ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿಯವರೇ, ಇಂದಿನ ನಿಮ್ಮ ಭಾಷಣ ಈ ಚುನಾವಣಾ ಪ್ರಚಾರದ ಕೊನೆಯ ಭಾಷಣವಾಗಿರಬಹುದು. ಇಂದಾದರೂ ಸತ್ಯ ಮಾತನಾಡಿ, ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ದ್ವೇಷ ಹುಟ್ಟಿಸಿ ರಾಜಕೀಯ ಲಾಭ ಪಡೆಯುವ ದುಷ್ಟತನವನ್ನು ಕೈಬಿಟ್ಟು ನಿಮ್ಮ ಹತ್ತು ವರ್ಷಗಳ ಸಾಧನೆಯ ಬಗ್ಗೆ ಮಾತನಾಡಿ, ನೀವು ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಮಾಡಿರುವ ಅನ್ಯಾಯ ಮತ್ತು ನಿಮ್ಮ ನಡೆ-ನುಡಿಗಳಲ್ಲಿನ ಹಿಪಾಕ್ರಸಿ ಬಗ್ಗೆ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನರೇಂದ್ರ ಮೋದಿಯವರೇ, ಮಾತುಮಾತಿಗೆ ಕರ್ನಾಟಕಕ್ಕೆ ಯುಪಿಎ ಸರ್ಕಾರ ಇಷ್ಟೇ ಇಷ್ಟು ಕೊಟ್ಟಿದ್ದು, ಎನ್ ಡಿ ಎ ಸರ್ಕಾರ ಎಷ್ಟೊಂದು ಕೊಟ್ಟಿದೆ ಎಂದು ಲೆಕ್ಕ ಹೇಳುತ್ತಿರಲ್ಲಾ? ನಮ್ಮ ಲೆಕ್ಕವನ್ನೂ ಕೇಳಿ. 2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ ರೂ. 24,42,213 ಕೋಟಿ ಆಗಿದ್ದರೂ ಯುಪಿಎ ಸರ್ಕಾರ ಕರ್ನಾಟಕಕ್ಕೆ ನೀಡಿದ್ದ ತೆರಿಗೆ ಪಾಲು ರೂ.35,895 ಕೋಟಿ ಮತ್ತು ಕೇಂದ್ರ ಪುರಸ್ಕೃತ ಯೋಜನೆಯ ಪಾಲು ರೂ. 16,082 ಕೋಟಿ. ಹೀಗೆ ಒಟ್ಟು ರೂ.46,288 ಕೋಟಿ ನೀಡಿದ್ದು ಸುಳ್ಳೇ?
2023-24ನೇ ಸಾಲಿನ ಕೇಂದ್ರ ಬಜೆಟ್ ಗಾತ್ರ ರೂ.45,03,097 ಕೋಟಿ. ಆದರೆ ನಿಮ್ಮ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಹಂಚಿಕೆ,ಕೇಂದ್ರ ಪುರಸ್ಕೃತ ಯೋಜನೆಯ ಪಾಲು ಸೇರಿ ನೀಡಿದ್ದು ಕೇವಲ ರೂ.55,529 ಕೋಟಿ. ಐದು ವರ್ಷಗಳಲ್ಲಿ ಬಜೆಟ್ ಗಾತ್ರ ಹೆಚ್ಚು ಕಡಿಮೆ ದುಪ್ಪಟ್ಟಾದರೂ ಕರ್ನಾಟಕಕ್ಕೆ ನೀಡುವ ಹಣವೂ ದುಪ್ಪಟ್ಟಾಗಿ ಕೇಂದ್ರ ಸರ್ಕಾರ ಕನಿಷ್ಠ ಒಂದು ಲಕ್ಷ ಕೋಟಿಯನ್ನಾದರೂ ನೀಡಬೇಕಾಗಿತ್ತಲ್ಲವೇ? ಈ ಲೆಕ್ಕ ಸುಳ್ಳೇ? ಯುಪಿಎ ಕೊಟ್ಟಿದ್ದು ಹೆಚ್ಚೇ? ಎನ್ ಡಿ ಎ ಕೊಟ್ಟಿದ್ದು ಹೆಚ್ಚೇ?
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಹತ್ತು ವರ್ಷಗಳ ಅವಧಿಯಲ್ಲಿ ಒಟ್ಟು 95,21,493 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ರೂಪಿಸಿ ಖರ್ಚು ಮಾಡಿತ್ತು. ನಿಮ್ಮ ನೇತೃತ್ವದ ಎನ್ ಡಿಎ ಸರ್ಕಾರ ಹತ್ತು ವರ್ಷಗಳ ಅವಧಿಯಲ್ಲಿ ಒಟ್ಟು 282 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಾಡಿ ಖರ್ಚು ಮಾಡಿತ್ತು. ಅಂದರೆ ಬಜೆಟ್ ಗಾತ್ರ ಮೂರು ಪಟ್ಟು ಹೆಚ್ಚು. ಇದು ಸುಳ್ಳೇ? ಬಜೆಟ್ ಗಾತ್ರ ಮೂರು ಪಟ್ಟು ಹೆಚ್ಚಾದಾಗ ಸಾಧನೆಯೂ ಮೂರು ಪಟ್ಟು ಹೆಚ್ಚಾಗಬೇಕಿತ್ತಲ್ಲವೇ? ಎಲ್ಲಿದೆ ನಿಮ್ಮ ಸಾಧನೆ?
2014ರ ಯುಪಿಎ ಸರ್ಕಾರದ ಕಾಲದಲ್ಲಿ ದೇಶದ ಸಾಲ 54 ಲಕ್ಷ ಕೋಟಿ ರೂಪಾಯಿಗಳಾಗಿತ್ತು, ಈಗ ನಿಮ್ಮದೇ ಸರ್ಕಾರ ಹೇಳುವ ಪ್ರಕಾರ ಸಾಲದ ಮೊತ್ತ ಕಳೆದ ಮಾರ್ಚ್ ವೇಳೆಗೆ 172.37 ಲಕ್ಷ ಕೋಟಿ ರೂಪಾಯಿಗಳಾಗಿರುವುದು ಸುಳ್ಳೇ? ಬಜೆಟ್ ಗಾತ್ರ ಮೂರು ಪಟ್ಟು ಹೆಚ್ಚಳ ಸಾಲ ಕೂಡಾ ಮೂರು ಪಟ್ಟು ಹೆಚ್ಚಳ ಇದು ಸುಳ್ಳೇ?
ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿರುವುದು ನಿಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿರಲ್ಲಾ ಮೋದಿಯವರೇ, ಇದರಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಪಾಲೆಷ್ಟು? ರಸ್ತೆ ನಿರ್ಮಾಣ ಗುತ್ತಿಗೆದಾರರ ಸಾಲ ಎಷ್ಟು ಎಂದು ಲೆಕ್ಕ ಯಾಕೆ ಹೇಳುವುದಿಲ್ಲ. ಈ ಹೆದ್ದಾರಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಪಾಲು ನೀಡಿದರೂ ಹೆದ್ದಾರಿ ಟೋಲ್ ಗಳಲ್ಲಿ ಸಂಗ್ರಹಿಸುವ ದುಡ್ಡ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಯಾಕೆ ಹೋಗಬೇಕು? ಕಳೆದ ವರ್ಷ ಟೋಲ್ ಗಳಿಂದ ಸಂಗ್ರಹವಾಗಿರುವ ಹಣದ ಮೊತ್ತ 64,810 ಕೋಟಿ ರೂಪಾಯಿ. ಕರ್ನಾಟಕ ರಾಜ್ಯವೊಂದರಿಂದಲೇ ಸಂಗ್ರಹವಾಗಿರುವ ಟೋ ಲ್ ಹಣ 3,600 ಕೋಟಿ ರೂಪಾಯಿ. ಇದು ಸುಳ್ಳೇ? ಇದರಲ್ಲಿ ನಿಮ್ಮ ಸಾಧನೆ ಏನು?
ಭದ್ರಾ ಮೇಲ್ದಂಡೆ ಯೋಜನೆಗಾಗಿ ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 5300 ಕೋಟಿ ರೂಪಾಯಿ ಕೊಡುವ ಭರವಸೆಯನ್ನು ನಿಮ್ಮ ಸಹದ್ಯೋಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ರ ಬಜೆಟ್ ನಲ್ಲಿಯೇ ಘೋಷಿಸಿದ್ದು ಸುಳ್ಳೇ?
ಹುಬ್ಬಳ್ಳಿ ಧಾರವಾಡದ ಅವಳಿನಗರವೂ ಸೇರಿದಂತೆ ಕಿತ್ತೂರು ಕರ್ನಾಟಕದ ಜನರ ಭಾಗ್ಯದ ಬಾಗಿಲು ತೆರೆಯಬಲ್ಲ ಮಹದಾಯಿ ಯೋಜನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿ ವರ್ಷಗಳೇ ಆಗಿವೆ. ಆದರೆ ನಿಮ್ಮದೇ ನೇತೃತ್ವದ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಅನುಮತಿ ನೀಡದೆ ಸತಾಯಿಸುತ್ತಿರುವುದು ಸುಳ್ಳೇ? ಕೇಂದ್ರ ಸರ್ಕಾರದ ಸಹಯೋಗದ 61 ಯೋಜನೆಗಳಿಗೆ ಸಂಬಂಧಿಸಿದಂತೆ 23 ಇಲಾಖೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಕೃಷ್ಣಾ,ಕಾವೇರಿ, ಮೇಕೆದಾಟು ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಇದು ಸುಳ್ಳೇ?
ನರೇಂದ್ರ ಮೋದಿಯವರೇ, ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ ಬಿಜಲಿ ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಸುತ್ತೇವೆ ಎನ್ನುವುದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೀರಿ.ಕಳೆದ ವರ್ಷದ ಬಜೆಟ್ ನಲ್ಲಿಯೇ ಘೋಷಿಸಿದ್ದ ಈ ಯೋಜನೆ ಸಂಪೂರ್ಣ ಉಚಿತ ಅಲ್ಲ. 1 ಕಿಲೋ ವ್ಯಾಟ್ ಉತ್ಪಾದಿಸುವ ರೂಫ್‌ಟಾಪ್ ಸೋಲಾರ್ ಪ್ಯಾನೆಲ್‌ಗೆ 50000 ರೂ ವೆಚ್ಚವಾಗುತ್ತದೆ. ಈ ಮೊತ್ತವನ್ನು 40% ಹಣವನ್ನು ಖರೀದಿಸುವ ಕುಟುಂಬವೇ ಭರಿಸಬೇಕಾಗುತ್ತದೆ. ಬ್ಯಾಂಕ್‌ಗಳಿಂದ ಸಾಲ ಕೊಡಿಸಲಾಗುತ್ತಿದೆ. ಅಂದರೆ ಸೋಲಾರ್ ಪ್ಯಾನೆಲ್ ಅಳವಡಿಸುವ ವೆಚ್ಚದ ಹೊರೆ ಬಡ ಕುಟುಂಬದ ಮೇಲೆ ಹೊರಿಸಲಾಗಿದೆ.ಮತ್ತೆ ಎಲ್ಲಿಯ ಉಚಿತ? ಇದು ಸುಳ್ಳೇ?ಎಂದು ಪ್ರಶ್ನಿಸಿದ್ದಾರೆ.
ಪ್ರತಿ ರಾಜ್ಯಕ್ಕೊದು ಏಮ್ಸ್ ( ಅಖಿಲಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಮಾದರಿಯಲ್ಲಿ ಏಮ್ಸ್ ಸ್ಥಾಪಿಸುವುದಾಗಿ 2014ರಲ್ಲಿಯೇ ಭರವಸೆ ನೀಡಿದ್ದೀರಿ. ದೇಶದಲ್ಲಿ ಇರುವುದೇ 19 ಏಮ್ಸ್ ಗಳು. ನಮ್ಮ ಹಿಂದುಳಿದ ಜಿಲ್ಲೆಯಾದ ರಾಯಚೂರಿಗೂ ಒಂದು ಕೊಡಿ ಎಂದು ಪತ್ರಗಳ ಮೇಲೆ ಪತ್ರಗಳನ್ನು ಬರೆದೆವು ಇಲ್ಲಿಯ ವರೆಗೆ ಕೊಟ್ಟಿಲ್ಲ ಎನ್ನುವುದು ಸುಳ್ಳೇ?. ದರ್ಬಾಂಗ್, ಮದುರೈಗಳಲ್ಲಿ ಏಮ್ಸ್ ಸ್ಥಾಪನೆಯಾಗಿವೆ ಎಂದು ನೀವೇ ಹೇಳಿದಿರಿ. ಆದರೆ ಮಾಧ್ಯಮದ ವರದಿಗಳು ಇದು ಸುಳ್ಳು ಎಂದು ಹೇಳುತ್ತಿವೆ ಇದು ಸುಳ್ಳೇ?
ನರೇಂದ್ರಮೋದಿಯವರೇ, 70 ವರ್ಷ ಮೇಲ್ಪಟ್ಟವರಿಗೂ ಆಯಷ್ಮಾನ್ ಸೇವೆ ವಿಸ್ತರಿಸಲಾಗುವುದು ಎನ್ನುವುದು ಪ್ರಣಾಳಿಕೆಯಲ್ಲಿನ ನಿಮ್ಮ ಭರವಸೆ. ವಾಸ್ತವ ಸಂಗತಿ ಎಂದರೆ ಆಯುಷ್ಮಾನ್ ಯೋಜನೆಯ ಆರೋಗ್ಯ ವಿಮೆಯಲ್ಲಿ ಅಕ್ರಮ ನಡೆದಿರುವುದನ್ನು ಸಿಎಜಿಯೇ ವರದಿ ಮಾಡಿದೆ. 8.2 ಲಕ್ಷ ರೋಗಿಗಳು ಆಧಾರ್, ಬಯೋಮೆಟ್ರಿಕ್ ದಾಖಲೆಗಳಿಲ್ಲದೆ ಎರಡಕ್ಕಿಂತ ಹೆಚ್ಚು ಬಾರಿ ಚಿಕಿತ್ಸೆ ಪಡೆದಿದ್ದನ್ನು ಗುರುತಿಸಿತ್ತು. ನಕಲಿ ವಿಮೆಗಳಿಗೆ ರೂ.1697 ಕೋಟಿ ವರೆಗೆ ಸರ್ಕಾರದಿಂದ ಹಣ ನೀಡಲಾಗಿದೆ ಇದು ಸುಳ್ಳೇ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕ ರೂ.6000 ಸಹಾಯಧನವನ್ನು ನೀಡುತ್ತಿದ್ದು, ರೈತರಿಗೆ ಆರ್ಥಿಕ ಬೆಂಬಲ ನೀಡುವುದಕ್ಕೆ ಬದ್ಧರಾಗಿದ್ದೇವೆ ಎನ್ನುವುದನ್ನು ಹೇಳುತ್ತಲೇ ಇದ್ದೀರಿ. ಆದರೆ ಕಳೆದ ಐದು ವರ್ಷಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 11 ಕೋಟಿ ರೈತರಿಗೆ ಸಹಾಯ ಧನ ನೀಡಲಾಗಿದೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ಕೃಷಿ ಸಚಿವರೇ ರಾಜ್ಯಸಭೆಯಲ್ಲಿ 4 ಲಕ್ಷ ಅನರ್ಹ ರೈತರಿಗೆ ರೂ. 3000 ಕೋಟಿ ಸಹಾಯ ಧನ ವಿತರಣೆಯಾಗಿದ್ದು, ಮರಳಿ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದ್ದರು. ದೇಶದಲ್ಲಿ 55% ಭೂ ರಹಿತ ರೈತರಿದ್ದು, ಅವರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎನ್ನುವುದು ಮತ್ತೊಂದು ದುರಂತ! ಇವೆಲ್ಲ ಸುಳ್ಳೇ?
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ತಂತ್ರಜ್ಞಾನದ ಬಳಕೆಯ ಮೂಲಕ ಮತ್ತಷ್ಟು ಬಲಪಡಿಸಿ ನಿಖರ ಪರಿಶೀಲನೆ ನಡೆಸಿ ಪರಿಹಾರದ ಹಣವನ್ನು ವೇಗವಾಗಿ ಪಾವತಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೀರಿ, ವಾಸ್ತವ ಸಂಗತಿ ಎಂದರೆ ಹಿಂದಿನ ಅವಧಿಯಲ್ಲಿ 5 ವರ್ಷಗಳಲ್ಲಿ ಈ ಯೋಜನೆಯಿಂದ ರೈತರಿಗೆ ಆದ ಲಾಭಕ್ಕಿಂತ ವಿಮಾ ಕಂಪನಿಗಳಿಗೆ ಆದ ಲಾಭವೇ ಹೆಚ್ಚು. ಕೃಷಿ ಸಚಿವ ತೋಮರ್ ಅವರು ರಾಜ್ಯಸಭೆಯಲ್ಲಿ ಉತ್ತರಿಸಿರುವಂತೆ, 2016-17ರಿಂದ 2021-22ರ ಅವಧಿಯಲ್ಲಿ ರೈತರು ರೂ. 1.59 ಲಕ್ಷ ಪ್ರೀಮಿಯಂ ಹಣ ಪಾವತಿಸಿದ್ದರು. ಈ ಪೈಕಿ ವಿಮಾ ಕಂಪನಿಗಳು ರೂ. 1.19 ಲಕ್ಷ ಕೋಟಿ ಹಣವನ್ನು ರೈತರಿಗೆ ಪಾವತಿಸಿದ್ದವು. ಅಂದರೆ ರೂ.40000 ಕೋಟಿಗಳಷ್ಟು ಲಾಭಗಳಿಸಿದ್ದವು ಎಂದು ಅಂಕಿ ಅಂಶ ಹಂಚಿಕೊಂಡಿದ್ದರು. ಇದು ಸುಳ್ಳೇ?
ನರೇಂದ್ರಮೋದಿಯವರೇ, ಮೂರು ಕೋಟಿ ಲಖ್‌ಪತಿದೀದಿಗಳನ್ನು ಮಾಡಲಾಗುವುದು.ಈಗಾಗಲೇ 1 ಕೋಟಿ ಮಹಿಳೆಯರನ್ನು ಲಖ್‌ಪತಿ ದೀದಿಗಳನ್ನಾಗಿ ಮಾಡಿದ್ದು, ಮೂರು ಕೋಟಿ ಗ್ರಾಮೀಣ ಮಹಿಳೆಯರನ್ನು ಲಖ್‌ಪತಿ ದೀದಿಗಳನ್ನಾಗಿ ಸಬಲೀಕರಿಸಲಾಗುವುದು. ಎನ್ನುವುದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೀರಿ.ವಾಸ್ತವ ಸಂಗತಿ ಎಂದರೆ ಸ್ವಸಹಾಯ ಗುಂಪುಗಳಲ್ಲಿರುವ ಮಹಿಳೆಯರಿಗೆ ನೀಡಲಾಗಿದೆ ಎಂದು ಹೇಳಲಾದ ಈ ನೆರವನ್ನು ಪಡೆದ ಒಬ್ಬರೇ ಒಬ್ಬ ಕರ್ನಾಟಕದ ಮಹಿಳೆಯ ಕುರಿತು ಮಾಹಿತಿ ಲಭ್ಯವಾಗಿಲ್ಲ. ಇದು ಸುಳ್ಳೇ?
ಹದಿನೆಂಟು ಸಾವಿರ ಕೋಟಿ ರೂಪಾಯಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಅನುದಾನ ನೀಡದೆ ನಿರ್ಲಕ್ಷಿಸಿರುವುದು ಸುಳ್ಳೇ? ರಾಜ್ಯದ ಪ್ರಮುಖ ರೈಲ್ವೇ ಯೋಜನೆಗಳಿಗೆ ಅನುದಾನ ನೀಡದೆ ಮೂಲೆಗೆ ತಳ್ಳಿರುವುದು ಸುಳ್ಳೇ? ರಾಜ್ಯಕ್ಕೊಂದು ಏಮ್ಸ್ ಮಾದರಿ ಆಸ್ಪತ್ರೆ ಎಂದು ಘೋಷಿಸಿದ್ದನ್ನೇ ನಂಬಿ ರಾಯಚೂರಿನಲ್ಲಿಯಾದರೂ ಅಂತಹದ್ದೊಂದು ಆಸ್ಪತ್ರೆ ಮಾಡಿ ಕೇಳಿದರೂ ಕೊಡದೆ ಇರುವುದು ಸುಳ್ಳೇ?
ನರೇಂದ್ರ ಮೋದಿಯವರೇ, ಕೇಂದ್ರ ಹಣಕಾಸು ಆಯೋಗದ ವಿರುದ್ದ ಮೊದಲು ಮಾತನಾಡಿದ್ದೇ . ‘’ಗುಜರಾತ್ ರಾಜ್ಯ ಕೇಂದ್ರ ಸರ್ಕಾರಕ್ಕೆ ರೂ.60,000 ಕೋಟಿ ನೀಡುತ್ತಿದೆ, ಇದರಲ್ಲಿ ನಮಗೆ ವಾಪಸ್ ಬಂದದ್ದು ಎಷ್ಟು? ಮತ್ತೆ ನಾವು’ಕೊಟ್ಟಿದ್ದು ನಾವು ಕೊಟ್ಟಿದ್ದು ಎಂದು ಹೇಳುತ್ತಲೇ ಇರುತ್ತೀರಾ? ಗುಜರಾತ್ ಭಿಕ್ಷುಕ ರಾಜ್ಯವೇ? ಎಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಶ್ನಿಸಿದ್ದು ಸುಳ್ಳೇ?
ನರೇಂದ್ರಮೋದಿಯವರೇ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯತ್ತಿದ್ದಾಗ ‘’ ಯುಪಿಎ ಸರ್ಕಾರ ಮತ್ತು ರೂಪಾಯಿ ಉರುಳಿ ಕೆಳಗೆ ಬೀಳುವುದರದಲ್ಲಿ ಪೈಪೋಟಿ ನಡೆಸುವಂತಿದೆ ಎಂದ ವ್ಯಂಗ್ಯವಾಡಿದ ನಿಮಗೆ ಈಗ ರೂಪಾಯಿ ಮೌಲ್ಯ ಪಾತಾಳಕ್ಕೆ ಇಳಿದಿರುವುದು ಗಮನಕ್ಕೆ ಬಂದಿಲ್ಲವೇ? ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ‘’ ಆಧಾರ್ ಕಾರ್ಡ್ ಗೆ ಭವಿಷ್ಯದ ಮುನ್ನೋಟವೇ ಇಲ್ಲ, ಇದು ಕೇವಲ ರಾಜಕೀಯ ಗಿಮಿಕ್ ಎಂದು ಟೀಕಿಸಿದ್ದವರು ನೀವೇ ಅಲ್ಲವೇ? ಈಗ ಪ್ರಧಾನಿಯಾಗಿ ಆಧಾರ್ ಗುರುತಿನ ಚೀಟಿಯ ಪ್ರಬಲ ಪ್ರತಿಪಾದಕರಾಗಿ ವಾದ ಮಾಡುತ್ತಿರುವವರು ನೀವೇ ಅಲ್ಲವೇ? ಎಂದು ಕೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ