*ಪ್ರವಾಹ, ಜನರ ಸಮಸ್ಯೆ ಬಗ್ಗೆ ಚಕಾರವೆತ್ತದ ಬಿಜೆಪಿ-ಜೆಡಿಎಸ್: ಸರ್ಕಾರಕ್ಕೆ ಮಸಿ ಬಳಿಯಲು ವಿಪಕ್ಷಗಳ ಕುಟಿಲ ತಂತ್ರ; ಸಿಎಂ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಎರಡು ವಾರಗಳ ಕಾಲ ನಡೆದ ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳು ಜನರ ಸಮಸ್ಯೆ ಬಗ್ಗೆ ಚಕಾರವೆತ್ತಿಲ್ಲ. ಮಳೆ ಅನಾಹುತ, ಪ್ರವಾಹದ ಬಗ್ಗೆ ಚರ್ಚೆ ಮಾಡಿಲ್ಲ. ರಾಜ್ಯದ ಜನತೆಯ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಕೇವಲ ರಾಜಕೀಯ ದುರುದ್ದೇಶಕ್ಕಾಗಿ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಅಧಿವೇಶನದಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರು ಕೇವಲ ಪ್ರತಿಭಟನೆಯಲ್ಲಿ ಕಾಲ ಕಳೆದಿದ್ದಾರೆ. ಮುಡಾ ಅಕ್ರಮ ಆರೋಪ ಮಾಡಿ ಆಧಾರ ರತಿಹತ ಕಾನೂನು ಬಾಹಿರವಾಗಿ ನಿಲುವಳಿ ಮಂಡಿಸಿದರು. ಇದರಿಂದ ನಿಯಮ ಉಲ್ಲಂಘನೆಯ ಕೆಟ್ಟ ಸಂಪ್ರದಾಯಕ್ಕೆ ಅವಕಾಶವಾಗುತ್ತದೆ ಎಂಬ ಕಾರಣಕ್ಕೆ ಸ್ಪೀಕರ್ ಯು.ಟಿ.ಖಾದರ್ ಚರ್ಚೆಗೆ ಅವಕಾಶ ನೀಡಲಿಲ್ಲ. ಈ ಬಗ್ಗೆ ಸ್ಪೀಕರ್ ಸದನದಲ್ಲಿಯೇ ಸ್ಪಷ್ಟ ಪಡಿಸಿದ್ದಾರೆ. ಆದಾಗ್ಯೂ ಸರ್ಕಾರಕ್ಕೆ ಮಸಿ ಬಳಿಯುವ ಯತ್ನವನ್ನು ಬಿಜೆಪಿಗರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಹೊರತಾಗಿಯೂ ಸೋಲನುಭವಿಸಿದ ಕಾರಣಕ್ಕೆ ಹತಾಷರಾಗಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ತೆರೆದ ಪುಸ್ತಕದಂತಿದೆ. ಹಾಗಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಜನರ ಮನ ಗೆಲ್ಲಬೇಕು ಎಂಬ ಕಾರಣಕ್ಕೆ ಬಿಜೆಪಿಯವರು ವಾಮಮಾರ್ಗದ ಮೂಲಕ ಕುಟಿಲ ತಂತ್ರ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ