ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿ ಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಿನ್ನೆ ಒಂದೇ ದಿನ ಇಬ್ಬರು ಅಧಿಕಾರಿಗಳ ಬಂಧನವಾಗಿದೆ. ಪ್ರಕರಣದಲ್ಲಿ ಸರ್ಕಾರವೇ ಶಾಮೀಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಮೊದಲು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಮೇಲಿನವರು ಡಿಮ್ಯಾಂಡ್ ಮಾಡದಿದ್ದರೆ ಅಧಿಕಾರಿಗಳು ಲಂಚ ಪಡೆಯುತ್ತಾರಾ? ಅಥವಾ ಮೇಲಿನಿಂದ ಸೂಚನೆ ಬರದಿದ್ದರೆ ಅಧಿಕಾರಿಗಳು ಕಚೇರಿಯಲ್ಲಿಯೇ ಅಕ್ರಮ ನಡೆಸಲು ಅವಕಾಶ ಕೊಡುತ್ತಾರಾ? ಸರ್ಕಾರವೇ ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿದೆ. ಇದರ ಹೊಣೆ ಹೊತ್ತು ಸರ್ಕಾರದ ಪ್ರಮುಖರಾದ ಸಿಎಂ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಪಿಎಸ್ ಐ ನೇಮಕಾತಿ ಹಗರಣದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ. 50ರಿಂದ 1 ಕೋಟಿ ರೂಪಾಯಿವರೆಗೂ ವಸೂಲಿ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಯಾರ ಯಾರ ಜೇಬಿಗೆ ಎಷ್ಟೆಷ್ಟು ಹೋಗಿದೆ? ಸಿಎಂ ಅವರಿಗೂ ಹೋಗಿದೆಯಾ ಎಂಬುದು ತನಿಖೆಯಿಂದ ಗೊತ್ತಾಗಬೇಕು. ಅಕ್ರಮದಲ್ಲಿ ಸಚಿವ ಅಶ್ವತ್ಥ ನಾಯಾರಣ ಅವರ ಹೆಸರು ಕೇಳಿ ಬಂದಿದೆ. ಅವರ ಬಗ್ಗೆ ಯಾವುದೇ ತನಿಖೆ ನಡೆಸಿಲ್ಲ. ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ. ರಾಜ್ಯಪಾಲರು ತಕ್ಷಣ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇದು ಕರ್ನಾಟಕದ ಆಡಳಿತಕ್ಕೆ ಮಸಿ ಬಳಿಯುವ ಕೆಲಸವಾಗಿದೆ. ಕೋರ್ಟ್ ಆದೇಶದ ಬಳಿಕ ಇಬ್ಬರು ಅಧಿಕಾರಿಗಳ ಬಂಧನವಾಗಿದೆ. ಸರ್ಕಾರವೇ ಪ್ರಕರಣದಲ್ಲಿ ಶಾಮೀಲಾಗಿದೆ ಎಂಬುದು ಖಚಿತ. ಇವರಿಗೆ ಸ್ವಲ್ಪನಾದರೂ ಮಾನ, ಮರ್ಯಾದೆ, ನಾಚಿಕೆ ಇದೆಯೇ? ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದರು.
ಇಷ್ಟು ದೊಡ್ಡ ಹಗರಣ ನಡೆಸಿರುವ ಎಡಿಜಿಪಿಯನ್ನು ಬಂಧಿಸಿದ ಸಿಐಡಿ ಅಧಿಕಾರಿಗಳು ಕೇವಲ ಅರ್ಧಗಂಟೆ ವಿಚಾರಣೆ ಮಾಡಿ ಕೋರ್ಟ್ ಮುಂದೆ ಹಾಜರು ಪಡಿಸಿದರು. ಇದು ಸಾರ್ವಜನಿಕರನ್ನು ಮಾತ್ರವಲ್ಲ ನ್ಯಾಯಾಲಯವಕ್ಕೆ ಕಣ್ಣೊರೆಸುವ ತಂತ್ರ. ಒಂದು ಸಣ್ಣ ಕೇಸ್ ಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರನ್ನು 50 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಇದೆಲ್ಲ ವಿಚಾರಗಳು ಸಾಮಾನ್ಯ ಜನರಿಗೆ ಗೊತ್ತಾಗದ ವಿಚಾರವೇ? ಸರ್ಕಾರದ ದುರುದ್ದೇಶ ಯಾರಿಗೂ ಗೊತ್ತಾಲ್ಲಾ ಎಂದುಕೊಂಡಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವರ ರಾಜೀನಾಮೆ ಕೇಳುವ ಅಧಿಕಾರ ಕಾಂಗ್ರೆಸ್ ಗಿಲ್ಲ; ಡಿಕೆಶಿಗೆ ಟಾಂಗ್ ನೀಡಿದ ಸಿಎಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ