Kannada NewsLatestPolitics

*ಎನ್.ಡಿ. ಎ ಗೆ ಸ್ಪಷ್ಟ ಬಹುಮತ ಬರುವುದಿಲ್ಲ; ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ; ಸಿಎಂ ಸಿದ್ದರಾಮಯ್ಯ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ನರೇಂದ್ರ ಮೋದಿಯವರ ಬಳಿ ಹಣ ಜಾಸ್ತಿ ಇದ್ದರೆ, ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಏಕೆ ತುಂಬಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಅವರು ಇಂದು ಯಾದಗಿರಿಯಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ ನಾಯ್ಕ ರವರ ಪರವಾಗಿ ಮತದಾರರಲ್ಲಿ ಮತ ಯಾಚನೆ ಮಾಡಿ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ನರೇಂದ್ರ ಮೋದಿಯವರ ಬಳಿ ಹಣ ಜಾಸ್ತಿ ಇದ್ದರೆ, ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ತುಂಬಲು ಏನು ಅಡ್ಡಿಯಾಗಿತ್ತು? ಅದನ್ನು ತುಂಬಿದರೆ ಸುಮಾರು 50% ಹಿಂದುಳಿದವರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದವರಿಗೆ ಮೀಸಲಾತಿ ದೊರಕುತ್ತದೆ. ಇನ್ನುಳಿದ 50% ಇತರರಿಗೆ ದೊರಕುತ್ತದೆ . ಅದನ್ನು ಏಕೆ ತುಂಬಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಬಳಿ ಸಂಬಳ ಕೊಡಲು ದುಡ್ಡಿಲ್ಲ ಎನ್ನುವ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ದುಡ್ಡಿಲ್ಲದೇ ಹೋಗಿದ್ದರೆ 8 ತಿಂಗಳಲ್ಲಿ 5 ಗ್ಯಾರಂಟಿ ಗಳನ್ನು ತುಂಬಲು ಸಾಧ್ಯವಾಗುತ್ತಿತ್ತೇ? ವೇತನ ದೊರಕಿಲ್ಲ ಎಂದು ಸರ್ಕಾರಿ ನೌಕರರು ಹೇಳಿದ್ದಾರೆಯೇ ? ಎಂದು ಪ್ರಶ್ನಿಸಿದರು.

ಈ ಮೋದಿ ದೇಶದ ಪ್ರಧಾನಿಯಾಗಿ ಮಹಾನ್ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಇವರ ಸುಳ್ಳುಗಳನ್ನು ದೇಶದ ಜನ ಇನ್ನೂ ಎಷ್ಟು ವರ್ಷ ನಂಬಬೇಕು ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಹತಾಶರಾಗಿದ್ದಾರೆ

ನರೇಂದ್ರ ಮೋದಿಯವರಿಗೆ ದೇಶದಲ್ಲಿ ನಡೆದಿರುವ 2 ಹಂತದ ಚುನಾವಣೆಗಳಲ್ಲಿ ಎನ್.ಡಿ. ಎ ಗೆ ಎಷ್ಟು ಬರಬಹುದೆಂದು ಈಗಾಗಲೇ ಗೊತ್ತಾಗಿದೆ. ಎರಡು ಹಂತದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ. ಎ ಗೆ ಕಡಿಮೆ ಸ್ಥಾನಗಳು ಬರಲಿದೆ ಎನ್ನುವುದು ನರೇಂದ್ರ ಮೋದಿಯವರಿಗೆ ಗೊತ್ತಾಗಿ ಹತಾಶರಾಗಿದ್ದಾರೆ. ಅದಕ್ಕೆ ಕರ್ನಾಟಕಕ್ಕೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾ, ಕೇವಲ ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ. ಕರ್ನಾಟಕದ ಖಜಾನೆ ಖಾಲಿಯಾಗಿದ್ದು ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ ಎಂದು ಸುಳ್ಳು ಹೇಳಿದ್ದಾರೆ ಎಂದರು.

ಗ್ಯಾರಂಟಿ ಗಳಿಂದ ಖಜಾನೆ ಖಾಲಿಯಾಗಿಲ್ಲ

ಗ್ಯಾರಂಟಿ ಯೋಜನೆ ಜಾರಿಯಾದ ನಂತರ ಖಜಾನೆ ಖಾಲಿಯಾಗಿಲ್ಲ. ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿಲ್ಲ. ಪ್ರಧಾನಿಗಳು ಗ್ಯಾರಂಟಿ ಬಗ್ಗೆ ಅಪಹಾಸ್ಯ ಮಾಡಿ ಲಘುವಾಗಿ ಮಾತನಾಡಿದ್ದಾರೆ. ಮೊದಲೇ ಲೆಕ್ಕ ಹಾಕಿಯೇ ನಾವು ಘೋಷಣೆಗಳನ್ನು ಮಾಡಿದ್ದೇವೆ. ವರ್ಷಕ್ಕೆ ಗ್ಯಾರಂಟಿ ಯೋಜನೆಗಳಿಗಾಗಿ 56000 ಕೋಟಿ ರೂಪಾಯಿ ವ್ಯಯವಾಗುತ್ತಿದ್ದು. ಈ ಬಾರಿ ಬಜೆಟ್ ನಲ್ಲಿ 52009 ರೂಪಾಯಿಗಳನ್ನು ಮೀಸಲಿರಿಸಿ ನಾವು ನುಡಿದಂತೆ ನಡೆದಿದ್ದೇವೆ. ಮೋದಿ ಭರವಸೆ ನೀಡಿದ್ದರಲ್ಲಿ ಎಷ್ಟನ್ನು ಈಡೇರಿಸಿದ್ದಾರೆ, ಹತ್ತು ವರ್ಷಗಳಲ್ಲಿ ಏನು ಸಾಧನೆ ಮಾಡಿದ್ದಾರೆ ಎಂದು ಜನರ ಮುಂದಿಡಬೇಕೆ ಹೊರತು ಜನರ ಮುಂದೆ ಸುಳ್ಳು ಹೇಳುವುದನ್ನು ಬಿಡಬೇಕು. ಈ ಸುಳ್ಳುಗಳಿಗೆ ಜನ ಬಿಜೆಪಿಗೆ ತಕ್ಕ ಪಾಠವನ್ನು ಚುನಾವಣೆಯಲ್ಲಿ ಕಲಿಸಲಿದ್ದಾರೆ ಎಂದರು.

ನರೇಂದ್ರ ಮೋದಿಯವರ ರಾಜಕೀಯ ಅಂತ್ಯ ಕಾಲವಿದು. 2014 ರಲ್ಲಿ ಅನೇಕ ಭರವಸೆಗಳನ್ನು ನೀಡಿದರು. 15 ಲಕ್ಷ ರೂಪಾಯಿ ಕಪ್ಪುಹಣ ತಂದು ಪ್ರತಿಯೊಬ್ಬರಿಗೂ ನೀಡುವುದಾಗಿ ಹೇಳಿದರು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ, ಅಗತ್ಯ ವಸ್ತುಗಳ ಬೆಲೆ ಇಳಿಸಿ, ರೂಪಾಯಿ ಬೆಲೆ ಹೆಚ್ಚು ಮಾಡುವುದಾಗಿ ಮಾತು ಕೊಟ್ಟಿದ್ದರು.ಮೋದಿ ಭಾಷಣದ ಅಚ್ಚೇ ದಿನ್ ಭಾರತಕ್ಕೆ ಬರಲಿಲ್ಲ. ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ ಎಂದರು.

ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ

ಮೋದಿ ಆಡಳಿತದ ಹತ್ತು ವರ್ಷಗಳಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಜಾತಿ , ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆದಿದೆ.

ಭಾರತೀಯರನ್ನು ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರ ಹೆಸರಿನಲ್ಲಿ ವಿಭಜಿಸಿ ಬೆಂಕಿ ಹಚ್ಚುವ ಬಿಜೆಪಿ ಕೃತ್ಯದ ವಿರುದ್ಧ, ಸಮಾಜವನ್ನು ಮಾನವೀಯವಾಗಿ ಬೆಸೆಯುವ ಕೆಲಸಕ್ಕೆ ರಾಹುಲ್ ಗಾಂಧಿ ಮುಂದಾದರು. ದೇಶದ ಐಕ್ಯತೆ ಮರು ಸ್ಥಾಪಿಸಲು, ಸಾರ್ವಭೌತ್ವವನ್ನು ಕಾಪಾಡಲು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಮಣಿಪುರದಿಂದ ಮುಂಬೈವರೆಗೆ ಪಾದಯಾತ್ರೆ ಮಾಡಿದರು. ಸಮಾಜ ಬೆಸೆಯುವ ಕೆಲಸ ಮಾಡಿದರು. ಭಾರತ್ ಜೋಡೋ ಹೆಸರಿನಲ್ಲಿ ದೇಶದ ಜನರನ್ನು ಪ್ರೀತಿ ವಿಶ್ವಾಸದಿಂದ ಒಗ್ಗೂಡಿಸುವ ಪ್ರಯತ್ನ ಮಾಡಿದರು ಎಂದು ಶ್ಲಾಘಿಸಿದರು.

ಬಿಜೆಪಿ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿ ವಿರೋಧಿ

ಮೀಸಲಾತಿ ಪರವಾಗಿರುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ . ಬಿಜೆಪಿಯವರು ಎಲ್ಲ ಕಾಲದಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿಯ ವಿರೋಧವಾಗಿ ಕೆಲಸ ಮಾಡಿದ್ದಾರೆ. ಗ್ರಾಮಪಂಚಾಯತಿ, ನಗರಸಭೆ ಸೇರಿದಂತೆ ವಿವಿಧ ಸ್ತರಗಳಲ್ಲಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡುವುದನ್ನು ಬಿಜೆಪಿಯವರು ವಿರೋಧಿಸಿದ್ದರು. ಬಿಜೆಪಿಯ ರಾಮ ಜೋಯಿಸ್ ಅವರು ಈ ಮೀಸಲಾತಿ ನೀಡಿಕೆಯನ್ನು ಸಂವಿಧಾನ ಬಾಹಿರ ಎಂದು ನ್ಯಾಯಾಲಯದಲ್ಕೇ ವಾದಿಸಿದ್ದರು. ಮುಸಲ್ಮಾನರಿಗೆ ಮೀಸಲಾತಿಯನ್ನು ಕಳೆದ 30 ವರ್ಷಗಳಿಂದ ನೀಡಲಾಗುತ್ತಿದೆ. ದಲಿತರಿಗೆ, ಹಿಂದುಳಿದವರಿಗೆ ನೀಡಲಾದ ಮೀಸಲಾತಿಯನ್ನು ರದ್ದುಪಡಿಸಿ ಮುಸಲ್ಮಾನರಿಗೆ ಕಾಂಗ್ರೆಸ್ ನೀಡಲಿದೆ ಎಂದು ಮೋದಿ ನಿರಂತರವಾಗಿ ಸುಳ್ಳು ಹೇಳುತ್ತಾ ಓಡಾಡುತ್ತಿದ್ದಾರೆ.

ಕಳೆದ ಬಾರಿ ರಾಜ್ಯದಿಂದ ಆಯ್ಕೆಯಾದ 25 ಮಂದಿ ಬಿಜೆಪಿ ಸಂಸದರು ರಾಜ್ಯಕ್ಕಾದ ಅನ್ಯಾಯದ ವಿರುದ್ದ ಒಮ್ಮೆಯೂ ಧ್ವನಿ ಎತ್ತಲಿಲ್ಲ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಶಾಸಕ ಚನ್ನಾರೆಡ್ಡಿ, ಸ್ಥಳೀಯ ಕಾಂಗ್ರೆಸ್ ಮುಖಂಡರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಉಪಸ್ಥಿತರಿದ್ದರು.

Related Articles

Back to top button