
ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾವೇರಿ ನಿವಾಸದಲ್ಲಿ ಮುಷ್ಕರ ನಿರತ ಲಾರಿ ಮಾಲಿಕರ ಸಂಘದ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆ ವಿಫಲವಾಗಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಡೆಸಿದ ಮೊದಲ ಸುತ್ತಿನ ಮಾತುಕತೆ ಕೂಡ ವಿಫಲವಾಗಿತ್ತು. ಬಳಿಕ ಲಾರಿ ಮಾಲೀಕರ ಸಂಘದ ಮುಖಂದರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದು, ಎರಡನೇ ಸುತ್ತಿನ ಸಂಧಾನ ಸಭೆ ಕೂಡ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಲಾರಿ ಮಾಲೀಕರು ರಾಜ್ಯಾದ್ಯಂತ ಲಾರಿ ಮುಷ್ಕರ ಮುಂದುವರೆಸಲು ನಿರ್ಧರಿಸಿದ್ದಾರೆ.
ಸಿಎಂ ಜೊತೆಗಿನ ಸಭೆ ಮುಖ್ಯಾಂಶಗಳು:
• ಈ ಬಾರಿ ಬಜೆಟ್ನಲ್ಲಿ ಡಿಸೇಲ್ ಮೇಲಿನ ಸುಂಕ ರೂ.2 ಹೆಚ್ಚಳ ಮಾಡಲಾಗಿದೆ. ಆದರೆ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಡಿಸೇಲ್ ದರ ನಮ್ಮ ರಾಜ್ಯದಲ್ಲಿ ಕಡಿಮೆಯಿದೆ. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮುಷ್ಕರವನ್ನು ಕೈಬಿಡುವಂತೆ ಮುಖ್ಯಮಂತ್ರಿ ಅವರು ಮನವಿ ಮಾಡಿದರು.
• ಲಾರಿ ಮಾಲಿಕರ ಸಂಘದ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಸರ್ಕಾರ ಬಡವರ ಪರವಾಗಿದ್ದು ಸರ್ಕಾರದೊಂದಿಗೆ ಲಾರಿ ಮಾಲಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
• ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಪ್ರತಿ ವರ್ಷ ಸುಮಾರು 14 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. 83 ಸಾವಿರ ಕೋಟಿ ರೂ. ಈ ವರ್ಷ ಬಂಡವಾಳ ವೆಚ್ಚಕ್ಕೆ ಮೀಸಲಿರಿಸಲಾಗಿದೆ.
• ಸಂಚಾರಿ ದಟ್ಟಣೆ ಅವಧಿಯಲ್ಲಿ ನಗರದ ಒಳಗೆ ಲಾರಿಗಳು ಪ್ರವೇಶಿಸುವುದರ ಬಗ್ಗೆ ಇರುವ ನಿರ್ಬಂಧ ತೆರವು ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈ ಕುರಿತಾಗಿ ಇನ್ನೊಮ್ಮೆ ಲಾರಿ ಮಾಲಿಕರ ಸಂಘದೊಂದಿಗೆ ಸಭೆ ನಡೆಸಲಾಗುವುದು ಎಂದರು.
• ಗೃಹ ಸಚಿವ ಜಿ.ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಲಾರಿ ಮಾಲಿಕರ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.