆ ನನ್ನ ಹೇಳಿಕೆಯನ್ನು ತಿರುಚಿ ಬೇರೆ ರೀತಿಯಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪೇಕ್ಷೆ ಪಡುವುದು ತಪ್ಪಲ್ಲ. ಆದರೆ ಅಂತಿಮವಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಸಿಎಂ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದರು.
ಹೈಕಮಾಂಡ್ ಡಿ.ಕೆ.ಶಿವಕುಮಾರ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿದರೆ? ಎನ್ನುವ ಪ್ರಶ್ನೆಗೆ, ಆ ರೀತಿ ಮಾಡುವುದಿಲ್ಲ. ಹೈಕಮಾಂಡ್ ಕೂಡ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯ ಆಧರಿಸಿಯೇ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು. ಆದರೆ ಕೆಲವು ಮಾಧ್ಯಮಗಳಲ್ಲಿ, ಹೈಕಮಾಂಡ್ ಡಿ.ಕೆ.ಶಿವಕುಮಾರ ಅವರನ್ನು ಸಿಎಂ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನುವ ರೀತಿಯಲ್ಲಿ ಪ್ರಕಟವಾಗಿದೆ.
ಇದೀಗ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ. ಜೊತೆಗೆ ಸ್ಪಷ್ಟಕರಣ ಪ್ರಕಟಿಸುವಂತೆ ತಪ್ಪು ಪ್ರಕಟಿಸಿದ ಮಾಧ್ಯಮಗಳಿಗೆ ಆಗ್ರಹಿಸಿದ್ದಾರೆ. ಉದ್ದೇಶಪೂರ್ವಕವಾಗಿ ನನ್ನ ಹೇಳಿಕೆ ತಿರುಚಲಾಗಿದೆ. ನನ್ನ ಮತ್ತು ಡಿ.ಕೆ.ಶಿವಕುಮಾರ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ವಿರೋಧ ಪಕ್ಷಗಳ ಹುನ್ನಾರಕ್ಕೆ ಮಾಧ್ಯಮಗಳು ಆಯುಧವಾಗಿ ಬಳಕೆಯಾಗಬಾರದು ಎಂದೂ ಅವರು ಟ್ವೀಟ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ