ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಜಟಾಪಟಿಗೆ ಕಾರಣವಾಯಿತು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ಬಳಿಕ ಪಿಎಸ್ ಐ ನೇಮಕಾತಿ ಅಕ್ರಮದ ಬಗ್ಗೆ ವಿಷಯ ಪ್ರಸ್ತಾಪಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಾಗುತ್ತಿದಂತೆ ಬಿಜೆಪಿ ಸದಸ್ಯರು ಅಡ್ಡಿಪಡಿಸಿದರು. ಇದರಿಂದ ಕೆಂಡ ಕಾರಿದ ಸಿದ್ದರಾಮಯ್ಯ, ಇವರ ಭ್ರಷ್ಟಾಚಾರ ಬಯಲಿಗೆ ಬರುತ್ತೆ ಎಂಬ ಕಾರಣಕ್ಕೆ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಸ್ಪೀಕರ್ ಚರ್ಚೆಗೆ ಅವಕಾಶ ಮಾಡಿಕೊಟ್ಟರು.
ಈ ವೇಳೆ ರಾಜ್ಯ ಸರ್ಕಾರ ಯುವಕರನ್ನು ಲೂಟಿ ಮಾಡುತ್ತಿದೆ. ಲಂಚಕೊಟ್ಟು ಉದ್ಯೋಗ ಪಡೆಯಲು ಆಗಲ್ಲ ಎಂದು ನಮ್ಮ ತಂದೆ-ತಾಯಿಗಳು ಅವರು ಬೆಳೆದಿರುವ ಅಕ್ಕಿ, ಉದ್ದು, ಹೆಸರು, ಕಡಲೆ, ಗೋದಿ, ರಾಗಿಗಳನ್ನು ಪ್ಯಾಕ್ ಮಾಡಿ ಕೊಟ್ಟಿದ್ದಾರೆ. ಇದನು ಸರ್ಕಾರಕ್ಕೆ ತೆಗೆದುಕೊಂಡು ಹೋಗಿ ಕೊಡಿ ಎಂದು ಹೇಳಿದ್ದಾರೆ. ಹಾಗಾಗಿ ನಾನು ಬೆಳಿಗ್ಗೆ ಅಕ್ಕಿ, ಗೋದಿ, ರಾಗಿ, ಬೇಳೆ ಎಲ್ಲವನ್ನು ತಂದು ಇಲ್ಲಿಟ್ಟಿದ್ದೆ. ಆದರೆ ಈಗ ನೋಡಿದರೆ ಅದನ್ನೂ ಯಾರೋ ಎತ್ಕೊಂಡು ಹೋಗಿದ್ದಾರೆ. ರಾಜ್ಯ ಸರ್ಕಾರ ಕಡು ಭ್ರಷ್ಟ ಸರ್ಕಾರ. ಪಿಎಸ್ ಐ ಹಗರಣದಲ್ಲಿ ಕೋಟಿ ಕೋಟಿ ಹಣ ಪಡೆದು ಭ್ರಷ್ಟಾಚಾರ ನಡೆಸಿದೆ ಎಂದು ಕಿಡಿಕಾರಿದರು.
ವಿಪಕ್ಷ ನಾಯಕರ ಆರೋಪಕ್ಕೆ ಅಡ್ಡಬಂದ ಸಿಎಂ ಬೊಮ್ಮಾಯಿ ನಿಮ್ಮ ಕಾಲದಲ್ಲಿ ಹಗರಣ ನಡೆದಿಲ್ಲವೇ? ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಗೊತ್ತಾಗುತ್ತಿದ್ದಂತೆ ತನಿಖೆಗೆ ಆದೇಶ ನೀಡಿದ್ದೇವೆ. ತನಿಖೆ ನಡೆಯುತ್ತಿದೆ. ನಿಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಕ್ಕೆ ನೀವು ಏನು ಮಾಡಿದಿರಿ? ತಪ್ಪಿತಸ್ಥರ ವಿರುದ್ಧ ತನಿಖೆಗೂ ಆದೇಶ ಕೊಡದೇ ಹಗರಣವನ್ನೇ ಮುಚ್ಚಿ ಹಾಕಿಸಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ನಾವು ತನಿಖೆ ಮುಚ್ಚಿ ಹಾಕಿಸಿದ್ದೇವೆ ಎಂದು ಈಗ ಆರೋಪಿಸುತ್ತಿದ್ದಿರೀ ನಮ್ಮ ಸರ್ಕಾರದ ಅವಧಿಯಲ್ಲಿ ಅಕ್ರಮ ನಡೆದಿದ್ದರೆ ಆಗ ವಿಪಕ್ಷದಲ್ಲಿದ್ದ ನೀವು ಏನು ಮಾಡುತ್ತಿದ್ದಿರಿ? ಆಗ ಸುಮ್ಮನಿದ್ದು ಈಗ ನಿಮ್ಮ ಅವಧಿಯಲ್ಲಿಯೂ ಅಕ್ರಮ ನಡೆದಿತ್ತು ಎಂದು ಸಮರ್ಥನೆ ಮಾಡಿಕೊಳ್ಳುವುದು ಎಷ್ಟು ಸರಿ? ಹಗರಣಗಳ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಸಿಎಂ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಮಾತಿಗೆ ಮಾತು ಬೆಳೆಯುತ್ತಿದ್ದರೂ ಸಚಿವರು, ಶಾಕರು ಒಂದೇ ಒಂದು ಮಾತನಾಡದೇ ಮೌನವಾಗಿ ಉಭಯನಾಯಕರ ಜಟಾಪಟಿ ನೋಡುತ್ತಿರುವುದಕ್ಕೆ ಸದನ ಸಾಕ್ಷಿಯಾಯಿತು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹ; ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ
https://pragati.taskdun.com/latest/panchamasali2a-reservationprotestshiggavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ